ಬಂಕಾಪುರ: ಕಾಲೇಜ್‌ನಿಂದ ಮನೆಗೆ ಹೋಗುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿನಿಯನ್ನು ಕಾರಿನಲ್ಲಿ ಅಪಹರಿಸಿ ಕಾಡಿನಲ್ಲಿ ಅತ್ಯಾಚಾರಗೈದು ವಿಡಿಯೋ ಮಾಡಿದ ಘಟನೆ ತಾಲೂಕಿನ ತಡಸ ಪೊಲೀಸ್ ಠಾಣೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ತಾಲೂಕಿನ ಮಮದಾಪುರ ತಾಂಡಾದ ಅಭಿಷೇಕ ಲಕ್ಷ್ಮಣ ಬೆಂಡಲಗಟ್ಟಿ ಹಾಗೂ ಪ್ರವೀಣ ಲಮಾಣಿ ಆರೋಪಿಗಳು.
ಘಟನೆ ವಿವರ: ಶಿಗ್ಗಾಂವಿ ಪಟ್ಟಣದ ಕಾಲೇಜ್‌ನಲ್ಲಿ ವಿದ್ಯಾರ್ಥಿನಿಯಾಗಿರುವ ನೊಂದ ಅಪ್ರಾಪ್ತ ಬಾಲಕಿ ಜು. 17ರಂದು ಶಿಗ್ಗಾಂವಿಯಿಂದ ಬಸ್‌ನಲ್ಲಿ ಬಂದು ಕುನ್ನೂರ ಗ್ರಾಮದಲ್ಲಿ ಇಳಿದುಕೊಂಡು ಸಮೀಪದ ತನ್ನ ಊರಿಗೆ ನಡೆದುಕೊಂಡು ಹೋಗುತ್ತಿದ್ದಾಗ ಕಾರಿನಲ್ಲಿ ಬಂದ ಆರೋಪಿಗಳು ಬಾಲಕಿಯ ಬಾಯಿಗೆ ಬಟ್ಟೆ ಕಟ್ಟಿ ಕಾರಿನಲ್ಲಿ ಹಾಕಿಕೊಂಡು ಸಮೀಪದ ಕಾಡಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಲ್ಲದೆ, ಅದನ್ನು ವಿಡಿಯೋ ಮಾಡಿ ಯಾರಿಗಾದರೂ ಹೇಳಿದರೆ ವಿಡಿಯೋ ಹರಿಬಿಡುವುದಾಗಿ ಬೆದರಿಕೆ ಹಾಕಿ ಪದೇಪದೆ ಕಿರುಕುಳ ಕೊಡುತ್ತಿದ್ದಾನೆ ಎಂದು ಬಾಲಕಿಯ ತಾಯಿ ದೂರಿನಲ್ಲಿ ತಿಳಿಸಿದ್ದಾಳೆ.
ಈ ಕುರಿತು ಗುರುವಾರ ಪ್ರಕರಣ ದಾಖಲಿಸಿಕೊಂಡಿರುವ ತಡಸ ಪಿಎಸ್‌ಐ ಪರಶುರಾಮ ನೀರೊಳ್ಳಿ ಆರೋಪಿ ಅಭಿಷೇಕ ಲಮಾಣಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.