ಚಿಕ್ಕೋಡಿ ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿದರು. ಸಂಸದ ಅಣ್ಣಾಸಾಹೇಬ ಜೊಲ್ಲೆ ಇದ್ದರು. 
ಜಿಲ್ಲೆ

ಬೆದರಿಕೆಗೆ ಅಂಜದೆ ಕೆಲಸ ಮಾಡಿ

ಚಿಕ್ಕೋಡಿ: ಬೆಂಗಳೂರಿನ ಆಶಾ ಕಾರ್ಯಕರ್ತೆ ಕೃಷ್ಣವೇಣಿ ಅವರ ಮೇಲೆ ಹಲ್ಲೆ ನಡೆಸಿದ್ದು ಖಂಡನೀಯ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.

ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಕರೊನಾ ಕುರಿತು ಮಾಹಿತಿ ಕಲೆ ಹಾಕಲು ಆಶಾ ಕಾರ್ಯಕರ್ತೆಯರು ಮನೆಗೆ ಬರುತ್ತಾರೆ. ಅವರಿಗೆ ಸಂಪೂರ್ಣ ಮಾಹಿತಿ ನೀಡಿದರೆ ಸೋಂಕಿತರ ಕುರಿತು ಸರ್ಕಾರಕ್ಕೆ ಮಾಹಿತಿ ಲಭ್ಯವಾಗಿ ಕರೊನಾ ಹರಡುವುದನ್ನು ತಡೆಯಬಹುದಾಗಿದೆ. ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ನಡೆಸುವುದು ಮತ್ತು ಅಸಭ್ಯವಾಗಿ ವರ್ತನೆ ಮಾಡುವುದನ್ನು ನಿಲ್ಲಿಸಬೇಕು ಎಂದರು. ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಧೈರ್ಯದಿಂದ ಮನೆ ಮನೆಗೆ ಹೋಗಿ ಜಾಗೃತಿ ಮೂಡಿಸಿ ಸಂಶಯಾಸ್ಪದ ವ್ಯಕ್ತಿ ಕಂಡು ಬಂದರೆ ಸರ್ಕಾರಕ್ಕೆ ಮಾಹಿತಿ ನೀಡಬೇಕು. ನಿಮ್ಮೊಂದಿಗೆ ನಾವಿದ್ದೇವೆ, ಸರ್ಕಾರ ಇದೆ. ಯಾವುದೇ ಬೆದರಿಕೆಗೆ ಹೆದರಬಾರದು ಎಂದರು.

ಕರೊನಾ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಮೊದಲ ಬಾರಿಗೆ ಕರ್ಫ್ಯೂ ಜಾರಿ ಮಾಡಿದಾಗ ಪೊಲೀಸ್, ವೈದ್ಯರು, ಪೌರ ಕಾರ್ಮಿಕರಿಗೆ ದೇಶದ ಜನರು ಚಪ್ಪಾಳೆ ತಟ್ಟಿ ಅಭಿನಂದಿಸಿದರು. ಏ. 5ರಂದು ರಾತ್ರಿ 9 ಗಂಟೆಗೆ ಮನೆಯ ಮುಂದೆ ಅಥವಾ ಬಾಲ್ಕನಿಯಲ್ಲಿ ನಿಂತು 9 ನಿಮಿಷಗಳ ಕಾಲ ಮೊಂಬತ್ತಿ, ದೀಪ ಬೆಳಗಿಸಿ ಒಗ್ಗಟ್ಟು ಪ್ರದರ್ಶನ ಮಾಡಬೇಕಿದೆ ಎಂದರು. ಬೆಳಗಾವಿ ಜಿಲ್ಲೆಯಲ್ಲಿ 527 ಜನರ ಮೇಲೆ ನಿಗಾ ವಹಿಸಲಾಗಿತ್ತು. ಹೋಂ ಕ್ವಾರಂಟೈನ್‌ನಲ್ಲಿಟ್ಟಿದ್ದ 184 ಜನರ ಪೈಕಿ 14 ಜನರು ಯಾವುದೇ ಸಮಸ್ಯೆ ಇರದಿರುವುದರಿಂದ ಮನೆಗೆ ಕಳುಹಿಸಲಾಗಿದೆ. 33 ಜನರ ಗಂಟಲು ದ್ರವ ಲ್ಯಾಬ್‌ಗೆ ಕಳಿಸಲಾಗಿದೆ. ಅದರಲ್ಲಿ ಮೂರು ಜನರಿಗೆ ಪಾಸಿಟಿವ್ ವರದಿ ಬಂದಿದೆ. ಕರೊನಾ ಹತೋಟಿಗೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದರು. ಸಂಸದ ಅಣ್ಣಾಸಾಹೇಬ ಜೊಲ್ಲೆ, ಉದ್ಯಮಿ ಸಂಜು ಅರಗೆ ಇದ್ದರು.

ಇನ್ನೂ ಎರಡು ವಾರಗಳ ಕಾಲ ಮನೆಯಲ್ಲಿದ್ದುಕೊಂಡು ಕರೊನಾ ವೈರಸ್ ಸಂಪೂರ್ಣ ತೊಲಗಲು ಎಲ್ಲರೂ ಸಹಕರಿಸಬೇಕು. ದೇಶದ ಸುರಕ್ಷತೆಗೆ ಕಟಿ ಬದ್ಧರಾಗಬೇಕು. ಅನವಶ್ಯಕವಾಗಿ ಹೊರಗಡೆ ತಿರುಗಾಡುವುದನ್ನು ನಿಲ್ಲಿಸಬೇಕು.| ಶಶಿಕಲಾ ಜೊಲ್ಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ