ಜಿಲ್ಲೆ

ಅಗ್ರಿ ಟೂರಿಸಂ ಜಾರಿಗೆ ಚಿಂತನೆ: ಸಚಿವ ಕೆ.ಸಿ.ನಾರಾಯಣಗೌಡ

ತುಮಕೂರು:ಕೃಷಿಗೆ ಪ್ರವಾಸೋದ್ಯಮ ಸ್ಪರ್ಶ ನೀಡುವ ಸಲುವಾಗಿ ಅಗ್ರಿ ಟೂರಿಸಂ ಯೋಜನೆ ರೂಪಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಪೌರಾಡಳಿತ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಗಳ ಸಚಿವ ಕೆ.ಸಿ.ನಾರಾಯಣಗೌಡ ತಿಳಿಸಿದರು.

ಜಿಪಂ ಸಭಾಂಗಣದಲ್ಲಿ ಬುಧವಾರ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಯೋಜನೆಯಿಂದ ನಗರ ಪ್ರದೇಶದ ಯುವ ಪೀಳಿಗೆಗೆ ಕೃಷಿ ಆಧಾರಿತ ಚಟುವಟಿಕೆಗಳ ಅರಿವು ಮೂಡಿಸುವುದು ಹಾಗೂ ಮಾಹಿತಿ ತಿಳಿಸುವುದಾಗಿದೆ ಎಂದರು.

ಕುಣಿಗಲ್ ಮತ್ತು ತುಮಕೂರು ತಾಲೂಕು ಹೆಬ್ಬೂರು ಹೋಬಳಿಯಲ್ಲಿರುವ ಮೈಸೂರು ಬಿತ್ತನೆ ಪ್ರದೇಶದಲ್ಲಿ 911.56 ಹೆಕ್ಟೇರ್‌ನಲ್ಲಿ ಮೈಸೂರು ರೇಷ್ಮೆ ಬೆಳೆಯುತ್ತಿದ್ದಾರೆ. ಅಲ್ಲದೆ ತಿಪಟೂರು, ತುರುವೇಕೆರೆ ಹಾಗೂ ಚಿಕ್ಕನಾಯಕನಹಳ್ಳಿ ದ್ವಿತಳಿ ಬಿತ್ತನೆ ಪ್ರದೇಶವಾಗಿವೆ. ವಿಶೇಷ ಕ್ಲಸ್ಟರ್ ಅಭಿವೃದ್ಧಿ ಯೋಜನೆಯಡಿ 19.347 ಲಕ್ಷ ದ್ವಿತಳಿ ಸಂಕಿರಣ ಮೊಟ್ಟೆ ಚಾಕಿ ಮಾಡಿ 1274 ಮೆಟ್ರಿಕ್ ಟನ್ ಗೂಡು ಉತ್ಪಾದನೆ ಮಾಡಲಾಗಿದೆ. ಒಟ್ಟು ಗೂಡು ಉತ್ಪಾದನೆಯಲ್ಲಿ ಶೇ.79 ದ್ವಿತಳಿ ಗೂಡು ಉತ್ಪಾದಿಸಿ ರಾಜ್ಯದಲ್ಲಿ 2ನೇ ವಿಶೇಷ ಸ್ಥಾನ ಪಡೆದಿದೆ ಎಂದರು.

ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ರೇಷ್ಮೆ ಬೆಳೆಯುತ್ತಿದ್ದರೆ, ಬೆಳೆಗಾರರಿಗೆ ಅನುಕೂಲವಾಗುವಂತೆ ರೇಷ್ಮೆ ಮಾರಾಟ ಮತ್ತು ಕೊಳ್ಳುವವರಿಗೆ ಮಾರ್ಕೆಟಿಂಗ್ ವ್ಯವಸ್ಥೆ ಮಾಡಬಹುದು. ಅದಕ್ಕಾಗಿ ರೇಷ್ಮೆ ಇಲಾಖೆಗೊಳಪಡುವ ಜಾಗವನ್ನು ಸರ್ವೇ ಮಾಡಿಸಲು ಜಿಲ್ಲಾಧಿಕಾರಿಗೆ ಪತ್ರ ಬರೆಯಿರಿ, ನಂತರ ಪ್ರಗತಿ ಕಾಮಗಾರಿಗಳ ಬಗ್ಗೆ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗೆ ಸೂಚಿಸಿದರು.

ಕರೊನಾ ಸಂದರ್ಭದಲ್ಲಿ ಪ್ರತಿನಿತ್ಯ 12.50 ಟನ್ ತಾಜಾ ಹಣ್ಣು ಮತ್ತು ತರಕಾರಿ ಹಾಪ್‌ಕಾಮ್ಸ್, ರೈತ ಉತ್ಪಾದಕ ಸಂಸ್ಥೆ ಮತ್ತು ಎನ್‌ಜಿಒ ಸಹಯೋಗದೊಂದಿಗೆ 25 ವಾಹನಗಳಲ್ಲಿ ನಗರದ 35 ವಾರ್ಡ್‌ಗಳಲ್ಲಿ ವಿತರಿಸಲಾಯಿತು.

ತಾಲೂಕು ಮಟ್ಟದಲ್ಲಿ ರೈತರಿಂದ ನೇರವಾಗಿ ಹಣ್ಣು-ತರಕಾರಿಗಳನ್ನು ಖರೀದಿ ಮಾಡಿ ಗ್ರಾಹಕರಿಗೆ ಮಾರಾಟ ಮಾಡಿದ್ದೇವೆ ಎಂದು ತೋಟಗಾರಿಕೆ ಉಪನಿರ್ದೇಶಕ ರಘು ಮಾಹಿತಿ ನೀಡಿದರು. ಪ್ರಸ್ತುತ ಡ್ರ್ಯಾಗನ್ ಫ್ರೂಟ್ಸ್‌ಗೆ ಬೇಡಿಕೆಯಿದ್ದು, ಶಿರಾ ಮತ್ತು ತುರುವೇಕೆರೆಯಲ್ಲಿ ಬೆಳೆಯಲಾಗುತ್ತಿದೆ. ಜಿಲ್ಲೆಯಲ್ಲಿ ಬೆಳೆಯಲು ಪ್ರಾಮುಖ್ಯತೆ ನೀಡಿ, ಈ ಹಣ್ಣನ್ನು ಬೆಳೆಯುವ ರೈತರಿಗೆ ಪ್ರೋತ್ಸಾಹಧನ ನೀಡಿ, ನಿಂಬೆ ಬೆಳೆಗಾರರಿಗೆ ಅನುಕೂಲವಾಗುವಂತೆ ಘಟಕ ಸ್ಥಾಪಿಸಲು ಪ್ರಸ್ತಾವನೆ ಸಲ್ಲಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಪೌರಾಡಳಿತಕ್ಕೆ ಸಂಬಂಧಪಟ್ಟಂತೆ ಎಸ್‌ಎಫ್‌ಸಿ (ಕುಡಿಯುವ ನೀರು)ಗಾಗಿ 150 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು, ಅದರಲ್ಲಿ ನಗರ ಸ್ಥಳೀಯ ಪ್ರದೇಶಗಳಲ್ಲಿ ಕುಡಿಯುವ ನೀರಿಗಾಗಿ 100 ಲಕ್ಷ ರೂ. ಖರ್ಚು ಮಾಡಿದ್ದು, 58 ಲಕ್ಷ ಬಾಕಿಯಿದೆ. ನೀರಿನ ತೆರಿಗೆ ವಸೂಲಾತಿ 9 ಕೋಟಿ ರೂ. ನಿಗದಿಯಾಗಿದ್ದು, ಈವರೆಗೆ 1 ಕೋಟಿ ರೂ. ತೆರಿಗೆಯನ್ನು ವಸೂಲಿ ಮಾಡಲಾಗಿದ್ದು, 8 ಕೋಟಿ ರೂ. ಬಾಕಿಯಿರುವುದಾಗಿ ಪೌರಾಡಳಿತ ಯೋಜನಾ ಅಧಿಕಾರಿ ಬಿ.ಶುಭಾ ಸಭೆಯಲ್ಲಿ ತಿಳಿಸಿದರು. ಶಾಸಕರಾದ ಮಸಾಲ ಜಯರಾಂ, ಎಂ.ವಿ.ವೀರಭದ್ರಯ್ಯ, ಜಿ.ಬಿ.ಜ್ಯೋತಿಗಣೇಶ್, ಜಿಪಂ ಉಪಾಧ್ಯಕ್ಷೆ ಶಾರದಾ, ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್, ಜಿಪಂ ಸಿಇಒ ಶುಭಾಕಲ್ಯಾಣ್ ಇದ್ದರು.

ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿ ಸುಸಜ್ಜಿತ ಹಣ್ಣು, ತರಕಾರಿ ಮಾರಾಟಕ್ಕೆ ಕಟ್ಟಡ ನಿರ್ಮಿಸಲು ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಅವಕಾಶವಿದ್ದು, ಅಗತ್ಯ ನಿವೇಶನ ನೀಡಬೇಕು, ಈ ಬಗ್ಗೆ ತೋಟಗಾರಿಕೆ ಇಲಾಖೆಗೆ ಮನವಿ ಮಾಡಿದ್ದು ಎನ್‌ಒಸಿ ನೀಡಬೇಕು. ಈ ಮೂಲಕ ನಗರವಾಸಿಗಳಿಗೆ ತಾಜಾ ಹಣ್ಣು, ತರಕಾರಿ ಲಭ್ಯವಾಗುತ್ತದೆ. ಜಿ.ಬಿ.ಜ್ಯೋತಿಗಣೇಶ್ ಶಾಸಕ