ಸಾಂದರ್ಭಿಕ ಚಿತ್ರ 
ಜಿಲ್ಲೆ

ತೋಕೂರು ಕೊಲೆ ಆರೋಪಿ ಗೋವಾದಲ್ಲಿ ಬಂಧನ

ಹರೀಶ ಎಂ.
ಮಂಗಳೂರು: ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ತೋಕೂರು ಜೋಕಟ್ಟೆ ಅರಿಕೆರೆ ಎಂ ಎಸ್ ಇ ಝೆಡ್ ಬಳಿ ಜೂ.10ರಂದು ನಡೆದಿದ್ದ ಅಪರಿಚಿತ ವ್ಯಕ್ತಿಯ ಕೊಲೆ ಪ್ರಕರಣದ ಆರೋಪಿಯನ್ನು ಕೊಂಕಣ ರೈಲ್ವೆ ಪೊಲೀಸರು ಗೋವಾದಲ್ಲಿ ಬಂಧಿಸಿ, ಪಣಂಬೂರು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
ಬಿಹಾರದ ದರ್ಭಂಗಾ, ಶಿವಾಜಿ ನಗರ ನಿವಾಸಿ ಪ್ರಶಾಂತ್ ಕುಮಾರ್ (36) ಬಂಧಿತ ಆರೋಪಿ.
ಪ್ರಕರಣದ ವಿವರ: ಕುತ್ತಿಗೆ ಕಡಿದ ಸ್ಥಿತಿಯಲ್ಲಿ ಅಪರಿಚಿತ ಗಂಡಸಿನ ಶವ ಬುಧವಾರ ಬೆಳಗ್ಗೆ ತೋಕೂರು ಜೋಕಟ್ಟೆ ಅರಿಕೆರೆ ಎಂ ಎಸ್ ಇ ಝೆಡ್ ಬಳಿ ಪತ್ತೆಯಾಗಿತ್ತು. ದಾರಿ ಹೋಕರು ಮಾಹಿತಿ ನೀಡಿದಂತೆ ಸ್ಥಳೀಯರಾದ ಕಿಶೋರ್ ಮತ್ತು ಗಣೇಶ್ ಅವರು ಹೋಗಿ ನೋಡಿದಾಗ ಕುತ್ತಿಗೆಗೆ ಕಡಿದ ಸ್ಥಿತಿಯಲ್ಲಿತ್ತು. ಮನೆಯ ಪಕ್ಕದಲ್ಲಿ ಮೋನಪ್ಪ ಎಂಬವರಿಗೆ ಸೇರಿದ ಬಾಡಿಗೆ ಮನೆಯ ಅಂಗಳದ ಮುಂಭಾಗದ ಗೇಟಿನ ಬಳಿ ರಕ್ತದ ಕಲೆಗಳು ಕಂಡು ಬಂದಿದ್ದು, ಈ ಕೃತ್ಯವನ್ನು ಮೋನಪ್ಪ ಅವರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದವನು ಮಾಡಿರುವ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ಆತ ಮೊಬೈಲ್ ನಂಬ್ರ ಸ್ವಿಚ್ ಆಫ್ ಮಾಡಿ ನಾಪತ್ತೆಯಾಗಿದ್ದ. ಆರೋಪಿ ಯಾವುದೋ ಕಾರಣದಿಂದ ಅಪರಿಚಿತ ವ್ಯಕ್ತಿಯ ಕುತ್ತಿಗೆಗೆ ಕಡಿದು ಕೊಲೆ ಮಾಡಿ ಎಸೆದಿರುವ ಶಂಕೆ ಇದೆ ಎಂದು ಸ್ಥಳೀಯರು ಪಣಂಬೂರು ಪೊಲೀಸರಿಗೆ ದೂರು ನೀಡಿದ್ದರು.
ಕೊಂಕಣ ರೈಲ್ವೆ ಪೊಲೀಸರ ಕಾರ್ಯಾಚರಣೆ: ಆರೋಪಿ ನಿಜಾಮುದ್ದೀನ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಗೋವಾಕ್ಕೆ ಬರುತ್ತಿದ್ದಾನೆ ಎಂಬ ಸುಳಿವು ಲಭಿಸಿದೆ. ತಕ್ಷಣ ಕೊಂಕಣ ರೈಲ್ವೆ ಪೊಲೀಸ್ ಠಾಣೆಯ ಪಿಐ ವಿಕ್ರಂ ನಾಯಕ್ ನಿರ್ದೇಶನದಂತೆ ಜಿತೇಂದ್ರ ಗೌಡ ನೇತೃತ್ವದ ತಂಡ ರಚನೆ ಮಾಡಿದ್ದಾರೆ. ಕಾನ್‌ಸ್ಟೇಬಲ್‌ಗಳಾದ ವಸೀಂ ಶೇಖ್, ಮಂಜುನಾಥ ದೊಡ್ಡಮನಿ, ಸಂಜಯ್ ಗಾಂವ್ಕರ್ ತಂಡ ರೈಲ್ವೇ ನಿಲ್ದಾಣದಲ್ಲಿ ಬೀಡು ಬಿಟ್ಟರು. ಕೊಂಕಣ ರೈಲ್ವೆ ಎಸ್ಪಿ ಶೇಖರ್ ಪ್ರಭುದೇಸಾಯಿ, ಡಿವೈಎಸ್ಪಿ ಹಿರು ಕಾವ್ಲೇಕರ್ ಹಾಗೂ ಪಿಐ ವಿಕ್ರಂ ನಾಯಕ್ ಅವರ ಮಾರ್ಗದರ್ಶನ, ಸಿಸಿ ದೃಶ್ಯಾವಳಿ, ತಾಂತ್ರಿಕ ವಿಶ್ಲೇಷಣೆ ಹಾಗೂ ಗುಪ್ತಚರ ಮಾಹಿತಿ ಆಧಾರದ ಮೇಲೆ ಸಂಶಯಾಸ್ಪದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಗೋವಾ ಕೊಂಕಣ ರೈಲ್ವೆ ಪೊಲೀಸ್ ಠಾಣೆಯಿಂದ ಕೇಸಿನ ತನಿಖಾ ಅಧಿಕಾರಿ ಪಣಂಬೂರು ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಮೊಹಮ್ಮದ್ ಸಲೀಂ ಅವರಿಗೆ ಹಸ್ತಾಂತರಿಸಲಾಗಿದೆ. ಆರೋಪಿಯನ್ನು ಮಂಗಳೂರಿಗೆ ಕರೆ ತಂದು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.