ವಿರಾಜಪೇಟೆ: ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವ ಉದ್ದೇಶದಿಂದ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಕಾರಣಕ್ಕೆ ವಿವಿಧ ಸಂಘ ನೀಡುವ ವಿದ್ಯಾರ್ಥಿ ವೇತನವನ್ನು ಬಳಸಿಕೊಂಡವರು ಸಮಾಜಕ್ಕೆ ಹಿಂದಿರುಗಿ ನೀಡುವ ಕೃತಜ್ಞತಾ ಭಾವ ಹೊಂದಬೇಕು ಎಂದು ಅರಮೇರಿ ಕಳಂಕೇರಿ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಸಲಹೆ ನೀಡಿದರು.
ದಿವಂಗತ ಎ.ಕೆ. ಸುಬ್ಬಯ್ಯ ಹಾಗೂ ಪೊನ್ನಮ್ಮ ಸುಬ್ಬಯ್ಯ ದತ್ತಿನಿಧಿ ಹಾಗೂ ಚಾರಿಟಬಲ್ ಟ್ರಸ್ಟ್ ವತಿಯಿಂದ ಶನಿವಾರ ಆಯೋಜಿಸಿದ್ದ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗಗಳಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿನಿಯರು ಶಿಕ್ಷಣದಿಂದ ಹಿಂದುಳಿಯಬಾರದೆಂದು ಸಂಸ್ಥೆಯ ಮೂಲಕ 5 ವರ್ಷಗಳಿಂದ ವಿದ್ಯಾರ್ಥಿ ವೇತನ ನೀಡಿರುವುದು ಶ್ಲಾಘನೀಯ ವಿಚಾರ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಸಕ ಪೊನ್ನಣ್ಣ ಅವರನ್ನು ರಾಜಕಾರಣಿಯಾಗಿ ಮಾತ್ರ ನೋಡುವ ಬದಲು ಅವರ ಅಂತರಂಗದಲ್ಲಿರುವ ಮಾನವೀಯ ಗುಣವನ್ನು ಮೆಚ್ಚಬೇಕು. ವಿದ್ಯಾರ್ಥಿ ವೇತನ ಪಡೆದ ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಂಡು ತಾವು ಪಡೆದ ವಿದ್ಯಾರ್ಥಿ ವೇತನವನ್ನು ಸಮಾಜಕ್ಕೆ ಹಿಂದಿರುಗಿ ನೀಡುವ ಗುಣವನ್ನು ಹೊಂದಬೇಕು ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಚಿದ್ವಿಲಾಸ್, ಶಾಸಕರ ಈ ಯೋಜನೆ ನಿಂತ ನೀರಲ್ಲ. ಬದಲಿಗೆ ನಿರಂತರವಾಗಿ ಹರಿಯುವ ನೀರು. ಪದವಿ ವ್ಯಾಸಂಗ ಮಾಡುತ್ತಿರುವ 165 ವಿದ್ಯಾರ್ಥಿನಿಯರಿಗೆ ತಲಾ 10,000 ದಷ್ಟು ವಿದ್ಯಾರ್ಥಿ ವೇತನ ನೀಡುವುದು ಸಾಮಾನ್ಯ ವಿಚಾರವಲ್ಲ ಎಂದರು.
ಸ್ವಾಸ್ಥ್ಯ ಸಂಸ್ಥೆ ನಿರ್ದೇಶಕಿ ಆರತಿ ಮಾತನಾಡಿ, ಪ್ರಸ್ತುತ ಸಮಾಜದಲ್ಲಿ ಹಲವು ಸಾಮಾಜಿಕ ಸಮಸ್ಯೆಗಳಿದ್ದು ಅದರಲ್ಲೂ ಮಹಿಳಾ ಶಿಕ್ಷಣವೂ ಒಂದು. ಆರ್ಥಿಕವಾಗಿ ಹಿಂದುಳಿದಿರುವ ಕಾರಣ ತಳ ಹಾಗೂ ಮಧ್ಯಮ ವರ್ಗದ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಅಂತಹ ಹೆಣ್ಣು ಮಕ್ಕಳಿಗೆ ವಿದ್ಯಾರ್ಥಿ ವೇತನ ಉಪಯುಕ್ತವಾಗಲಿದೆ. ಸರ್ಕಾರವು ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹಲವು ಯೋಜನೆಗಳನ್ನು ರೂಪಿಸುತ್ತಿದ್ದು, ಅದನ್ನು ಸಮರ್ಪಕವಾಗಿ ತಲುಪಿಸುವ ಕಾರ್ಯವನ್ನು ಪ್ರತಿಯೊಬ್ಬರೂ ಮಾಡಬೇಕು ಎಂದರು .
ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಅರುಣ್ ಮಾಚಯ್ಯ ಮಾತನಾಡಿ, ಶಿಕ್ಷಣದೊಂದಿಗೆ ಗುಣಾತ್ಮಕ ಶಿಕ್ಷಣವನ್ನೂ ಪಡೆಯುವಂತಾಗಬೇಕು. ಶಿಕ್ಷಣವು ಸಾಗರಕ್ಕಿಂತ ವಿಶಾಲವಾದದ್ದು. ಪ್ರತಿಯೊಬ್ಬರಿಗೂ ಸಮಾನ ಶಿಕ್ಷಣ ದೊರೆತಾಗ ದೇಶದ ಅಭಿವೃದ್ಧಿ ಸಾಧ್ಯ. ಅದರಲ್ಲೂ ಹೆಣ್ಣೊಬ್ಬಳು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ನಾಣ್ಣುಡಿಯಂತೆ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಶಾಸಕ ಎ.ಎಸ್.ಪೊನ್ನಣ್ಣ ಮಾತನಾಡಿ, ಈ ಕಾರ್ಯಕ್ರಮ ಐದು ವರ್ಷಗಳನ್ನು ಪೂರ್ಣಗೊಳಿಸಿದ್ದು, ಪದವಿ ಹಂತದ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ತಲಾ 10,000 ದಷ್ಟು ಆರ್ಥಿಕ ಸಹಾಯ ಮಾಡಲಾಗುತ್ತಿದೆ. ವಿದ್ಯಾರ್ಥಿನಿಯರ ಆಯ್ಕೆಯನ್ನು ಪಾರದರ್ಶಕತೆಯಿಂದ ಮಾಡಲಾಗುತ್ತಿದೆ. ಸಮಾಜದಲ್ಲಿ ಹೆಣ್ಣು-ಗಂಡು ನಡುವೆ ಸಮಾನತೆ ತರುವ ಉದ್ದೇಶಕ್ಕಾಗಿ ಈ ಕಾರ್ಯಕ್ರಮವನ್ನು ಆರಂಭಿಸಲಾಗಿದೆ ಎಂದರು.
ಸಮಾಜದಲ್ಲಿರುವ ಅಸಮಾನತೆಯನ್ನು ತೊಡೆದುಹಾಕಿ ಹೆಣ್ಣು ಮಕ್ಕಳು ಶಿಕ್ಷಣದ ಮೂಲಕ ಸಬಲರಾಗಿ ಸಮಾಜವನ್ನು ಕಾಪಾಡುವ ಶಕ್ತಿಯಾಗಿ ರೂಪಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಸಮಾಜವನ್ನು ಪರಿವರ್ತನೆ ಹೆಣ್ಣಿನಿಂದ ಮಾತ್ರ ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ, ಮಾಚಿಮಂಡ ಗಂಗಮ್ಮ ಸುಬ್ರಮಣ್ಯ , ಕಾಂಚನ್ ಪೊನ್ನಣ್ಣ , ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ನರೇನ್ ಕಾರ್ಯಪ್ಪ ಉಪಸ್ಥಿತರಿದ್ದರು. ಒಟ್ಟು 165 ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಗಣ್ಯರು ವಿದ್ಯಾರ್ಥಿ ವೇತನ ವಿತರಿಸಿದರು.