ಕೋಹಳ್ಳಿ: ಗ್ರಾಮದ ದಲಿತ ಮಹಿಳೆಯರಿಗಾಗಿ ನಿರ್ಮಿಸಿದ ಶೌಚಗೃಹವನ್ನು ಕಳೆದ 40 ದಿನಗಳ ಹಿಂದೆ ಕಿಡಿಗೇಡಿಗಳು ನಾಶಮಾಡಿದ್ದಕ್ಕೆ ತಾಲೂಕಾಡಳಿತ ಹಾಗೂ ಪೊಲೀಸ್ ಇಲಾಖೆಗೆ ದೂರು ನೀಡಿದ್ದರೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಆರೋಪಿಸಿ ಗ್ರಾಮಸ್ಥರು ಸೋಮವಾರ ಡಾ.ಅಂಬೇಡ್ಕರ್ ವತ್ತದಲ್ಲಿ ಪ್ರತಿಭಟನೆ ನಡೆಸಿದರು.
ಮಾಜಿ ಶಾಸಕ ಶಹಜಹಾನ ಡೊಂಗರಗಾಂವ ಮಾತನಾಡಿ, ಶೌಚಗೃಹ ನಾಶಪಡಿಸಿದವರ ವಿರುದ್ಧ ಸುಮ್ಮನಿದ್ದರೆ ಸರ್ಕಾರದ ಮತ್ತೊಂದು ಕಟ್ಟಡ ನಾಶ ಮಾಡುತ್ತಾರೆ. ಹಾಗಾಗಿ ಪೊಲೀಸರು ಹಾಗೂ ಅಧಿಕಾರಿಗಳು ಕ್ರಮ ಕೆಗೊಳ್ಳಬೇಕು ಎಂದು ಆಗ್ರಹಿಸಿದರು.
ಸ್ಥಳಕ್ಕೆ ಅಥಣಿ ತಹಸೀಲ್ದಾರ್ ಸಿದರಾಯ ಭೋಸಗಿ ಆಗಮಿಸಿ, ಮಹಿಳೆಯರ ಸಮಸ್ಯೆ ಆಲಿಸಿ ಸೂಕ್ತ ಕ್ರಮ, ಹೊಸ ಶೌಚಗೃಹ ನಿರ್ಮಿಸುವ ಬಗ್ಗೆ ತಾಲೂಕು ಅಧಿಕಾರಿಗಳ ಜತೆ ಚರ್ಚಿಸಿ ಕ್ರಮ ಜರುಗಿಸುವ ಭರವಸೆ ನೀಡಿದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶಿವಾನಂದ ಕಲ್ಲಾಪುರ ಮಾತನಾಡಿ, ಶೌಚಗೃಹ ನಾಶಪಡಿಸಿದ್ದರಿಂದ ಹೊಸದನ್ನು ನಿರ್ಮಿಸಲು ಕ್ರಿಯಾಯೋಜನೆ ಮಾಡಿ ಸರ್ಕಾರದಿಂದ ಮಂಜೂರಾತಿ ಪಡೆದು ಕಟ್ಟಡ ನಿರ್ಮಿಸುವುದಾಗಿ ತಿಳಿಸಿದ ಮೇಲೆ ಮಹಿಳೆಯರು ಪ್ರತಿಭಟನೆ ನಿಲ್ಲಿಸಿದರು.
ದಲಿತ ಮುಖಂಡ ಚಿದಾನಂದ ತಳಕೇರಿ ಮಾತನಾಡಿ, ಶೌಚಗೃಹ ನಾಶಪಡಿಸಿದವರ ವಿರುದ್ಧ ಕ್ರಮ ಕೈಗೊಳ್ಳದ ಪಿಎಸ್ಐ ಅವರನ್ನು ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿದರು. ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಪಿ.ಎಚ್.ಪತ್ತಾರ, ಗ್ರಾಪಂ ಮಾಜಿ ಅಧ್ಯ ತುಕಾರಾಮ ದೇವಖಾತೆ, ಪಿಎಸ್ಐ ಚಂದ್ರಶೇಖರ ಸಾಗನೂರ, ವಿಕಾಸ ಗುರಪ್ಪಗೋಳ, ಮಹಾದೇವ ಕನ್ನಾಳ, ಕೂಡಲಪ್ಪ ನಾಟೀಕಾರ, ರವಿ ಶಿಂಗಿ, ರೂಪಾ ಕನ್ನಾಳ, ವಿದ್ಯಾ ಸಿಂಗಿ, ಪೂಜಾ ಸಿಂಗಿ, ಅನಸುಯಾ ಕಾಂಬಳೆ, ಸರಸ್ವತಿ ಕನ್ನಾಳ ಇತರರಿದ್ದರು.