ಜಮಖಂಡಿ ನಗರದ ಬಸವ ಭವನದಲ್ಲಿ ನಡೆದ ನುಡಿ ನಮನ ಕಾರ್ಯಕ್ರಮದಲ್ಲಿ ದಿ.ಸಿದ್ದು ಮೀಶಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಸಹಜಾನಂದ ಶ್ರೀಗಳು, ಕೃಷ್ಣಾನಂದ ಶ್ರೀಗಳು, ಮಾಜಿ ಶಾಸಕ ಆನಂದ ನ್ಯಾಮಗೌಡ, ಶ್ರೀಶೈಲ ದಳವಾಯಿ, ರಾಜು ಮೇಲಿನಕೇರಿ, ಬಿ.ಎಸ್.ಸಿಂಧೂರ ಇತರರು ಇದ್ದರು. 
ಜಿಲ್ಲೆ

ಹೋರಾಟದ ಮೂಲಕ ಜನರ ಪ್ರೀತಿ ಕಂಡವರು

ದತ್ತಾತ್ರೇಯ ಪಿ ಕುಲಕರ್ಣಿ

ಜಮಖಂಡಿ: ಜನರ ಪ್ರೀತಿ, ವಿಶ್ವಾಸ ಹೋರಾಟದ ಮೂಲಕ ಪಡೆದುಕೊಂಡಿದ್ದು ದಿ.ಸಿದ್ದು ಮೀಶಿ. ಅವರ ಅಗಲಿಕೆ ಈಡಿ ಜಮಖಂಡಿ ನಗರಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಮಾಜಿ ಶಾಸಕ ಆನಂದ ನ್ಯಾಮಗೌಡ ಹೇಳಿದರು.

ನಗರದ ಬಸವ ಭವನದಲ್ಲಿ ದಿ.ಸಿದ್ದು ಮೀಶಿ ಅವರ ಅಭಿಮಾನಿಗಳು ಭಾನುವಾರ ಏರ್ಪಡಿಸಿದ್ದ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಎಲ್ಲ ಸಮಾಜದವರೊಂದಿಗೆ ಒಳ್ಳೆ ಒಡನಾಟಹೊಂದಿದ್ದ ಅವರು ಪ್ರೀತಿಗೆ ಪಾತ್ರರಾಗಿದ್ದರು. ನಗರಸಭೆಗೆ ನಾಲ್ಕು ಭಾರಿ ಆಯ್ಕೆಯಾಗಿ ಒಂದು ಭಾರಿ ಅಧ್ಯಕ್ಷರಾಗಿ ನಗರದಲ್ಲಿ ಅಭಿವೃದ್ಧಿಗೆ ತಮ್ಮದೆ ಕೊಡುಗೆ ನೀಡಿದ್ದಾರೆ, ಪಕ್ಷದ ಕಟ್ಟಾಳು ಆಗಿದ್ದರು ಎಂದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ ಮಾತನಾಡಿ, ಸಿದ್ದು ಮೀಶಿ ಅವರು ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ ಆಗಿದ್ದರು, ಬಡವರಪರ, ದಲಿತಪರ ಹೋರಾಟ ಮೈಗೂಡಿಸಿಕೊಂಡಿದ್ದರು ಎಂದು ತಿಳಿಸಿದರು.

ಜವಳಿ ನಿಗಮ ಮಾಜಿ ಉಪಾಧ್ಯಕ್ಷ ನಜೀರ ಕಂಗನೊಳ್ಳಿ ಮಾತನಾಡಿ, ಸಿದ್ದು ಮೀಶಿ ಅವರ ನಿಧನದಿಂದ ಪಕ್ಷಕ್ಕೆ ತುಂಬಲಾರದ ನಷ್ಟ ಉಂಟಾಗಿದೆ, ನಿಷ್ಠುರವಾದಿಯಾಗಿದ್ದರು ಎಂದರು.

ಮುಖಂಡ ಸಿದ್ದು ಕೊಣ್ಣೂರ, ಹಿರಿಯ ನ್ಯಾಯವಾದಿ ಎನ್.ಎಸ್.ದೆವರವರ, ಶ್ಯಾಮರಾವ ಘಾಟಗೆ, ಮುತ್ತಿನಕಂತಿ ಹಿರೇಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು, ರುದ್ರಸ್ವಾಮಿಪೇಠದ ಸಹಜಾನಂದ ಶ್ರೀಗಳು, ಓಲೆಮಠದ ಆನಂದ ದೇವರು ಮಾತನಾಡಿದರು.

ವೇದಿಕೆಯಲ್ಲಿ ಕೃಷ್ಣಾನಂದ ಶ್ರೀಗಳು, ಮಾದುಲಿಂಗ ಶ್ರೀಗಳು, ಶ್ರೀಶೈಲ ದಳವಾಯಿ, ಬಿ.ಎಸ್.ಸಿಂಧೂರ, ರಾಜು ಮನ್ನಿಕೇರಿ, ರಾಜು ಮೇಲಿನಕೇರಿ, ಮಹಾದೇವ ಪಾಟೀಲ, ಅರ್ಜುನ ದಳವಾಯಿ, ಕಾಡು ಮಾಳಿ, ಮಾಮೂನ ಪಾರ್ಥನಳ್ಳಿ, ರವಿ ಯಡಹಳ್ಳಿ, ರವಿ ಕಾಂಬಳೆ, ಶಂಕರ ಕಾಂಬಳೆ, ಪ್ರಕಾಶ ಕಣಬೂರ, ಅಬುಬಕರ ಕುಡಚಿ ಇತರರು ಇದ್ದರು. ಶಿವಲಿಂಗ ಗೊಂಬಿಗುಡ್ಡ ಸ್ವಾಗತಿಸಿದರು. ಯಮನಪ್ಪ ಗುಣದಾಳ ನಿರೂಪಿಸಿದರು. ಮುತ್ತಣ್ಣ ಮೇತ್ರಿ ವಂದಿಸಿದರು.

ಸಂಜು ಮೀಶಿ ಆಯ್ಕೆ ಘೊಷಣೆ: ದಿ.ಸಿದ್ದು ಮೀಶಿ ಅವರು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು ಅವರ ಸ್ಥಾನಕ್ಕೆ ಸಂಜು ಮೀಶಿ ಅವರನ್ನು ಆಯ್ಕೆ ಮಾಡಲಾಗುವುದು ಎಂದು ಕಾರ್ಯಕ್ರಮದ ವೇದಿಕೆಯಲ್ಲಿ ಮಾಜಿ ಶಾಸಕ ಆನಂದ ನ್ಯಾಮಗೌಡ ಘೊಷಿಸಿದರು.