ಶಿವಮೊಗ್ಗ: ಬಿಜೆಪಿಯಲ್ಲಿ ಇದೀಗ ಸಿದ್ಧಾಂತಗಳಿಗೆ ಜಾಗವಿಲ್ಲ, ಹಿಂದುತ್ವವೂ ಇಲ್ಲ. ಕುಟುಂಬ ಮತ್ತು ಹೊಂದಾಣಿಕೆ ರಾಜಕಾರಣ ಮೇಲಾಗಿದೆ. ಕೆಲವರ ಹಿತಾಸಕ್ತಿಯಿಂದ ಪಕ್ಷ ಹಾಳಾಗುತ್ತಿದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಬೇಸರ ವ್ಯಕ್ತಪಡಿಸಿದರು.
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪುತ್ರ ಭರತ್‌ಗೆ ಶಿಗ್ಗಾಂವಿ ಕ್ಷೇತ್ರದ ಉಪಚುನಾವಣೆಯಲ್ಲಿ ಟಿಕೆಟ್ ನೀಡಿದ್ದಕ್ಕೆ ನನಗೆ ಬೇಸರವಿಲ್ಲ. ಆದರೆ ತಾರತಮ್ಯ ಮಾಡುವುದು ಸರಿಯಲ್ಲ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಕುಟುಂಬ ರಾಜಕಾರಣ ನಿರ್ಮೂಲನೆ ಮಾಡುವ ಮೂಲಕ ದೇಶವನ್ನು ಕಾಂಗ್ರೆಸ್ ಮುಕ್ತಗೊಳಿಸುವ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಆದರೆ ಕಾಂಗ್ರೆಸ್‌ನಲ್ಲಿದ್ದ ಕುಟುಂಬ ರಾಜಕಾರಣ ಇದೀಗ ಬಿಜೆಪಿಯಲ್ಲೂ ಶುರುವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿಯಲ್ಲಿ ಕುಟುಂಬ ರಾಜಕಾರಣದಿಂದ ಬೇಸತ್ತು ನಾನು ಮಾತ್ರ ಹೊರಗೆ ಬಂದಿದ್ದೇನೆ. ನನ್ನಂತಹ ಇನ್ನೂ ಸಾವಿರಾರು ಕಾರ್ಯಕರ್ತರು ನೋವು ಅನುಭವಿಸುತ್ತಿದ್ದಾರೆ. ಪಕ್ಷವನ್ನು ಕಟ್ಟಿ ಬೆಳೆಸಿದವರು ಸಾಕಷ್ಟು ಜನರಿದ್ದಾರೆ. ಗ್ರಾಪಂ ಸದಸ್ಯ ಸ್ಥಾನ ಗೆಲ್ಲುವ ನಿರೀಕ್ಷೆಯೂ ಇರಲಿಲ್ಲ. ಆದರೆ ಇಂದು ಪಕ್ಷ ದೊಡ್ಡ ಮಟ್ಟಕ್ಕೆ ಬೆಳೆದು ದೇಶದ ಚುಕ್ಕಾಣಿ ಹಿಡಿದಿದೆ. ಆದರೆ ಕೆಲವರು ಪಕ್ಷವನ್ನು ಮೂಲೆಗುಂಪು ಮಾಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ದೂರಿದರು.
ರಾಜಕಾರಣದಲ್ಲಿ ಯಾರೂ ಶಾಶ್ವತ ಮಿತ್ರರಲ್ಲ, ವೈರಿಗಳೂ ಅಲ್ಲ. ಅದು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಂಡುಬರುತ್ತಿದೆ. ಚನ್ನಪಟ್ಟಣದಲ್ಲಿ ಸಿ.ಪಿ.ಯೋಗೀಶ್ವರ್ ಪಕ್ಷ ಬಿಟ್ಟು ಕಾಂಗ್ರೆಸ್ ಸೇರಿರುವುದು ಹೊಸದಲ್ಲ. ಇದು ರಾಜಕೀಯದಲ್ಲಿ ಸಾಮಾನ್ಯ. ಆದರೆ ಸಿದ್ಧಾಂತ ಬಿಟ್ಟು ರಾಜಕಾರಣ ಮಾಡುವುದು ಸರಿಯಲ್ಲ ಎಂದರು.