ಜಿಲ್ಲೆ

ರೈತರಿಗೆ ಡೀಸೆಲ್ ಸಬ್ಸಿಡಿಗೆ ಚಿಂತನೆ

ರಮೇಶ್​ ಕುಮಾರ್​​ ಬಿ ಎಡಮೋಳೆ

ಚಿತ್ರದುರ್ಗ: ರೈತರು ಬಳಸುವ ಪ್ರತಿ ಲೀಟರ್ ಡೀಸೆಲ್ ಮೇಲೆ 20 ರೂ. ಸಬ್ಸಿಡಿ ಕೊಡುವ ಚಿಂತನೆ ದೇಶದಲ್ಲೇ ಮೊದಲ ಬಾರಿಗೆ ನಮ್ಮ ರಾಜ್ಯದಲ್ಲಿ ನಡೆದಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು. ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಮುರುಘಾ ಮಠದಲ್ಲಿ ಬುಧವಾರ ಏರ್ಪಡಿಸಿದ್ದ ಕೃಷಿ ಹಾಗೂ ಕೈಗಾರಿಕೆ ಮೇಳ ಉದ್ಘಾಟಿಸಿ ಮಾತನಾಡಿದರು.

ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲೇ ಕೃಷಿಕರಿಗೆ ಡೀಸೆಲ್ ಸಬ್ಸಿಡಿ ನೀಡಲು ಸಮ್ಮತಿಸಿದ್ದರು. ಆದರೆ ಕೋವಿಡ್ ಕಾರಣಕ್ಕೆ ಸಾಧ್ಯವಾಗಲಿಲ್ಲ. ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಕೂಡ ಸಕಾರಾತ್ಮಕ ನಿಲುವು ಹೊಂದಿದ್ದಾರೆ. ಈ ಯೋಜನೆ ಜಾರಿಯಾದರೆ ಕೃಷಿಕರಿಗೆ ಡೀಸೆಲ್ ಸಬ್ಸಿಡಿ ನೀಡಿದ ಮೊದಲ ರಾಜ್ಯ ಕರ್ನಾಟಕ ಆಗಲಿದೆ. ಇದಕ್ಕೆ ವಾರ್ಷಿಕ 4,000 ಕೋಟಿ ರೂ.ಅಗತ್ಯವಿದೆ ಎಂದು ಮಾಹಿತಿ ನೀಡಿದರು. ಕೇಂದ್ರ ಸರ್ಕಾರವು ರೈತರಿಗೆ ಎಲ್ಲ ರೀತಿಯ ಸಹಾಯ, ಸಹಕಾರ ನೀಡಲಿದೆ ಎಂದು ರಸಗೊಬ್ಬರ ಖಾತೆ ರಾಜ್ಯ ಸಚಿವ ಕೇಂದ್ರ ಸಚಿವ ಭಗವಂತ ಖೂಬಾ ಭರವಸೆ ನೀಡಿದರು. ಬೆಂಬಲ ಬೆಲೆಯಡಿ ಫಸಲು ಖರೀದಿಸಲು ಬಜೆಟ್​ನಲ್ಲಿ 5 ಸಾವಿರ ಕೋಟಿ ರೂ.ಆವರ್ತ ನಿಧಿ ಮೀಸಲಿಡುವಂತೆ ಡಾ. ಶ್ರೀ ಶಿವಮೂರ್ತಿ ಮುರುಘಾಶರಣರು ಸರ್ಕಾರವನ್ನು ಒತ್ತಾಯಿಸಿದರು.