ಕುಶಾಲನಗರ:
ತೊರೆನೂರು ಗ್ರಾಮಪಂಚಾಯಿತಿ ಸಾಮಾನ್ಯ ಸಭೆ ಅಧ್ಯಕ್ಷೆ ಶೋಭಾ ಪ್ರಕಾಶ್ ಅಧ್ಯಕ್ಷತೆಯಲ್ಲಿ ಸೋಮವಾರ ನಡೆಯಿತು. ಸಭೆಯಲ್ಲಿ ಕಳೆದ ತಿಂಗಳಲ್ಲಿ ನಡೆದ ಗ್ರಾಮ ಸಭೆಯ ಚರ್ಚೆಗಳ ಅನುಗುಣವಾಗಿ ಹಲವು ವಿಷಯಗಳ ಪ್ರಸ್ತಾವನೆ ಮಾಡಲಾಯಿತು. ಇದರನ್ವಯ ಸಂಬAಧಿಸಿದ ಇಲಾಖೆ ಜತೆ ಪತ್ರ ವ್ಯವಹಾರ ಮಾಡುವ ಬಗ್ಗೆ ಹಾಜರಿದ್ದ ಸದಸ್ಯರು ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಸಾರ್ವಜನಿಕರ ವಿವಿಧ ಅರ್ಜಿಗಳ ಬಗ್ಗೆ ಚರ್ಚಿಸಿ ಸಭೆಯಲ್ಲಿ ಅನುಮೋದನೆ ಪಡೆಯಲಾಯಿತು.
ಗ್ರಾಮದಲ್ಲಿರುವ ಪಶು ಆಸ್ಪತ್ರೆಯನ್ನು ಗ್ರಾಮ ಪಂಚಾಯತಿ ಅನುದಾನದಲ್ಲಿ ಶುಚಿಗೊಳಿಸಲು ತೀರ್ಮಾನಿಸಲಾಯಿತು. ತೊರೆನೂರು ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಿನಂಚಿನ ಪ್ರದೇಶಗಳಲ್ಲಿ ಆನೆ ಹಾವಳಿ ತಡೆಗಟುವಲ್ಲಿ ಅರಣ್ಯ ಇಲಾಖೆ ವಿಫಲವಾಗಿರುವ ಬಗ್ಗೆ ಹಾಜರಿದ್ದ ಸದಸ್ಯರಿಂದ ಆಕ್ರೋಶ ವ್ಯಕ್ತವಾಯಿತು. ಆನೆ ಹಾವಳಿ ಬಗ್ಗೆ, ರೈಲ್ವೆ ಕಂಬಿ ಅಳವಡಿಸದ ಬಗ್ಗೆ ಹಾಗೂ ಆನೆ ಕಂದಕಗಳ ನಿರ್ಮಾಣ ಮಾಡದಿರುವ ಬಗ್ಗೆ ಸಭೆಯಲ್ಲಿ ಅಸಮಾಧಾನ ವ್ಯಕ್ತವಾಯಿತು.
ಈ ವೇಳೆ ಅಧ್ಯಕ್ಷೆ ಶೋಭಾ ಪ್ರಕಾಶ್ ಮಾತನಾಡಿ ಸದಸ್ಯರ ಸಹಕಾರದೊಂದಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ವಾರ್ಡಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು, ಅದ್ಯತೆಯ ಅನುಗುಣವಾಗಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಅಲ್ಲದೆ ಕುಡಿಯುವ ನೀರು, ಶುಚಿತ್ವಕ್ಕೆ ಹೆಚ್ಚಿನ ಕ್ರಮ ವಹಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ರೂಪ ಮಹೇಶ್, ಸದಸ್ಯರಾದ ದೇವರಾಜ್, ಬೇಬಿಯಣ್ಣ, ಶಿವಕುಮಾರ್, ಮಹದೇವ, ಪ್ರಕಾಶ್, ಯಶೋಧ, ಸಾವಿತ್ರಿ, ನಿಂಗಾಜಮ್ಮ, ಅಭಿವೃದ್ಧಿ ಅಧಿಕಾರಿ ಶ್ಯಾಮ್ ಇದ್ದರು.