ಜಿಲ್ಲೆ

ಹೂಡಿಕೆ ಹಣ ಮರೀಚಿಕೆ: ವಂಚಕ ಕಂಪನಿಗಳಿಂದ ಮೋಸಹೋದವರಿಗೆ ಸಿಕ್ಕಿಲ್ಲ ನ್ಯಾಯ

| ಕೀರ್ತಿನಾರಾಯಣ ಸಿ. ಬೆಂಗಳೂರು

ಹಣ ದ್ವಿಗುಣ, ದೊಡ್ಡ ಮೊತ್ತದ ಲಾಭ ಇನ್ನಿತರ ಆಮಿಷ ಒಡ್ಡಿ ವಂಚಕ ಕಂಪನಿಗಳು ಲೂಟಿ ಹೊಡೆದಿರುವ ಸಾರ್ವಜನಿಕರ ಸಾವಿರಾರು ಕೋಟಿ ರೂ. ಹಣ ವರ್ಷಗಳೇ ಉರುಳಿದರೂ ವಾಪಸ್ಸಾಗಿಲ್ಲ. ಹಣ ಕಳೆದುಕೊಂಡವರಿಗೆ ಪೊಲೀಸ್ ಠಾಣೆ, ಕೋರ್ಟ್​ಗೆ ಅಲೆಯುವ ಶಿಕ್ಷೆ ತಪ್ಪಿಲ್ಲ. ಈ ಮಧ್ಯೆ ಬೇರೆ ಬೇರೆ ಹೆಸರಲ್ಲಿ ತಲೆ ಎತ್ತುತ್ತಿರುವ ವಂಚಕ ಕಂಪನಿಗಳ ಜಾಲಕ್ಕೆ ಬೀಳುವವರ ಸಂಖ್ಯೆಯೂ ವರ್ಷದಿಂದ ವರ್ಷಕ್ಕೆ ಏರುತ್ತಲೇ ಇದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ವಂಚಕ ಕಂಪನಿಗಳು ಹಾಗೂ ಅದರ ಮಾಲೀಕರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಂತೆ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.

ಕರ್ನಾಟಕದಲ್ಲಿ ಅಗ್ರಿಗೋಲ್ಡ್, ಗುರುಟೀಕ್, ಮೈತ್ರಿ, ಅಗ್ರಿಹಿಲ್ಸ್, ಸೆವೆನ್​ಹಿಲ್ಸ್, ಐಎಂಎ, ಅಜ್ಮೇರಾ, ಡ್ರೀಮ್್ಸ ಇಂಡಿಯಾ, ಕ್ಯೂ ನೆಟ್ ಸೇರಿ ಕೆಲ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿ ಮೋಸ ಹೋದ ಲಕ್ಷಾಂತರ ಜನರಿಗೆ 10 ವರ್ಷವಾದರೂ ಹಣ ವಾಪಸಾಗಿಲ್ಲ. ರಾಜ್ಯದ ಜನರಿಗೇ ಅಂದಾಜು 10 ಸಾವಿರ ಕೋಟಿಗೂ ಅಧಿಕ ಹಣ ಬರಬೇಕಿದೆ. ಕಂಪನಿಗಳಿಗೆ ಸೇರಿದ ಚರ-ಸ್ಥಿರಾಸ್ತಿಯನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಅಗ್ರಿಗೋಲ್ಡ್ ಸೇರಿ ಕೆಲ ಪ್ರಕರಣಗಳಲ್ಲಿ ಹೂಡಿಕೆದಾರರಿಂದ ಕ್ಲೇಮ್ ಅರ್ಜಿ ಆಹ್ವಾನಿಸಲಾಗಿದೆ. ಮತ್ತೆ ಕೆಲ ಕಂಪನಿಗಳ ವಿಚಾರವಾಗಿ ಜನರಿಗೆ ಯಾವುದೇ ಮಾಹಿತಿ ಸಿಗದೆ ಕಂಗಾಲಾಗಿದ್ದಾರೆ.

ದೇಶದಲ್ಲಿ 2019ರಿಂದ 2022ರ ಜೂ.30ರವರೆಗೆ ಸಿಬಿಐನಲ್ಲೇ 100 ಪ್ರಕರಣಗಳು ದಾಖಲಾಗಿವೆ. ಸಿಬಿಐ ತನಿಖೆ ಮುಂದುವರಿಸಿದಂತೆ 132 ವಿವಿಧ ಕಂಪನಿಗಳು ಹಣದ ಉಳಿತಾಯದ ಹೆಸರಲ್ಲಿ ಲಕ್ಷಾಂತರ ರೂ. ಹೂಡಿಕೆ ಮಾಡಿಸಿಕೊಂಡು ವಂಚನೆ ಮಾಡಿರುವುದು ದೃಢಪಟ್ಟಿದೆ. ಇನ್ನು ಅಕ್ರಮ ಹಣಕಾಸು ವರ್ಗಾವಣೆ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ (ಇಡಿ)ದ ತಂಡ ಪ್ರತ್ಯೇಕವಾಗಿ 87 ವಂಚನೆ ಪ್ರಕರಣಗಳನ್ನು ತನಿಖೆ ನಡೆಸಿದೆ. ಅದೇ ರೀತಿ ಸೀರಿಯಸ್ ಫ್ರಾಡ್ ಇನ್ವೆಸ್ಟಿಗೇಟಿಂಗ್ (ಎಸ್​ಎಫ್​ಐಒ)ತಂಡದ ಅಧಿಕಾರಿಗಳ ತನಿಖೆಯಲ್ಲಿ 85 ಕಂಪನಿಗಳ ವಂಚನೆ ಬಹಿರಂಗವಾಗಿದೆ. ಆಯಾ ರಾಜ್ಯಗಳ ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ವಾರ್ಷಿಕ 30 ರಿಂದ 50 ಪ್ರಕರಣ ದಾಖಲಾಗುತ್ತಿವೆ.

ಕನಿಷ್ಠ ಹಣ ಸಿಗೋದೂ ಡೌಟು!: ಬಹುತೇಕ ಪ್ರಕರಣಗಳಲ್ಲಿ ಸ್ಥಳೀಯ ಪೊಲೀಸರು, ಸಿಬಿಐ, ಸಿಐಡಿ, ಇಡಿ ತನಿಖೆಗಳಾಗಿ ಕಂಪನಿಗಳಿಗೆ ಸೇರಿದ ಚರ ಮತ್ತು ಸ್ತಿರಾಸ್ತಿಗಳನ್ನು ಜಪ್ತಿ ಮಾಡಲಾಗಿದೆ. ಆದರೆ, 1000 ಕೋಟಿ ರೂ. ವಂಚನೆಯಾಗಿದ್ದರೆ ಜಪ್ತಿಯಾಗಿರುವ ಆಸ್ತಿ ಮೌಲ್ಯ 200- 300 ಕೋಟಿ ರೂ. ಮಾತ್ರ ಇದೆ. ಐಎಂಎ ವಂಚನೆ ಕೇಸಲ್ಲಿ 69,000 ಅರ್ಜಿಗಳು ಸ್ವೀಕೃತವಾಗಿದೆ. ಇವರಿಗೆ ಒಟ್ಟು 2,600 ಕೋಟಿ ರೂ. ಕೊಡಿಸಬೇಕಿದೆ. ಠೇವಣಿಗಳ ಮೇಲಿನ ಆದಾಯವನ್ನು ಕಡಿತಗೊಳಿಸಿದ ನಂತರವೂ ಒಟ್ಟಾರೆ 1,260 ಕೋಟಿ ರೂ. ಮೊತ್ತವನ್ನು ಠೇವಣಿದಾರರಿಗೆ ನೀಡಬೇಕಿದೆ. ಐಎಂಎನಲ್ಲಿ ಬರೀ 400 ಕೋಟಿ ಮೌಲ್ಯದಷ್ಟು ಆಸ್ತಿ ಇದೆ. ಸಣ್ಣ ಹೂಡಿಕೆದಾರರಿಗೆ (2 ಲಕ್ಷ ರೂ. ಹೂಡಿಕೆ ಮಾಡಿದವರಿಗೆ) ಹಾಗೂ 50,000 ರೂ.ಗಿಂತ ಕಡಿಮೆ ಬಾಕಿ ಇರುವವರಿಗೆ ವಾಪಸ್ ಕೊಡುವ ಬಗ್ಗೆ ಆಲೋಚನೆ ನಡೆದಿದೆ.

ವಂಚನೆ ಹೇಗೆ?

- ಕಡಿಮೆ ಅವಧಿಯಲ್ಲಿ ಹೆಚ್ಚು ಬಡ್ಡಿ ಕೊಡುವುದಾಗಿ ನಂಬಿಸಿ ಹೂಡಿಕೆ ಮಾಡಿಸುವುದು

- ವಿದೇಶಿ ಪ್ರವಾಸ, ದುಬಾರಿ ಬೆಲೆಯ ಕಾರು, ಬೈಕ್, ಮನೆ, ಉತ್ಪನ್ನಗಳ ಗಿಫ್ಟ್ ಕೊಡುವುದು

ಸದಸ್ಯರನ್ನು ನೇಮಕ ಮಾಡಿದಷ್ಟೂ ಹೆಚ್ಚು ಕಮೀಷನ್ ಎಂದು ಆಸೆ ತೋರಿಸುವುದು

- ನಂಬಿಕೆ ಗಿಟ್ಟಿಸಲು ಆರಂಭದಲ್ಲಿ ಹೆಚ್ಚು ಬಡ್ಡಿ ಕೊಟ್ಟು ನಂತರ ಅಸಲನ್ನೂ ಕೊಡದೆ ವಂಚಿಸುವುದು

ವಂಚಕ ಕಂಪನಿ ಪತ್ತೆ ಹೇಗೆ?

* ಹೂಡಿಕೆ ಕಂಪನಿ ನೋಂದಣಿ ಆಗಿದೆಯೇ? ಆರ್​ಬಿಐ ವ್ಯಾಪ್ತಿಯಲ್ಲಿದೆಯೇ ಪರಿಶೀಲಿಸಿ

* ಕಾನೂನಿನಲ್ಲಿ ಇರುವ ಅವಕಾಶಕ್ಕಿಂತ ಹೆಚ್ಚು ಬಡ್ಡಿ ಕೊಡುವ ಆಮಿಷ ಒಡ್ಡುವುದು

* ಹೊಸದಾಗಿ ಸದಸ್ಯರನ್ನು ನೇಮಿಸಿದರೆ ಹೆಚ್ಚು ಕಮೀಷನ್ ಕೊಡುತ್ತೇವೆ ಎನ್ನುವುದು

* ಹಿಂದಿನ ಯೋಜನೆಯಲ್ಲಿ ಒಪ್ಪಿಕೊಂಡಂತೆ ಅಸಲು-ಬಡ್ಡಿ ಕೊಟ್ಟಿದೆಯೇ ಗಮನಿಸಿಕೊಳ್ಳಿ

ಹೂಡಿಕೆದಾರರ ಬೇಡಿಕೆ ಏನು?

  • ಪೊಲೀಸ್ ತನಿಖೆ ಹಾಗೂ ಕೋರ್ಟ್ ವಿಚಾರಣೆ ತ್ವರಿತವಾಗಿ ಮುಗಿಸಲು ಕ್ರಮ
  • ಜಪ್ತಿ ಮಾಡಿರುವ ಆಸ್ತಿಗಳನ್ನು ಆದಷ್ಟು ಬೇಗ ಹರಾಜು ಹಾಕಿ ಹಣ ಹಿಂದಿರುಗಿಸಬೇಕು
  • ಕಂಪನಿಗೆ ಸೇರಿದ ಆಸ್ತಿ ಜತೆಗೆ ಆರೋಪಿಗಳು, ಕುಟುಂಬಸ್ಥರ ಹೆಸರಲ್ಲಿನ ಆಸ್ತಿಯೂ ಜಪ್ತಿಯಾಗಲಿ
  • ಮೋಸ ಹೋದವರೆಲ್ಲ ಬಹುತೇಕ ಮಧ್ಯಮ ವರ್ಗದವರು. ಪೂರ್ತಿ ಹಣ ಕೊಡಲು ಕ್ರಮವಾಗಬೇಕು

ನಿಯಂತ್ರಣಕ್ಕೆ ಕ್ರಮಗಳೇನು?

* ವಂಚಕ ಕಂಪನಿಗಳು/ಬಂಧಿತರ ಬಗ್ಗೆ ವಿವಿಧ ಕಾರ್ಯಕ್ರಮಗಳ ಮೂಲಕ ಜಾಗೃತಿ

* ಕರ್ನಾಟಕ ಸೇರಿ 32 ರಾಜ್ಯಗಳ 604 ಜಿಲ್ಲೆಗಳಲ್ಲಿ ಕಾರ್ಯಕ್ರಮಗಳ ಆಯೋಜನೆ

* ದೂರದರ್ಶನ, ಟಿವಿ ಮತ್ತು ರೇಡಿಯೋಗಳಲ್ಲಿ ವಂಚಕ ಕಂಪನಿಗಳ ಬಗ್ಗೆ ಮಾಹಿತಿ

* ಕಂಪನಿ ನೋಂದಣಿಯಾಗಿದೆಯೇ ಇಲ್ಲವೇ ತಿಳಿಯಲು ಪ್ರತ್ಯೇಕ ವೆಬ್​ಸೈಟ್ ಆರಂಭ

ಪ್ರಮುಖ ಕೇಸ್​ಗಳ ಈಗಿನ ಸ್ಥಿತಿಗತಿ

  • ಆಂಧ್ರಪ್ರದೇಶ ಮೂಲದ ಅಗ್ರಿಗೋಲ್ಡ್ ಕಂಪನಿ ಜನರಿಂದ ಹಣ ಪಡೆದು ಮುಚ್ಚಿಹೋಗಿದೆ. 8 ರಾಜ್ಯದಲ್ಲಿ 32 ಲಕ್ಷ ಖಾತೆಯ 6,385 ಕೋಟಿ ರೂ. ಹಣ ಪಾವತಿಸಬೇಕಿದೆ. ಸಂಸ್ಥೆಗೆ ಸೇರಿದ 4,109 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಇ.ಡಿ. ಜಪ್ತಿ ಮಾಡಿದೆ.
  • ಪಿಎಸಿಎಲ್ 18 ವರ್ಷಗಳಲ್ಲಿ 60 ಸಾವಿರ ಕೋಟಿ ರೂ. ಸಂಗ್ರಹಿಸಿ ವಂಚಿಸಿದೆ. ಹೂಡಿಕೆದಾರರಿಗೆ ಹಣ ವಾಪಸ್ ಕೊಡಿಸಲು ಸರ್ಕಾರ ನಿವೃತ್ತ ನ್ಯಾ.ಆರ್. ಎಂ.ಲೋಧಾ ಸಮಿತಿ ರಚಿಸಿದೆ. ಮೊದಲ ಹಂತದಲ್ಲಿ 10ರಿಂದ 15 ಸಾವಿರ ರೂ. ಕ್ಲೇಮ್ೆ ಅರ್ಜಿ ಸಲ್ಲಿಸಲು ಅವಕಾಶ ಸಿಕ್ಕಿದೆ.
  • 1200 ಮಂದಿಗೆ 500 ಕೋಟಿ ರೂ.ಗೂ ಅಧಿಕ ವಂಚನೆ ಎಸಗಿದ್ದ ಅಜ್ಮೇರಾ ಗ್ರೂಪ್ ಆಫ್ ಕಂಪನಿ ವಿರುದ್ಧ ಸಿಸಿಬಿ ಪೊಲೀಸರು ಚಾರ್ಜ್​ಶೀಟ್ ಸಲ್ಲಿಸಿದ್ದಾರೆ. ಆಸ್ತಿ ಮುಟ್ಟುಗೋಲು ಹಾಕಿಕೊಂಡು ವಿಚಾರಣೆ ನಡೆಯುತ್ತಿದೆ.
  • ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಹಣ ಹಿಂದಿರುಗಿಸಲು ವಿಶೇಷ ಅಧಿಕಾರಿ ಹಾಗೂ ಸಕ್ಷಮ ಪ್ರಾಧಿಕಾರದ ಅಧಿಕಾರಿ ನೇಮಿಸಲಾಗಿದೆ. ಮೊದಲ ಆದ್ಯತೆಯಾಗಿ ಸಣ್ಣ ಹೂಡಿಕೆದಾರರಿಗೆ ಹಣ ಹಿಂದಿರುಗಿಸಲು ನಿರ್ಧರಿಸಲಾಗಿದೆ.
  • ಕೋಟ್ಯಂತರ ರೂ. ವಂಚಿಸಿದ ಮೈತ್ರಿ ಪ್ಲಾಂಟೇಷನ್ ಆಂಡ್ ಹಾರ್ಟಿಕಲ್ಚರ್ ಕಂಪನಿ ಕರ್ನಾಟಕದಲ್ಲಿ 18 ಶಾಖೆಗಳನ್ನು ತೆರೆದಿತ್ತು. 5 ವರ್ಷಗಳಲ್ಲಿ ನಿಮ್ಮ ಹಣ ದ್ವಿಗುಣವಾಗುತ್ತದೆ ಎಂದೇಳಿ ವಂಚಿಸಿ ಕಚೇರಿಗೆ ಬೀಗ ಹಾಕಿತ್ತು.