ಜಿಲ್ಲೆ

ಕನ್ನಡಕ್ಕಾಗಿ ಬದುಕಿದವರು ಕುವೆಂಪು

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ಭಾಷಿಕರಿಗಾಗಿ ಭಾಷಿಕರಿಂದ ಭಾಷೆಗಿರುವ ಸಂವಿಧಾನವೇ ಭಾಷಾ ಸಂವಿಧಾನ. ಕುವೆಂಪು ಕನ್ನಡಕ್ಕಾಗಿ ಬದುಕಿದವರು. ವೈಜ್ಞಾನಿಕ ಮನೋಭಾವ, ಸಂತುಲಿತ ವಿಚಾರವಂತಿಕೆ, ಭಾಷೆ, ಸಂಸ್ಕೃತಿ, ಬದುಕು, ನಾಡು-ನುಡಿಗೆ ತಮ್ಮನ್ನೇ ಅರ್ಪಿಸಿಕೊಂಡವರು ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಚನ್ನಪ್ಪ ಅಂಗಡಿ ಹೇಳಿದರು.
ಕುವೆಂಪು ಜನ್ಮದಿನ ನಿಮಿತ್ತ ಧಾರವಾಡ ಕಟ್ಟೆ ವತಿಯಿಂದ ನಗರದ ಬೇಂದ್ರೆ ಭವನದಲ್ಲಿ ಶನಿವಾರ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಕುವೆಂಪು ಕಾವ್ಯದಲ್ಲಿ ಭಾಷಾ ಸಂವಿಧಾನ ಕುರಿತು ಅವರು ಮಾತನಾಡಿದರು.
ಭಾಷೆ ಎನ್ನುವುದು ಬರೀ ಸಂವಹನ ಮಾಧ್ಯಮವಲ್ಲ. ಬದಲಾಗಿ ಅದೊಂದು ದೊಡ್ಡ ಸಹಕಾರ ಮಾಧ್ಯಮ. ಭಾಷೆ ಎನ್ನುವುದು ಪರಿಸರ ಸ್ನೇಹಿಯಾಗಿರಬೇಕು. ಶಿಕ್ಷಣ ಮಾಧ್ಯಮವಾಗಿರಬೇಕು. ಭಾಷೆ ಎನ್ನುವುದು ಎಲ್ಲವನ್ನೂ ಮೀರಿ ನಿಂತಿದೆ. ಅದನ್ನು ಬಳಸಿ, ಉಳಿಸಿ ಬೆಳೆಸಬೇಕು ಎಂದರು.
ಪ್ರೊ. ಶಿವಾನಂದ ಕೆಳಗಿನಮನಿ ಮಾತನಾಡಿ, ಮಲೆನಾಡಿನ ಯಜಮಾನಿಕೆ, ಶ್ರೀಮಂತಿಕೆ, ಅಲ್ಲಿನ ಮೂಢನಂಬಿಕೆ, ಹೊಟ್ಟೆಬಾಕರ ಅನೇಕ ಹುಳುಕನ್ನು ತಮ್ಮ ಕಾವ್ಯದಲ್ಲಿ ತೋರಿಸಿಕೊಟ್ಟವರು ಕುವೆಂಪು. ಹೆಣ್ಣಿನ ಬಗೆಗೆ, ಪರಿಸರ ಕಾಳಜಿ, ಕಂದಾಚಾರ, ಇನ್ನಿತರ ಅನೇಕ ವಿಚಾರಗಳನ್ನು ತಮ್ಮ ಕಾವ್ಯದ ಮೂಲಕ ಜನರ ಕಣ್ಣು ತೆರೆಸುವ ಕೆಲಸ ಮಾಡಿದ್ದಾರೆ ಎಂದರು.
ಬೇಂದ್ರೆ ಟ್ರಸ್ಟ್ ಅಧ್ಯಕ್ಷ ಡಾ. ಡಿ.ಎಂ.ಹಿರೇಮಠ, ಧಾರವಾಡ ಕಟ್ಟೆ ಗೌರವಾಧ್ಯಕ್ಷ ಪ್ರೊ. ಬಸವರಾಜ ಡೋಣೂರ ಮಾತನಾಡಿದರು. ಡಾ. ಮುಕುಂದ ಲಮಾಣಿ, ಪ್ರೊ. ಸುರೇಶ ಗುದಗನವರ, ಶ್ರೀನಿವಾಸ ವಾಡಪ್ಪಿ, ಬಿ.ಎಸ್. ಶಿರೋಳ, ಎಸ್.ಎಸ್. ಬಂಗಾರಿಮಠ, ಮೇಘಾ ಪಾಟೀಲ, ಪ್ರಕಾಶ ಬಾಳಿಕಾಯಿ, ಬಸಯ್ಯಸ್ವಾಮಿ, ಪ್ರತಿಭಾ ದಾನರಡ್ಡಿ, ಸಂಗಮೇಶ, ಇತರರು ಇದ್ದರು. ವಿಜಯಲಕ್ಷ್ಮೀ ದಾನರಡ್ಡಿ ನಿರೂಪಿಸಿದರು.