ಜಿಲ್ಲೆ

ನಾಯಕರಾಗಿ ಆಯ್ಕೆಯಾದವರಿಗೆ ಜವಾಬ್ದಾರಿಗಳು ಹೆಚ್ಚು

ಆದರ್ಶ್. ಎಂ.ಕೆ.

ಮಡಿಕೇರಿ: ನಾಯಕರಾಗಿ ಆಯ್ಕೆಯಾದವರಿಗೆ ಜವಾಬ್ದಾರಿಗಳು ಹೆಚ್ಚುತ್ತದೆ ಎಂದು ಕುಶಾಲನಗರದ ಅತ್ತೂರು ಜ್ಞಾನಗಂಗಾ ವಸತಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಟಿ.ಕೆ.ಸುಧೀರ್ ಹೇಳಿದರು.

ಕುಶಾಲನಗರದ ಅತ್ತೂರು ಜ್ಞಾನಗಂಗಾ ವಸತಿಶಾಲೆಯಲ್ಲಿ ೨೦೨೫-೨೬ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಮಂತ್ರಿಮಂಡಲದ ಪದಗ್ರಹಣ ಹಾಗೂ ಗುರು ಪೂರ್ಣಿಮಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಪ್ರತಿಯೊಬ್ಬರು ತಮ್ಮ ಕರ್ತವ್ಯವನ್ನು ಶಿಸ್ತಿನಿಂದ ಪಾಲಿಸಬೇಕು. ಅಲ್ಲದೆ ನಾಯಕರಿಗೆ ಇರಬೇಕಾದ ಜವಾಬ್ದಾರಿಗಳೇನು ಎಂದು ತಿಳಿದುಕೊಂಡು ಅದನ್ನು ಪಾಲಿಸಬೇಕು. ನಾಯಕರಾಗಿ ಆಯ್ಕೆಯಾದವರಿಗೆ ಜವಾಬ್ದಾರಿಗಳು ಹೆಚ್ಚುತ್ತದೆ ಎಂದರು.

ಪರಿಶ್ರಮ, ಪ್ರಾಮಾಣಿಕತೆ, ಕರ್ತವ್ಯನಿಷ್ಠೆಯನ್ನು ಅಳವಡಿಸಿಕೊಂಡರೆ ಉತ್ತಮ ನಾಯಕನಾಗಲು ಸಾಧ್ಯವೆಂದು ಅಭಿಪ್ರಾಯಪಟ್ಟ ಅವರು, ಆಯ್ಕೆಯಾದವರೆಲ್ಲರು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿ ಎಂದು ಶುಭ ಕೋರಿದರು.

ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಬಿ.ಎಸ್.ನಿಂಗಪ್ಪ ಮಾತನಾಡಿ, ವಿದ್ಯಾರ್ಥಿ ಮಂತ್ರಿಮಂಡಲಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು ಶಾಲೆಯ ನೀತಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ಇತರರು ಪಾಲಿಸುವಂತೆ ನೋಡಿಕೊಳ್ಳಬೇಕು ಮತ್ತು ಇತರರಿಗೆ ಮಾದರಿಯಾಗಬೇಕು ಎಂದು ಸಲಹೆ ನೀಡಿದರು.

ಶಾಲಾ ಚುನಾವಣೆಯ ಮೂಲಕ ಆಯ್ಕೆಯಾದ ಶಾಲಾ ನಾಯಕಿ ೧೦ನೇ ತರಗತಿಯ ಟಿ.ಎಸ್.ಶ್ರೀನಿಧಿ ಹಾಗೂ ಉಪನಾಯಕ ೯ನೇ ತರಗತಿಯ ಎಂ.ಶಶಾಂಕ್ ಸೇರಿದಂತೆ ಮಂತ್ರಿಮಂಡಲದ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲರಾದ ಎಸ್.ಎಂ.ಸತ್ಯಸುಲೋಚನ ಪ್ರಮಾಣ ವಚನ ಬೋಧಿಸಿದರು. ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲ ಸಿ.ಕೆ.ನಾಗರಾಜ್ ಹಾಗೂ ಶಿಕ್ಷಕ ವೃಂದ ಉಪಸ್ಥಿತರಿದ್ದರು. ಗುರು ಪೂರ್ಣಿಮಾ ಅಂಗವಾಗಿ ವಿದ್ಯಾರ್ಥಿಗಳು ಶಿಕ್ಷಕರಿಗೆ ಗುರು ವಂದನೆ ಸಲ್ಲಿಸಿದರು.