ಚಿಕ್ಕಮಗಳೂರು: ಗಡಿಯೊಳಗಿನ ಪರಭಾಷಾ ವ್ಯಾಮೋಹಿಗಳು, ಕನ್ನಡದ ನೆಲದಲ್ಲೇ ಕನ್ನಡವನ್ನು ಹೀಗಳೆಯುವ ಭಾಷಾ ವಿರೋಧಿಗಳಿಗೆ ಬಿಸಿ ಮುಟ್ಟಿಸಿ ಸರಿದಾರಿಗೆ ತರಬೇಕಿದೆ ಎಂದು ಕನ್ನಡ ಮತ್ತು ಸಂಸ್ಕøತಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಹೇಳಿದರು.
ನಗರದ ಜಿಲ್ಲಾ ಆಟದ ಮೈದಾನದಲ್ಲಿ ಜಿಲ್ಲಾಡಳಿತದಿಂದ ಭಾನುವಾರ ಆಯೋಜಿಸಲಾಗಿದ್ದ 65ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಸಂದೇಶ ನೀಡಿದರು. ನಾಡಿನ ನೆಲ, ಜಲ, ಭಾಷೆ, ಗಡಿ ತಂಟೆಗೆ ಯಾರೇ ಬಂದರೂ ಅವರಿಗೆ ತಕ್ಕ ಪಾಠ ಕಲಿಸಿಯೇ ತೀರಬೇಕು. ಕನ್ನಡಿಗರ ಔದಾರ್ಯ ದುರುಪಯೋಗಕ್ಕೆ ಯಾರಿಗೂ ಅವಕಾಶ ನೀಡಬಾರದು ಎಂದು ಕಟುವಾಗಿ ಹೇಳಿದರು.
* ಸರ್ಕಾರದ ಸಂಕಲ್ಪಕ್ಕೆ ಕೈಜೋಡಿಸಬೇಕು
ಕನ್ನಡ ಭಾಷೆ ಕರ್ನಾಟಕದಲ್ಲಿ ಸಾರ್ವಭೌಮತ್ವ ಪಡೆಯಬೇಕಾದರೆ ಸರ್ವ ಕನ್ನಡಿಗರ ಸತ್ಸಂಕಲ್ಪ ಸರ್ಕಾರದ ಹಂಬಲಕ್ಕೆ ಜತೆಗೂಡಬೇಕಾಗುತ್ತದೆ. ಹಾಗಾದಾಗ ಮಾತ್ರ ಕನ್ನಡದ ಮತ್ತೊಂದು ಪರ್ವ ಕಾಲವನ್ನು ನಾವು ಆರಂಭಿಸಲು ಸಾಧ್ಯ. ರಾಜ್ಯಾದ್ಯಂತ ಈಗ ಎಲ್ಲೆಲ್ಲೂ ಕನ್ನಡದ ಹಾಡು, ಮಾತು, ಮಂಥನದ್ದೇ ಸುದ್ದಿ. ಕನ್ನಡ ಜಗದಗಲ ವಿಸ್ತರಿಸಿಕೊಳ್ಳಬೇಕೆಂಬ ಮಹದಾಸೆ ನಿಜವಾಗಲೆಂದು ಹಾರೈಸುವ ಈ ಹೊತ್ತಿನಲ್ಲಿ ಭಾಷೆ, ನೆಲ, ಜಲದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವುದು ಪ್ರತಿಯೊಬ್ಬ ಕನ್ನಡಿಗರ ಕರ್ತವ್ಯ. ಮನುಷ್ಯ ಮನುಷ್ಯರ ನಡುವೆ ಭಾವದ ಬೆಸೆಯುವ ಭಾಷೆ ನಮ್ಮೆಲ್ಲರ ಜೀವ ಭಾವವಾಗಬೇಕು ಎಂದರು.
ಆಧುನಿಕ ತಂತ್ರಜ್ಞಾನ ಬದಲಾದ ಸಾಮಾಜಿಕ ಚಿತ್ರಣ, ಪರಭಾಷೆಗಳ ಭೋರ್ಗರೆತದ ಮಧ್ಯೆ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಬೇಕಿದೆ. ಈ ನಾಡು ನಮ್ಮದು. ಈ ಭೂಮಿ ನಮ್ಮದು ಎಂಬ ಅಭಿಮಾನವನ್ನು ಪ್ರತಿಯೊಬ್ಬರಲ್ಲೂ ಉಕ್ಕಿಸಬೇಕಿದೆ. ಆ ದಿಕ್ಕಿನಲ್ಲಿ ಎಲ್ಲರೂ ಕೈಜೋಡಿಸಿ ದುಡಿಯಬೇಕಿದೆ ಎಂದರು.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಶಿಕ್ಷಣ ನೀತಿಯಲ್ಲಿ ಬೋಧನೆಗೆ ಆಯ್ದುಕೊಳ್ಳುವುದು ಮಾತೃಭಾಷೆಯೇ ಆದರೆ ಮಗುವಿಗೆ ವಿಷಯ ಅತ್ಯಂತ ಸ್ಪಷ್ಟವಾಗಿ, ಸರಳವಾಗಿ ಅರ್ಥವಾಗುತ್ತದೆ. ನವಪೀಳಿಗೆಯನ್ನು ಸ್ವಾಭಿಮಾನಿ ಹಾಗೂ ಸ್ವಾವಲಂಬಿಯಾಗಿಸಲು ಪ್ರಾದೇಶಿಕ ಹಾಗೂ ವಿದೇಶಿ ಭಾಷಾ ಕಲಿಕೆಗೂ ಅವಕಾಶವಿರುವುದರಿಂದ ಭವಿಷ್ಯದ ಸಂವಹನಕ್ಕೆ ಇದು ಅನುಕೂಲಕರವಾಗಲಿದೆ ಎಂದು ಹೇಳಿದರು.
ಕನ್ನಡದ ಗೇಯತೆ ಮತ್ತು ಸಿರಿವಂತಿಕೆ ಬೆಳಗಿ ಕೀರ್ತಿಶೇಷರಾದವರನ್ನು ಈ ಸಂದರ್ಭದಲ್ಲಿ ನೆನೆಯುವುದರ ಜತೆಗೆ ನಾಡಿಗೆ ಅವರ ಕೊಡುಗೆ, ಜೀವನಾದರ್ಶವನ್ನು ಮುಂದಿನ ತಲೆಮಾರಿಗೆ ದಾಟಿಸುವ ಕೆಲಸ ಸಹ ಎಲ್ಲರಿಂದಾಗಬೇಕಿದೆ ಎಂದರು.
* 5 ಸಾವಿರ ಕೋಟಿ ಬಂಡವಾಳ ನಿರೀಕ್ಷೆ
ಪ್ರವಾಸೋದ್ಯಮ ಎನ್ನುವುದು ಒಂದು ರಾಜ್ಯ ಹಾಗೂ ಹಲವು ಜಗತ್ತುಗಳು ಎಂಬ ಪರಿಕಲ್ಪನೆಯದು. ಇಲಾಖೆಯ ಕಾರ್ಯ ಗೌರವಗಳು ತುಂಬಾ ಸವಾಲಿನದ್ದು ಮತ್ತು ಹೊಸ ಹೊಳಹುಗಳನ್ನು ನಿರಂತರವಾಗಿ ನೀಡುತ್ತಲೇ ಇರುತ್ತವೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಪ್ರವಾಸೋದ್ಯಮ ನೀತಿ 2020-25 ಅನ್ನು ಯಶಸ್ವಿಯಾಗಿ ಜಾರಿಗೆ ತರಲಾಗಿದೆ. ಇದರಿಂದ ಮುಂದಿನ ಐದು ವರ್ಷಗಳಲ್ಲಿ 5 ಸಾವಿರ ಕೋಟಿ ಬಂಡವಾಳ ಹರಿದು ಬರುವ ನಿರೀಕ್ಷೆ ಹೊಂದಿರುವುದಾಗಿ ಹೇಳಿದರು.
ಅಭಿವೃದ್ಧಿ ಕಾರ್ಯಗಳತ್ತ ಹೊರಳಿದ ಸಚಿವರು, ಚಿಕ್ಕಮಗಳೂರು ನಗರದ ಕುವೆಂಪು ಕಲಾಮಂದಿರಕ್ಕೆ 63 ಲಕ್ಷ ರೂ., ಆಂಪಿಕ್ ಥಿಯೇಟರ್ ನಿರ್ಮಾಣಕ್ಕೆ 4 ಕೋಟಿ ರೂ., ಕೊಪ್ಪ ತಾಲೂಕು ಹರಿಹರಪುರ ಪ್ರಬೋಧಿನಿ ಟ್ರಸ್ಟ್ ಸಾಂಸ್ಕøತಿಕ ಭವನಕ್ಕೆ 3 ಕೋಟಿ ರೂ. ಮಂಜೂರು ಮಾಡಲಾಗಿದೆ ಎಂದರು.
ಕಾರ್ಯಕ್ರಮಕ್ಕೆ ಮೊದಲು ಕನ್ನಡ ತಾಯಿ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದ ಸಚಿವರು ವಿವಿಧ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿದರು. ವಿಧಾನ ಪರಿಷತ್ ಉಪ ಸಭಾಪತಿ ಎಸ್.ಎಲ್.ಧರ್ಮೇಗೌಡ, ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್, ಜಿಪಂ ಅಧ್ಯಕ್ಷೆ ಸುಜಾತ ಕೃಷ್ಣಪ್ಪ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಆನಂದ್, ಎಪಿಎಂಸಿ ಅಧ್ಯಕ್ಷ ಶಿವೇಗೌಡ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಜಿಪಂ ಸಿಇಒ ಎಸ್.ಪೂವಿತ, ಎಸ್ಪಿ ಎಂ.ಎಚ್.ಅಕ್ಷಯ್ ಮತ್ತಿತರರು ಕಾರ್ಯಕ್ರಮದಲ್ಲಿದ್ದರು.
ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್‍ಟಾಪ್ ವಿತರಿಸಲಾಯಿತು.
ರಾಜ್ಯಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ಮೋಹಿನಿ ಸಿದ್ದೇಗೌಡ, ಎಂ.ಎನ್.ಷಡಕ್ಷರಿ ಅವರನ್ನು ಗೌರವಿಸಲಾಯಿತು.
ಕರೊನಾ ಹಿನ್ನೆಲೆಯಲ್ಲಿ ಸಮಾರಂಭ ಅತ್ಯಂತ ಸರಳವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಪ್ರತಿವರ್ಷದಂತೆ ನಾಡು-ನುಡಿಯ ಇತಿಹಾಸ ಬಿಂಬಿಸುವ ಸ್ತಬ್ಧ ಚಿತ್ರಗಳಾಗಲಿ, ವಿದ್ಯಾರ್ಥಿಗಳ ಕಲರವದೊಂದಿಗೆ ಗಮನ ಸೆಳೆಯುತ್ತಿದ್ದ ಸಾಂಸ್ಕøತಿಕ ಕಾರ್ಯಕ್ರಮಗಳಾಗಲಿ ಇರಲಿಲ್ಲ. ಪೆÇಲೀಸ್ ಇಲಾಖೆ ಹಾಗೂ ಹೋಂ ಗಾಡ್ರ್ಸ್‍ನ ತುಕಡಿಗಳು ಮಾತ್ರ ಪಥ ಸಂಚಲನದಲ್ಲಿ ಭಾಗವಹಿಸಿದ್ದವು. ಶಾಲಾ ಮಕ್ಕಳು, ಪ್ರೇಕ್ಷಕರ ಸಂಖ್ಯೆ ಸಂಪೂರ್ಣ ಕ್ಷೀಣವಾಗಿತ್ತು.