- ಹುಬ್ಬಳ್ಳಿ: ಇಲ್ಲಿಯ ವಿಮಾನ ನಿಲ್ದಾಣದ ನಿರ್ದೇಶಕರಿಗೆ ವ್ಯಕ್ತಿಯೊಬ್ಬ ಇ-ಮೇಲ್ ಮಾಡಿ ಜೀವ ಬೆದರಿಕೆ ಸಂದೇಶ ಕಳುಹಿಸಿದ್ದು, ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಾಗಿದೆ.
ವಿಮಾನ ನಿಲ್ದಾಣದ ನಿರ್ದೇಶಕ ರೂಪೇಶ ಕುಮಾರ ಶ್ರೀಪ್ರಸಾದ ಅವರಿಗೆ ಜೂ. 24ರಂದು ಸಂಜೆ 6.57ರ ಸುಮಾರಿಗೆ ಕಚೇರಿಯ ಇ-ಮೇಲ್ ಐಡಿಗೆ ಜೀವ ಬೆದರಿಕೆ ಸಂದೇಶ ಬಂದಿದೆ.
‘ನಮ್ಮ ಹೃದಯದಲ್ಲಿ ಕಬ್ಬಿಣ ಇದೆ. ನಾವು ಇದನ್ನು ಗಾಳಿಯಲ್ಲಿ ಕಳುಹಿಸುತ್ತೇವೆ. ಮತ್ತು ನಿಮ್ಮ ದೇಹಗಳನ್ನು ನಾಶ ಮಾಡುತ್ತೇವೆ. ನಿಮ್ಮನ್ನು ಬೆಂಕಿ ಕೆನ್ನಾಲಿಗೆಗೆ ಎಸೆಯುತ್ತೇವೆ. ನೀವು ಉಸಿರುಗಟ್ಟಿ ಸಾಯುತ್ತೀರಿ. ಅಲ್ಲಾಹನು ಈ ಉದ್ದೇಶಕ್ಕಾಗಿ ನಮ್ಮಲ್ಲಿ ಜ್ವಾಲೆಯನ್ನು ಹೊತ್ತಿಸಿದ್ದಾನೆ. ನೀವು ಸುಟ್ಟು ಹೋಗುತ್ತೀರಿ. ಅಲ್ಲಾಹನ ಪರವಾನಗಿಯೊಂದಿಗೆ ದಟ್ಟ ಹೊಗೆಯು ಆಕಾಶದಿಂದ ಇಳಿದು ಬರಲಿದೆ. ಅಲ್ಲಿಗೆ ಎಲ್ಲವೂ ಮುಗಿಯಲಿದೆ. ನೀವು ಮಾಡಿರುವ ಎಲ್ಲ ಕೆಟ್ಟ ಕೆಲಸಗಳಿಗೆ ಉತ್ತರಿವಿಲ್ಲವೆಂದು ನಿಜವಾಗಿಯೂ ನೀವು ಭಾವಿಸಿಸಿದ್ದೀರಾ?’ ಎಂಬ ಸಂದೇಶ ಇ-ಮೇಲ್‌ನಲ್ಲಿದೆ.
ಹಿರಿಯ ಅಧಿಕಾರಿಗಳಿಂದ ಅಗತ್ಯ ಕ್ರಮ: ಟರ್ಮಿನಲ್ ಉಸ್ತುವಾರಿ ಪ್ರತಾಪ ಬಿ.ವಿ. ಅವರಿಗೆ ಸಂದೇಶ ತೋರಿಸಿದ ನಿರ್ದೇಶಕ ರೂಪೇಶಕುಮಾರ ಅವರು, ಸಿಎಎಸ್‌ಒ, ಐಬಿ, ಬಿಡಿಡಿಎಸ್ ಮತ್ತು ಬಾಂಬ್ ನಿಷ್ಕ್ರಿಯ ದಳಕ್ಕೆ ಮಾಹಿತಿ ರವಾನಿಸಿ, ವಾಯುಯಾನ ಭದ್ರತಾ ನಿಯಮದ ಪ್ರಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ತಾವೂ ಕೂಡ ಕ್ರಮ ಕೈಗೊಳ್ಳಬೇಕೆಂದು ನಿರ್ದೇಶಕರು, ಜೂ. 25ರಂದು ಠಾಣೆಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.