ಪಾಂಡವಪುರ: ಮಡಿವಾಳ ಮಾಚಿದೇವರು ತಮ್ಮ ವಚನ ಸಾಹಿತ್ಯದ ಮೂಲಕ ಸಮಾಜಕ್ಕೆ ಅಂಟಿದ ಕೊಳೆ ತೊಳೆದು ಶುಭ್ರವಾಗಿಸಲು ಪ್ರಯತ್ನ ಪಟ್ಟವರು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಭಿಪ್ರಾಯಪಟ್ಟರು.
ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ಮತ್ತು ಸಮುದಾಯದವರು ಗುರುವಾರ ಆಯೋಜಿಸಿದ್ದ ಮಡಿವಾಳ ಮಾಚಿದೇವರ ಜಯಂತ್ಯುತ್ಸವದಲ್ಲಿ ವಚನ ರಕ್ಷಕ ಮಾಚಿದೇವರಿಗೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.
ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು, ಮಾಚಿದೇವರು ಸೇರಿದಂತೆ ಅನೇಕ ಶರಣರು ತಮ್ಮ ಕಾಲಘಟ್ಟದಲ್ಲಿ ವಚನ ಸಾಹಿತ್ಯದ ಮೂಲಕ ಸಮ ಸಮಾಜದ ಕನಸು ಕಂಡು ಸಮಾಜದ ಅಂಕುಡೊಂಕುಗಳನ್ನು ತಿದ್ದಲು ಪ್ರಯತ್ನಿಸಿದರು. ವಚನ ಸಾಹಿತ್ಯ ಇಂದಿಗೂ ಪ್ರಸ್ತುತವಾಗಿದೆ. ನಾವು ನಮ್ಮ ಹಿರಿಯರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಬೆಳೆದು ಉತ್ತಮ ವ್ಯಕ್ತಿತ್ವ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಡಿವಾಳ ಸಮುದಾಯ ಬಟ್ಟೆ ಸ್ವಚ್ಛತೆ ಮಾಡಿ ಬರುವ ಆದಾಯದಲ್ಲಿ ಕಷ್ಟಪಟ್ಟು ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಸಮಾಜದ ಎಲ್ಲ ಜನರಿಗೆ ನಿಮ್ಮ ಶ್ರಮ ದೊರೆಯುತ್ತಿದೆ. ನಾನು ಶಾಸಕನಾಗಿ ಸದಾ ನಿಮ್ಮ ಜತೆ ಇರುತ್ತೇನೆ ಎಂದು ಭರವಸೆ ನೀಡಿದರು.
ಮಡಿವಾಳ ಸಂಘದ ತಾಲೂಕು ಅಧ್ಯಕ್ಷ ರಾಮಚಂದ್ರ ಮಾತನಾಡಿ, ಸಮುದಾಯ ತೀರ ಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದು, ಸಮುದಾಯದ ಬಡವರು ಶುಭ ಕಾರ್ಯಗಳನ್ನು ನಡೆಸಲು ಅನುಕೂಲವಾಗುವಂತೆ ಸಮುದಾಯದ ಭವನದ ಅಗತ್ಯತೆ ಇದೆ. ಹೀಗಾಗಿ ಪಾಂಡವಪುರ ಪುರಸಭೆ ವ್ಯಾಪ್ತಿಯಲ್ಲಿ ನಿವೇಶನ ಮಂಜೂರು ಮಾಡಿಕೊಡುವಂತೆ ಮನವಿ ಮಾಡಿದರು.
ಉಪ ತಹಸೀಲ್ದಾರ್ ಎಸ್.ಸಂತೋಷ್, ಕಟ್ಟೇರಿ ಗ್ರಾಪಂ ಅಧ್ಯಕ್ಷ ರಮೇಶ್, ವಿವಿಧ ಸಮುದಾಯದ ಮುಖಂಡರಾದ ಸಿ.ಆರ್.ರಮೇಶ್, ಮಂಡಿಬೆಟ್ಟಹಳ್ಳಿ ಮಂಜುನಾಥ್, ಡಿ.ಕೆ.ಅಂಕಯ್ಯ, ಪೈಂಟರ್ ಅಶೋಕ್ ಇತರರಿದ್ದರು.