ಚಿತ್ರದುರ್ಗ: ಬೆದರಿಕೆ ಪತ್ರಗಳಿಗೆ ಅಂಜದಿರಿ, ನಿಮ್ಮ ಬೆನ್ನ ಹಿಂದೆ ನಾವಿದ್ದೇವೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹಾಗೂ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಅವರು ಸೋಮವಾರ ಸಾಹಿತಿ ಬಿ.ಎಲ್.ವೇಣು ಅವರಿಗೆ ಧೈರ್ಯ ತುಂಬಿದರು.
ನಗರದ ಕೆಳಗೋಟೆಯಲ್ಲಿರುವ ತಮ್ಮ ನಿವಾಸಕ್ಕೆ ಭೇಟಿ ನೀಡಿದ್ದ ಇಬ್ಬರು ಮುಖಂಡರ ನೈತಿಕ ಬೆಂಬಲಕ್ಕೆ ಪ್ರತಿಕ್ರಿಯಿಸಿದ ವೇಣು, ಮೂರಲ್ಲ ನೂರು ಬೆದರಿಕೆ ಪತ್ರಗಳು ಬಂದರೂ ಎದೆಗುಂದುವುದಿಲ್ಲ ಎಂದರು.
ರಾಜ್ಯದ ಹಲವು ಸಾಹಿತಿ, ಪ್ರಗತಿಪರ ಚಿಂತಕರಿಗೆ ಬೆದರಿಕೆ ಪತ್ರಗಳು ಬರುತ್ತಿದ್ದರೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತ ನಾಡುತ್ತಿಲ್ಲ. ಸಹಿಷ್ಣು ಹಿಂದು ಹೆಸರಿನಲ್ಲಿ ಪತ್ರ ಬರೆಯುತ್ತಿರುವವರನ್ನು ಪತ್ತೆ ಮಾಡಲು ಇಷ್ಟು ದಿನ ಬೇಕಿತ್ತೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾ ರಕ್ಷಣಾಧಿಕಾರಿ ಕೆ.ಪರಶುರಾಮ ಭೇಟಿ ನೀಡಿ, ನನಗೆ ಭದ್ರತೆ ಒದಗಿಸುವುದಾಗಿ ತಿಳಿಸಿದ್ದಾರೆ. ನಿವಾಸಕ್ಕೆ ಸಿಸಿ ಕ್ಯಾಮರಾ ಹಾಕಿಸಿದ್ದಾರೆ. ಗನ್‌ಮೆನ್ ಕೂಡ ಕೊಡುವುದಾಗಿ ಹೇಳಿದ್ದಾರೆ. ಆದರೆ ಅಂಗರಕ್ಷಕರ ಭದ್ರತೆ ನಿರಾಕರಿಸಿದ್ದೇನೆ. ಮನೆಯಿಂದ ಹೊರಕ್ಕೆ ಹೋಗುವಾಗ ಪೊಲೀಸರಿಗೆ ತಿಳಿಸಿ ಎಂದು ಹೇಳಿದ್ದಾರೆ. ಎಂಥ ಬೆದರಿಕೆ ಬಂದರೂ ನನ್ನ ತತ್ವ, ಸಿದ್ಧಾಂತಗಳಿಂದ ಹಿಂದೆ ಸರಿಯುವುದಿಲ್ಲ. ಲೇಖನಿಗೆ ವಿಶ್ರಾಂತಿ ಕೊಡುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಆಂಜನೇಯ ಅವರು, ವೇಣು ಅವರೇ ನಿಮ್ಮ ಜೊತೆ ನಾವಿದ್ದೇವೆ ಎದೆಗುಂದಬೇಡಿ. ವ್ಯವಸ್ಥೆ ಕೆಡಿಸುವ ಸಮಾಜಘಾತಕರನ್ನು ಹತ್ತಿಕ್ಕಲು ನಿಮ್ಮ ಲೇಖನ ಝ ಳಪಿಸಿ. ಅನ್ನಿಸಿದ್ದನ್ನು ಹೇಳುವ ಅಧಿಕಾರ, ಅವಕಾಶವನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರು ಕೊಟ್ಟಿದ್ದಾರೆ. ಬೆದರಿಕೆ ಪತ್ರಗಳನ್ನು ಬರೆಯುತ್ತಿರುವವರನ್ನು ಸರ್ಕಾರ ಕೂಡಲೇ ಪತ್ತೆ ಮಾಡಬೇಕೆಂದರು.
ಎಸ್ಪಿಗೆ ಕರೆ ಮಾಡಿದ ರಘುಮೂರ್ತಿ
ರಘುಮೂರ್ತಿ ಅವರು ಸ್ಥಳದಲ್ಲೇ ಎಸ್ಪಿ ಅವರಿಗೆ ಕರೆ ಮಾಡಿ ತನಿಖೆ ಪ್ರಗತಿ ವಿಚಾರಿಸಿದರು. ಪ್ರಕಣದ ಕುರಿತಂತೆ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಶಿವಮೊಗ್ಗ, ಅಜ್ಜಂಪುರ ಮತ್ತಿತರ ಕಡೆಗಳಿಂದ ಪತ್ರಗಳನ್ನು ಹಾಕಲಾಗಿದೆ. ಇದಕ್ಕೆ ಸಂಬಂಧಿ ಸಿದಂತೆ ಸಿಸಿ ಕ್ಯಾಮರಾಗಳ ಪರಿಶೀಲನೆ ನಡೆದಿದೆ. ಬರಹಗಳ ಸ್ಯಾಂಪಲ್ ಅನ್ನು ಪರೀಕ್ಷೆಗೆ ಕಳಿಸಲಾಗಿದೆ. ಪ್ರಕರಣ ಸವಾಲಿನಿಂದ ಕೂಡಿದ್ದರೂ, ತಪ್ಪಿತಸ್ಥರನ್ನು ಶೀಘ್ರ ಪತ್ತೆ ಹಚ್ಚುವುದಾಗಿ ಎಸ್ಪಿ ಪರಶುರಾಮ್ ವಿಶ್ವಾಸ ವ್ಯಕ್ತಪಡಿಸಿದರು.