ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ 
ಜಿಲ್ಲೆ

ನನಗೆ ತೊಂದರೆ ಕೊಟ್ಟವರು ಅನುಭವಿಸುತ್ತಿದ್ದಾರೆ: ಈಶ್ವರಪ್ಪ

ಶಿವಮೊಗ್ಗ: ಸಚಿವ ಪ್ರಿಯಾಂಕ್ ಖರ್ಗೆ ವಿಚಾರದಲ್ಲಿ ಯಾರು ತಪ್ಪಿತಸ್ಥರಿದ್ದಾರೋ ಅವರನ್ನು ಆ ಭಗವಂತನೇ ನೋಡಿಕೊಳ್ಳುತ್ತಾನೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.

ನಗರದಲ್ಲಿ ಸುದ್ದಿಗಾರರರೊಂದಿಗೆ ಮಾತನಾಡಿ, ನನ್ನ ಮೇಲೆ ಆರೋಪ ಬಂದಾಗ, ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ಅನುಮತಿ ಪಡೆದು ರಾಜೀನಾಮೆ ಕೊಟ್ಟಿದ್ದೆ. ತನಿಖೆ ಬಳಿಕ ನಿರ್ದೋಷಿ ಎಂಬ ತೀರ್ಪು ಬಂತು. ಸಂತೋಷ್ ಆತ್ಮಹತ್ಯೆ ಪ್ರಕರಣ ಸಂದರ್ಭ ನನಗೆ ತೊಂದರೆ ಕೊಟ್ಟವರೆಲ್ಲ ಈಗಲೂ ಅನುಭವಿಸುತ್ತಿದ್ದಾರೆ. ಇನ್ಮುಂದೆಯೂ ಅನುಭವಿಸುತ್ತಾರೆ. ನನ್ನನ್ನು ರಾಜಕಾರಣದಲ್ಲಿ ಮುಗಿಸಲು ಪ್ರಯತ್ನಿಸಿದ್ದರು. ಧರ್ಮ, ದೇಶ ಉಳಿಸಲು ಏನೇನು ಪ್ರಯತ್ನ ಬೇಕೋ ಅದನ್ನು ಮಾಡುತ್ತಿದ್ದೇನೆ. ಕೆಲವರು ನನ್ನ ಹೆಸರು ಬಳಕೆ ಮಾಡಿಕೊಳ್ಳುತ್ತಿದ್ದು, ಅದಕ್ಕೆ ನಾನು ವಿರೋಧ ಮಾಡುವುದಿಲ್ಲ ಎಂದರು.

ಬಸ್ ಪ್ರಯಾಣ ದರ ಶೇ.15ರಷ್ಟು ಹೆಚ್ಚಳ ಮಾಡಲಾಗಿದೆ. ಇದು ಸಾಲ ಮಾಡಿ ಹಬ್ಬದೂಟ ಮಾಡಿದಂತೆ. ಸಾಲ ಮಾಡಿ ಗ್ಯಾರಂಟಿ ಯೋಜನೆ ಜಾರಿಗೊಳಿಸಿದ್ದರಿಂದ ಎಲ್ಲ ದರ ಹೆಚ್ಚಳ ಮಾಡುತ್ತಿದ್ದಾರೆ ಎಂದು ಈಶ್ವರಪ್ಪ ಕಿಡಿ ಕಾರಿದರು. ಜೇಬಲ್ಲಿ ದುಡ್ಡಿದ್ದರೆ ಮಾತ್ರ ಹೆಂಡತಿಗೆ ಸೀರೆ ಕೊಡಿಸಲು ಸಾಧ್ಯ. ಆದರೆ ದುಡ್ಡೇ ಇಲ್ಲದಿದ್ದರೆ ಹೇಗೆ ಕೊಡಿಸುತ್ತಾರೆ? ರಾಜ್ಯ ಸರ್ಕಾರ ಸಾಲ ಮಾಡಿ ಗ್ಯಾರಂಟಿ ಕೊಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.