ಚಿಕ್ಕಮಗಳೂರು: ನಂಬಿಕೆಗಳ ಜಗತ್ತಿನಲ್ಲಿ ಭಗವಂತನನ್ನು ತೋರಿಸು ಎಂದು ಯಾರಾದರೂ ಕೇಳಿದರೆ ತೋರಿಸಲು ಬರುತ್ತದೆ. ನೋಡುವ ದೃಷ್ಟಿ ಇಲ್ಲದವರಿಗೆ ಭಗವಂತ ಎದುರಿಗೆ ಬಂದು ನಿಂತರೂ ಕಾಣುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
ಹನುಮ ಜಯಂತಿ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದ ಬಗ್ಗೆ ಸುದ್ದಿಗಾರರಿಗೆ ಸೋಮವಾರ ಪ್ರತಿಕ್ರಿಯಿಸಿದ ರವಿ, ಕೆಲವರಿಗೆ ಎಲ್ಲವನ್ನು ಅನುಮಾನಿಸುವ ಪ್ರವೃತ್ತಿ ಇರುತ್ತದೆ. ಸಿದ್ದರಾಮಯ್ಯ ಅವರಿಗೆ ಹಾಗೆ ಅನುಮಾನಿಸುವ ಕಾಯಿಲೆ ಇದ್ದರೆ ಅದು ಅವರ ದೋಷ ಎಂದರು.
ತಂದೆಯ ಬಗ್ಗೆ ಸಾಕ್ಷ್ಯ ಕೇಳುವುದಿಲ್ಲ
ತಾಯಿ ತನ್ನ ಮಕ್ಕಳಿಗೆ ನಿಮ್ಮ ತಂದೆ ಇವರು ಎಂದು ಹೇಳಿದಾಗ ನಂಬುತ್ತಾರೆ ಹೊರತು ತಂದೆಯೆ ಇವರು ಎಂಬುದಕ್ಕೆ ಸಾಕ್ಷಿ ಯಾರೆಂದು ಕೇಳುವುದಿಲ್ಲ. ಹಾಗೆ ಸಾಕ್ಷಿ ಕೇಳುವ ಮನಸ್ಥಿತಿ ಇರುವ ಜನ ಕೆಲವರಿರುತ್ತಾರೆ. ಅನುಮಾನಿಸುವ ಪ್ರವೃತ್ತಿ ಬಹುಶಃ ಹುಟ್ಟಿನಿಂದ ಬಂದಿರೋದಲ್ಲ. ಸಹವಾಸ ದೋಷದಿಂದ ಬಂದಿರೋದಾಗಿ ಭಾವಿಸುತ್ತೇನೆ. ಕಾರಣ ಅವರ ಪಾಲಕರು ದೇವರ ಮೇಲೆ ಶ್ರದ್ಧೆ ಹೊಂದಿದವರು ಆ ಕಾರಣಕ್ಕೆ ಭಗವಂತನ ಹೆಸರನ್ನೆ ಸಿದ್ದರಾಮಯ್ಯ ಅವರಿಗೆ ನಾಮಕರಣ ಮಾಡಿದ್ದಾರೆ ಎಂದರು.
ವಿವರವಾದ ತನಿಖೆ ಅಗತ್ಯ
ಹಿರಿಯ ಐಪಿಎಸ್ ಅಧಿಕಾರಿಗಳ ಶೀತಲ ಸಮರದ ಬಗ್ಗೆ ಪ್ರತಿಕ್ರಿಯಿಸಿ, ಅವರು ಎತ್ತಿರುವ ಅಂಶಗಳ ಬಗ್ಗೆ ವಿವರವಾಗಿ ತನಿಖೆಯಾಗಬೇಕಾದ ಅವಶ್ಯವಿದೆ. ಯತ್ನಾಳ್ ಹೇಳಿಕೆ ಕುರಿತಂತೆ ರಾಜಕಾರಣದಲ್ಲಿ ಎಲ್ಲವೂ ಇರುತ್ತದೆ. ಸದ್ದುಗದ್ದಲವಿಲ್ಲದಿದ್ದರೆ ಜಾತ್ರೆಯಾಗುವುದಿಲ್ಲ ಎಂದರು.