ಜಿಲ್ಲೆ

ನಿಶ್ಚಿತಾರ್ಥ ಮಾಡಿಕೊಂಡಿದ್ದ ಹುಡುಗಿಗೆ ಮೊಬೈಲ್ ಕೊಡಿಸಲು ಸರ ಕದ್ದ... ಆಮೇಲೇನಾಯ್ತು?.....

ವಿನಯ ಹೆಗಡೆ

ಮುಂಡಗೋಡ: ಶಿಕ್ಷಕಿಯ ಕೊರಳಲ್ಲಿನ ಬಂಗಾರದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದ ಇಬ್ಬರು ಅಂತರಜಿಲ್ಲಾ ಕಳ್ಳರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಹಾವೇರಿ ಜಿಲ್ಲೆಯ ಸವಣೂರ ಪಟ್ಟಣದ ಖಾಸಿಮಖಾನ್ ಮಸೀದಿ ಹತ್ತಿರದ ಅಫ್ಜಲ ತಂದೆ ಖಾದರಗೌಸ ಗವಾರಿ(31), ದಂಡಿನಪೇಟೆ ಎಚ್​ಎಲ್​ವಿ ಶಾಲೆಯ ಹತ್ತಿರದ ನಿವಾಸಿ ದಾದಾಪೀರ ಮಹ್ಮದ್ ಹನೀಫ್ ಮಿರ್ಚಿ(23) ಬಂಧಿತ ಆರೋಪಿಗಳು.

ಪಟ್ಟಣದ ಶಾಸಕರ ಮಾದರಿ ಶಾಲೆಯ ಶಿಕ್ಷಕಿ ಸರೋಜಾ ಬೈಂದೂರ ಎಂಬುವವರು ಶನಿವಾರ ಮಧ್ಯಾಹ್ನ ಶಾಲೆಯಿಂದ ಮನೆಗೆ ತೆರಳುತ್ತಿರುವಾಗ ಹೊಸಓಣಿಯ ಕ್ರಾಸ್ ಬಳಿ ಎದುರಿನಿಂದ ಬೈಕ್ ಮೇಲೆ ಬಂದ ಇಬ್ಬರು ಕಳ್ಳರು ಶಿಕ್ಷಕಿಯ ಕೊರಳಿಗೆ ಕೈ ಹಾಕಿ ಬಂಗಾರದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದರು.

ಈ ಕುರಿತು ದೂರು ದಾಖಲಿಸಿಕೊಂಡ ಪೊಲೀಸರು ಕಳ್ಳರ ಪತ್ತೆಗೆ ಜಾಲ ಬಿಸಿದ್ದರು.

ಪಟ್ಟಣದ ವಿವಿಧ ಭಾಗಗಳಲ್ಲಿನ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿದಾಗ ಪೊಲೀಸರಿಗೆ ಕಳ್ಳರ ಸುಳಿವು ಸಿಕ್ಕಿದ್ದು ತಕ್ಷಣವೆ ಕಾರ್ಯಪ್ರವೃತ್ತರಾದ ಪೊಲೀಸರು ಸವಣೂರ ಪಟ್ಟಣಕ್ಕೆ ತೆರಳಿ ಇಬ್ಬರು ಕಳ್ಳರನ್ನು ಬಂಧಿಸಿದ್ದಾರೆ.

ಹುಡುಗಿಗೆ ಮೊಬೈಲ್ ಕೊಡಿಸಲು ಕಳ್ಳತನ

ಅಫ್ಜಲ್ ಎಂಬ ಆರೋಪಿಯ ಮದುವೆಯ ನಿಶ್ಚಿತಾರ್ಥ ಭಾನುವಾರ ನಡೆದಿದ್ದು ತನ್ನ ಹುಡುಗಿಗೆ ಹೊಸ ಮೂಬೈಲ್ ಕೊಡಿಸುವ ಉದ್ದೇಶದಿಂದ ಶನಿವಾರ ಬಂಗಾರದ ಸರವನ್ನು ಕಳ್ಳತನ ಮಾಡಿರುವುದಾಗಿ ಪೊಲೀಸರ ವಿಚಾರಣೆಯ ವೇಳೆ ಹೇಳಿಕೆ ನೀಡಿದ್ದಾನೆ.

ಗೋವಾರಾಜ್ಯದಲ್ಲೂ ಕರಾಮತ್ತು

ಗೋವಾ ರಾಜ್ಯದ ವಾಸ್ಕೋದಲ್ಲಿ ಅತ್ಯಾಚಾರ, ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವ ಅಫ್ಜಲ್​ನನ್ನು ಸದ್ಯ ಗೋವಾ ಪೊಲೀಸರು ಹುಡುಕಾಟ ನಡೆಸಿದ್ದಾರೆ ಎನ್ನಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಹೆಎಚ್ಚುವರಿ ಜಿಲ್ಲಾಧಿಕಾರಿ ಸ್.ಟಿ.ಜಯಕುಮಾರ ಶಿರಸಿ ಡಿವೈಎಸ್​ಪಿ. ಗಣೇಶ ಕೆ.ಎಲ್, ಮಾರ್ಗದರ್ಶನದಲ್ಲಿ ಸಿಪಿಐ ಸಿದ್ದಪ್ಪ ಸಿಮಾನಿ, ಪಿಎಸ್​ಐ ಯಲ್ಲಾಲಿಂಗ ಕುನ್ನೂರ, ಹನಮಂತ ಕುಡಗುಂಟಿ, ಸಿಬ್ಬಂದಿಗಳಾದ ಮಹ್ಮದಸಲಿಂ, ಗಣಪತಿ ಹುನ್ನಳ್ಳಿ, ಅನ್ವರಖಾನ್, ಬಸವರಾಜ ಲಮಾಣಿ, ತಿರುಪತಿ ಚೌಡಣ್ಣವರ, ಅಣ್ಣಪ್ಪ ಬುಡಿಗೇರ,ಕೋಟೇಶ ನಾಗರವಳ್ಳಿ, ಮಹಾಂತೇಶಕಳ್ಳರನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಗಿದ್ದಾರೆ.