ಸದೇಶ್ ಕಾರ್ಮಾಡ್ ಮೈಸೂರು
ಪ್ರತಿ ಬಾರಿ ಅರಮನೆ ನಗರಿ ಮೈಸೂರಿಗೆ ಸೀಮಿತಗೊಳ್ಳುತ್ತಿದ್ದ ಯೋಗ ದಸರಾ ಪ್ರಥಮ ಬಾರಿಗೆ ಗ್ರಾಮೀಣ ಭಾಗಕ್ಕೂ ವಿಸ್ತರಣೆಗೊ ಳ್ಳುತ್ತಿದ್ದು, ಈ ಬಾರಿ ಗ್ರಾಮೀಣ ಭಾಗದಲ್ಲಿ ಯೋಗ ದಸರಾದ ಸಂಭ್ರಮ ಕಳೆಕಟ್ಟಲಿದೆ.
ದಸರಾ ಉತ್ಸವದಲ್ಲಿ ಯೋಗ ದಸರಾ ಕೂಡ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ದಸರಾ ಸಂದರ್ಭ ನಗರದ ಅರಮನೆ ಆವರ ಣದಲ್ಲಿ ನಡೆಯುವ ಸಾಮೂಹಿಕ ಯೋಗ ಪ್ರದರ್ಶನ ಮತ್ತು ಯೋಗ ಸರಪಳಿಗಳನ್ನು ನೋಡುವುದೇ ಒಂದು ಸಂಭ್ರಮ. ಈ ಸಂಭ್ರಮ ಕೇವಲ ಮೈಸೂರಿಗೆ ಮಾತ್ರ ಸೀಮಿತವಾದರೆ ಸಾಲದು ಎಂಬ ಉದ್ದೇಶದಿಂದ ಗ್ರಾಮೀಣ ಭಾಗದಲ್ಲೂ ಯೋಗ ದಸರಾ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ.
ಈ ಬಾರಿ ನಂಜನಗೂಡಿನ ಶ್ರೀ ನಂಜುಂಡೇಶ್ವರ ದೇವಸ್ಥಾನ ಆವರಣದಲ್ಲಿ ಗ್ರಾಮೀಣ ಯೋಗ ದಸರಾ ನಡೆಸಲು ಉದ್ದೇಶಿಸಲಾ ಗಿದ್ದು, ಇದಕ್ಕೆ ಬೇಕಾದ ತಯಾರಿಯನ್ನು ಯೋಗ ದಸರಾ ಉಪ ಸಮಿತಿ ಕೈಗೊಳ್ಳುತ್ತಿದೆ. ಗ್ರಾಮೀಣ ಭಾಗದ ಯೋಗಪಟುಗಳು ಹಾಗೂ ಯೋಗಾಸಕ್ತರನ್ನು ನಂಜನಗೂಡಿನಲ್ಲಿ ಒಟ್ಟುಗೂಡಿಸಿ ಸಾಮೂಹಿಕ ಯೋಗ ಪ್ರದರ್ಶನ ನಡೆಸಲು ಉದ್ದೇಶಿಸಲಾಗಿದೆ. ಇದೇ ರೀತಿ ಗ್ರಾಮೀಣ ಭಾಗದ ಮತ್ತೊಂದು ಸೂಕ್ತ ಸ್ಥಳದಲ್ಲಿ ಸಾಮೂಹಿಕ ಯೋಗ ಪ್ರದರ್ಶನ ಏರ್ಪಡಿಸಲು ಚಿಂತನೆ ನಡೆಸಲಾಗುತ್ತಿದ್ದು, ಇದಕ್ಕೆ ಅಗತ್ಯವಾದ ರೂಪುರೇಷೆಗಳನ್ನು ಸಿದ್ಧಪಡಿಸಲಾಗುತ್ತಿದೆ.
ಮೈಸೂರು ದಸರಾ ಉತ್ಸವದಲ್ಲಿ ಯೋಗ ದಸರಾ ಪ್ರಾರಂಭಿಸಿದ ನಂತರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಮನವಿ ಮೇರೆಗೆ ವಿಶ್ವ ಸಂಸ್ಥೆ ಜೂನ್ 21 ಅನ್ನು ವಿಶ್ವ ಯೋಗ ದಿನವಾಗಿ ಘೋಷಿಸಿದ ಹಿನ್ನೆಲೆಯಲ್ಲಿ ನಗರದಲ್ಲಿ ಯೋಗ ಚಟುವಟಿಕೆ ಹೆಚ್ಚಾಗಿ ಸಾಕಷ್ಟು ಸಂಖ್ಯೆಯಲ್ಲಿ ಜನರು ಯೋಗ ಪಟುಗಳಾಗಿ ರೂಪುಗೊಂಡರು. ನಗರ ಪ್ರದೇಶದಲ್ಲಿ ಯೋಗ ಚಟುವಟಿಕೆಯನ್ನು ವಿಸ್ತರಿಸಿದ ರೀತಿಯಲ್ಲಿಯೇ ಇದೀಗ ಗ್ರಾಮೀಣ ಭಾಗದಲ್ಲೂ ಯೋಗ ಚಟುವಟಿಕೆ ವಿಸ್ತರಿಸಲು ಯೋಗ ದಸರಾ ಉಪ ಸಮಿತಿ ತೀರ್ಮಾನ ಕೈಗೊಂಡಿರುವುದು ಆಶಾದಾಯಕ ಬೆಳವಣಿಗೆ.
ಈ ಬಾರಿಯ ಯೋಗ ದಸರಾದಲ್ಲಿ ಅರಮನೆ ಆವರಣದಲ್ಲಿ ಸಾಮೂಹಿಕ ಸೂರ್ಯ ನಮಸ್ಕಾರ ಹಾಗೂ ಯೋಗ ಸರಪಳಿ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಲಿದೆ. ಎರಡು ಸಾವಿರ ಯೋಗಪಟುಗಳನ್ನು ಒಂದೆಡೆ ಸೇರಿಸಿ ಸಾಮೂಹಿಕ ಸೂರ್ಯ ನಮಸ್ಕಾರ ನಡೆಸಲು ಉದ್ದೇಶಿಸಲಾಗಿದೆ. ಅದೇ ರೀತಿ ಎರಡು ಸಾವಿರ ವಿದ್ಯಾರ್ಥಿಗಳು ಹಾಗೂ ಯೋಗಪಟುಗಳನ್ನು ಸೇರಿಸಿ ಯೋಗ ಸರಪಳಿ ನಿರ್ಮಾಣ ಮಾಡಲಾಗುತ್ತಿದೆ.
ಮೈಸೂರು ನಗರ ಸ್ವಚ್ಛತೆಯಲ್ಲಿ ದೇಶದ ಗಮನ ಸೆಳೆಯುವಂತೆ ಮಾಡುವಲ್ಲಿ ಪೌರ ಕಾರ್ಮಿಕರ ಪರಿಶ್ರಮ ಅಪಾರವಾದದ್ದು. ಅವರ ಆರೋಗ್ಯ ಉತ್ತಮವಾಗಿರಬೇಕು ಎಂಬ ಸದಾಶಯದೊಂದಿಗೆ ಪೌರ ಕಾರ್ಮಿಕರಿಗೋಸ್ಕರ ಒಂದು ದಿನ ಯೋಗಾಭ್ಯಾಸವನ್ನು ಈ ಬಾರಿಯೂ ಹಮ್ಮಿಕೊಳ್ಳಲಾಗುತ್ತಿದೆ. ಆಯುಷ್ ಹಾಗೂ ಕ್ರೀಡಾ ಇಲಾಖೆಯ ಸಹಕಾರದೊಂದಿಗೆ ಯೋಗಥಾನ್ ಹಮ್ಮಿಕೊಳ್ಳಲು ಉದ್ದೇ ಶಿಸಲಾಗಿದ್ದು, ಇದರ ಸ್ವರೂಪ ಯಾವ ರೀತಿ ಇರಬೇಕು ಎಂಬ ಕುರಿತು ಚರ್ಚೆ ನಡೆಯುತ್ತಿದೆ. ಯೋಗ ದಸರಾದ ಅಂತಿಮ ದಿನ ಚಾಮುಂಡಿಬೆಟ್ಟದಲ್ಲಿ ಯೋಗ ಚಾರಣ ಹಾಗೂ ಬೆಟ್ಟದ ಮೇಲ್ಭಾಗ ಸಾಮೂಹಿಕ ಯೋಗ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗುತ್ತಿದೆ. ಮೈಸೂರಿನ ವಿವಿಧ ಯೋಗ ಸಂಘ ಸಂಸ್ಥೆಗಳ ನೆರವು ಪಡೆದು ಈ ಬಾರಿಯ ಯೋಗ ದಸರಾವನ್ನು ಯಶಸ್ವಿಯಾಗಿ ನಡೆಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ.
ಮರಳಿನಲ್ಲಿ ಮೋದಿ ಯೋಗ ಕಲಾಕೃತಿ
ಮೈಸೂರಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಯೋಗ ಚಟುವಟಿಕೆ ಸಾಕಷ್ಟು ಜನಪ್ರಿಯಗೊಳ್ಳುತ್ತಿದೆ. ಇಲ್ಲಿನ ಜನರು ಯೋಗದ ಕಡೆಗೆ ತೋರುತ್ತಿರುವ ಆಸಕ್ತಿಯ ಪರಿಣಾಮದಿಂದ ಮೈಸೂರು ಜಾಗತಿಕ ಮಟ್ಟದಲ್ಲಿ ಯೋಗದಲ್ಲಿ ಹೆಸರು ಮಾಡುತ್ತಿದ್ದು, ವಿಶ್ವದ ನಾನಾ ಕಡೆಗಳಿಂದ ಯೋಗ ಕಲಿಯಲು ಜನರು ಇಲ್ಲಿಗೆ ಆಗಮಿಸುತ್ತಿದ್ದಾರೆ. ಸಾಮೂಹಿಕ ಯೋಗ ಪ್ರದರ್ಶನದಲ್ಲಿ ಗಿನ್ನೆಸ್ ದಾಖಲೆ ನಿರ್ಮಿಸಿದ ಹೆಗ್ಗಳಿಕೆಯನ್ನು ಸಹ ಮೈಸೂರು ನಗರ ಹೊಂದಿದೆ. ಮೈಸೂರು ಯೋಗದಲ್ಲಿ ಸಾಧಿಸುತ್ತಿರುವ ಸಾಧನೆಯು ಪ್ರಧಾನಿ ನರೇಂದ್ರ ಮೋದಿ ಅವರ ಗಮನವನ್ನು ಸಹ ಸೆಳೆಯಿತು. ಇದರ ಪರಿಣಾಮ 2022ರ ಜೂನ್ 21 ರಂದು ಅರಮನೆ ಆವರಣದಲ್ಲಿ ಹಮ್ಮಿಕೊಂಡ ವಿಶ್ವ ಯೋಗ ದಿನಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡರು. ನರೇಂದ್ರ ಮೋದಿ ನಗರಕ್ಕೆ ಆಗಮಿಸಿ ಯೋಗ ಚಟುವಟಿಕೆಯಲ್ಲಿ ಭಾಗವಹಿಸಿದ ಪರಿಣಾಮ ನಗರದಲ್ಲಿ ಯೋಗ ಚಟುವಟಿಕೆ ಮತ್ತಷ್ಟು ಹೆಚ್ಚಾಗಲು ಪ್ರಾರಂಭವಾಗಿದೆ. ಈ ಬಾರಿಯ ದಸರಾ ವಸ್ತು ಪ್ರದರ್ಶನದಲ್ಲಿ ‘ಸ್ಯಾಂಡ್ ಮ್ಯೂಸಿಯಂ’ ನಿರ್ಮಾಣ ಮಾಡಲು ಉದ್ದೇಶಿಲಾಗಿದ್ದು, ಇದರಲ್ಲಿ ನರೇಂದ್ರ ಮೋದಿ ಅವರು ಅರಮನೆ ಆವರಣದಲ್ಲಿ ಯೋಗ ಮಾಡುತ್ತಿರುವ ಕಲಾಕೃತಿ ಎಲ್ಲ ಗಮನ ಸೆಳೆಯಲಿದೆ.
ನಗರದ ವಿವಿಧ ಯೋಗ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಈ ಬಾರಿ ಯೋಗ ದಸರಾವನ್ನು ಅರ್ಥಪೂರ್ಣವಾಗಿ ನಡೆಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ. ಯೋಗದ ಕಡೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಆಕರ್ಷಿಸುವುದು ಯೋಗ ದಸರಾದ ಪ್ರಮುಖ ಉದ್ದೇಶವಾಗಿದೆ. ಯೋಗ ದಸರಾ ಕೇವಲ ಮೈಸೂರು ನಗರಕ್ಕೆ ಮಾತ್ರ ಸೀಮಿತವಾಗಿರಬಾರದು ಎಂಬ ಉದ್ದೇಶದಿಂದ ಈ ಬಾರಿ ಗ್ರಾಮೀಣ ಭಾಗದಲ್ಲೂ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದ್ದು, ಇದಕ್ಕೆ ಬೇಕಾದ ತಯಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಒಟ್ಟು 7 ದಿನ ಯೋಗ ದಸರಾ ಹಮ್ಮಿಕೊಳ್ಳಲು ಉದ್ದೇಶಲಾಗಿದ್ದು, ದಿನಾಂಕ ಇನ್ನಷ್ಟೇ ನಿಗದಿಯಾಗಬೇಕಾಗಿದೆ.
ಸೀಮಂತಿನಿ, ಉಪ ವಿಶೇಷಾಧಿಕಾರಿ, ಯೋಗ ದಸರಾ ಉಪ ಸಮಿತಿ