ಚನ್ನಪಟ್ಟಣ : ಚನ್ನಪಟ್ಟಣದ ತಾಲೂಕು ಕಚೇರಿಗೆ ಕಂದಾಯ ಸಚಿವ ಕೃಷ್ಣಬೈರೇಗೌಡ ಶುಕ್ರವಾರ ಅನಿರೀಕ್ಷಿತ ಭೇಟಿ ನೀಡಿ ಅಧಿಕಾರಿ ವರ್ಗಕ್ಕೆ ಶಾಕ್ ಕೊಡುವ ಜತೆಗೆ ಕಚೇರಿಯ ಅವ್ಯವಸ್ಥೆ ಕಂಡು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.
ಕಚೇರಿಗೆ ಬಂದ ಸಚಿವರು, ಟಪಾಲು ವಿಭಾಗ, ಸರ್ವೇ ಕಚೇರಿ ಸೇರಿ ಹಲವು ವಿಭಾಗಗಳಿಗೆ ಭೇಟಿ ನೀಡಿದರು. ಸಚಿವರ ಭೇಟಿಯಿಂದ ಅಧಿಕಾರಿ ವರ್ಗ ಕಕ್ಕಾಬಿಕ್ಕಿಯಾದರೆ, ಸಾರ್ವಜನಿಕರು ದೂರುಗಳ ಸುರಿಮಳೆಯನ್ನೇ ಸುರಿಸಿದರು. ಕೆಲಸಕಾರ್ಯಗಳಿಗೆ ಅಲೆದಾಡಿಸುತ್ತಾರೆ ಎಂದು ಕೆಲವರು ಕಣ್ಣೀರಿಟ್ಟು, ದೂರು ಕೊಟ್ಟರು. ಕಚೇರಿಯಲ್ಲಿ ಭ್ರಷ್ಟಾಚಾರ ಹೆಚ್ಚಿದೆ ಎಂದು ಹಲವರು ಆರೋಪಿಸಿದರು.
ಕಚೇರಿ ಕಡತಗಳನ್ನು ಪರಿಶೀಲಿಸಿದ ಸಚಿವರು, ಎಲ್ಲದರಲ್ಲಿಯೂ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ತಹಸೀಲ್ದಾರ್ ನರಸಿಂಹಮೂರ್ತಿಯನ್ನು ತರಾಟೆ ತೆಗೆದುಕೊಂಡರು. ಟಪಾಲು ವಿಭಾಗದಲ್ಲಿ ಕಡತ ಪರಿಶೀಲಿಸಿದ ಸಚಿವರು, ಇಲ್ಲಿ ಬರೆದಿರುವುದು ‘ಆ ಚಿತ್ರಗುಪ್ತನಿಗೇ ಅರ್ಥವಾಗಬೇಕು’ ಎಂದರು. ಜೂನ್ ತಿಂಗಳ ಕಡತ ಕೊಡಿ ಎಂದಾಗ ಅಲ್ಲಿನ ಸಿಬ್ಬಂದಿ ತಡವರಿಸಿದರು. ಇದರಿಂದ ಕೆರಳಿದ ಸಚಿವರು, ನಾನು ಕೇಳುತ್ತಿರುವುದು 2024ರ ಜೂನ್ ತಿಂಗಳದ್ದು, 2000ರ ಜೂನ್‌ನದ್ದು ಅಲ್ಲ ಎಂದು ಕಿಡಿಕಾರಿದರು. ಟಪಾಲು ಅರ್ಜಿಗಳನ್ನು ಈ ಆಫೀಸ್‌ನಲ್ಲಿ ಏಕೆ ದಾಖಲು ಮಾಡುತ್ತೀರಾ ಎಂದು ಪ್ರಶ್ನಿಸಿದರು.
ಕಚೇರಿಯಲ್ಲಿನ ಕಸ ಹಾಗೂ ಹಳೆಯ ವಸ್ತುಗಳು ಬಿದ್ದಿರುವುದನ್ನು ಗಮನಿಸಿದ ಸಚಿವರು, ಇದೇನು ತಾಲೂಕು ಕಚೇರಿಯಾ ಅಥವಾ ಗುಜರಿಯಾ? ಎಂದು ತಹಸೀಲ್ದಾರ್‌ರನ್ನು ಪ್ರಶ್ನಿಸಿದರು. ನಿಮ್ಮ ಕಚೇರಿ ಪಕ್ಕದಲ್ಲೇ ಈ ಸ್ಥಿತಿಯಿದೆ ಎಂದರೆ ಮಾನ ಮರ್ಯಾದೆ ಬೇಡವೇ?, ಕಚೇರಿ ಈ ರೀತಿಯಿದ್ದರೆ ನಿಮಗೆ ಯಾವ ಗೌರವ ಸಿಗುತ್ತದೆ? ನಿಮ್ಮ ಕಚೇರಿ ಬಗ್ಗೆ ಕನಿಷ್ಠ ಸ್ವಾಭಿಮಾನ ಬೇಡವೇ? ಎಂದು ಕಿಡಿಕಾರಿದರು.
ಇದೇ ವೇಳೆ ಸಾರ್ವಜನಿಕರು, ಕಚೇರಿಯಲ್ಲಿ ಕುಡಿಯುವ ನೀರು ಹಾಗೂ ಶೌಚಗೃಹದ ವ್ಯವಸ್ಥೆ ಇಲ್ಲ ಎಂದು ಸಚಿವರ ಗಮನಕ್ಕೆ ತಂದರು.
ಕಣ್ಣೀರು ಹಾಕಿದ ವೃದ್ಧ! : ಜಮೀನಿನ ವಿಚಾರವಾಗಿ 6 ವರ್ಷದಿಂದ ಕಚೇರಿಗೆ ಅಲೆಯುತ್ತಿದ್ದೇನೆ. ನನ್ನ ಕೆಲಸವಾಗುತ್ತಿಲ್ಲ ಎಂದು ವೃದ್ಧರೊಬ್ಬರು ಸಚಿವರ ಮುಂದೆಯೇ ಕಣ್ಣೀರು ಹಾಕಿದರು. ನಾನು ಸಾಯುವುದರೊಳಗೆ ನನ್ನ ಕೆಲಸ ಮಾಡಿಸಿಕೊಡಿ ಎಂದು ಅಲವತ್ತುಕೊಂಡರು. ಇದರಿಂದ ಕೆರಳಿದ ಸಚಿವರು, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಎಷ್ಟು ವರ್ಷ ಇಂತಹವರನ್ನು ಗೋಳುಹೊಯ್ಕಳ್ಳುತ್ತೀರಾ.., ನಿಮಗೆ ಎಂತಹ ಪುಣ್ಯ ಸಿಗುತ್ತದೆ, ನೋಡುತ್ತೀರಿ ಎಂದರು.
ಅಧಿಕಾರಿಗಳಿಗೆ ಕ್ಲಾಸ್! : ಕಚೇರಿಯ ಅವ್ಯವಸ್ಥೆ ಕಂಡು ಹಾಗೂ ಸಾರ್ವಜನಿಕರ ದೂರುಗಳನ್ನು ಕೇಳಿದ ಸಚಿವರು, ಉಪವಿಭಾಗಾಧಿಕಾರಿ, ತಹಸೀಲ್ದಾರ್ ಸೇರಿ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡರು. ನನ್ನನ್ನೇ ಯಾಮಾರಿಸಲು ಪ್ರಯತ್ನಿಸುತ್ತಿದ್ದೀರಿ, ಇನ್ನು ಜನರ ಕಥೆ ಏನಾಗಬೇಡ. ನಿಮ್ಮ ಬುದ್ಧಿಯನ್ನು ಜನರ ಒಳಿತಿಗಾಗಿ ಉಪಯೋಗಿಸಿ, ನಿಮ್ಮ ಉತ್ತರ ಕೇಳಲು ನಾನು ಇಲ್ಲಿಗೆ ಬಂದಿಲ್ಲ ಎಂದರು. ಸರ್.., ಸರ್.., ಎಂದು ಸಂಭೋಧಿಸುತ್ತಲೆೇ ಅಧಿಕಾರಿ ವರ್ಗವನ್ನು ಜಾಡಿಸಿದರು.
ಪಾರದರ್ಶಕತೆ ಇಲ್ಲ! : ಇದು ನಿಜಕ್ಕೂ ಬೇಸರ ತರಿಸಿದೆ. ನಮ್ಮ ಇಲಾಖೆಯಲ್ಲಿ ಈ ರೀತಿ ಆಗುತ್ತಿದೆ. ಇದು ನನ್ನದೇ ತಪ್ಪು ಎಂದು ಹೇಳುತ್ತೇನೆ, ಮುಂದಿನ ದಿನಗಳಲ್ಲಿ ಈ ಸಮಸ್ಯೆ ಬಗೆಹರಿಸುತ್ತೇನೆ. ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ, ಇದು ಸರ್ಕಾರದ ಕೆಲಸ ಎಂದು ಅಂದುಕೊಂಡಿಲ್ಲ ಎಂದು ಸಚಿವರು ಬೇಸರಿಸಿದರು. ಈ ಕಚೇರಿಯಲ್ಲಿ ಜನಪರ ಆಡಳಿತವೂ ಇಲ್ಲ, ಪಾರದರ್ಶಕತೆಯೂ ಇಲ್ಲ. ಇಲ್ಲಿನ ವ್ಯವಸ್ಥೆ ಕಂಡು ಬಹಳ ನೋವಾಗಿದೆ. ಅಧಿಕಾರಿಗಳಲ್ಲಿ ಕರ್ತವ್ಯ ನಿಷ್ಠೆಯಿದ್ದರೆ ಯಾವುದೇ ಸಮಸ್ಯೆ ಬರುವುದಿಲ್ಲ. ಆದರೆ, ಈ ಕಚೇರಿಯಲ್ಲಿ ಸಾಕಷ್ಟು ಲೋಪಗಳಿವೆ. ಇವುಗಳನ್ನು ಪರಿಹರಿಸುವ ಕೆಲಸ ಮಾಡುತ್ತೇನೆ ಎಂದರು.