ಮೈಸೂರು: ನಗರದ ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಅ.13 ರಿಂದ 17ರವರೆಗೆ ದಸರಾ ಕವಿಗೋಷ್ಠಿ ಆಯೋಜಿಸಲಾ ಗಿದ್ದು, 200 ಕವಿಗಳು ಭಾಗವಹಿಸಲಿದ್ದಾರೆ ಎಂದು ದಸರಾ ಕವಿಗೋಷ್ಠಿ ಉಪಸಮಿತಿ ಉಪ ವಿಶೇಷಾಧಿಕಾರಿ ಡಾ.ಎಂ. ದಾಸೇಗೌಡ, ಕಾರ್ಯಾಧ್ಯಕ್ಷ ಪ್ರೊ.ಎಂ. ನಂಜಯ್ಯ ಹೊಂಗನೂರು ಹೇಳಿದರು.
ಈ ಬಾರಿ ಚುಟುಕು-ಹಾಸ್ಯ ಕವಿಗೋಷ್ಠಿ, ಚಿಗುರು, ಯುವ, ಜನಪದ ಹಾಗೂ ಪ್ರಧಾನ ಕವಿಗೋಷ್ಠಿ ಆಯೋಜಿಸಲಾಗಿದೆ. ಅ.13 ರಂದು ಸಾಹಿತಿ ವೈದೇಹಿ ಕವಿಗೋಷ್ಠಿಗೆ ಚಾಲನೆ ನೀಡಲಿದ್ದಾರೆ. ಅದೇ ದಿನ ಹಾಸ್ಯ-ಚುಟುಕು ಕವಿಗೋಷ್ಠಿ ಆಯೋಜಿಸಲಾಗಿದ್ದು, ಅಧ್ಯಕ್ಷತೆಯನ್ನು ನಟ ಮುಖ್ಯಮಂತ್ರಿ ಚಂದ್ರು ವಹಿಸಲಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
14 ರಂದು ಆಯೋಜಿಸಿರುವ ಯುವ ಕವಿಗೋಷ್ಠಿಯನ್ನು ಕವಯತ್ರಿ ಡಾ.ಕೆ. ಷರೀಫಾ ಉದ್ಘಾಟಿಸಲಿದ್ದು, ಕವಿ ಎಚ್. ಗೋವಿಂದಯ್ಯ ಅಧ್ಯಕ್ಷತೆ ವಹಿಸುವರು. ಚಿತ್ರ ಸಾಹಿತಿ ಹೃದಯಶಿವ ವಿಶೇಷ ಅತಿಥಿಯಾಗಿ ಭಾಗವಹಿಸುವರು. ಅ.15 ರಂದು ಚಿಗುರು ಕವಿಗೋಷ್ಠಿಯನ್ನು ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ಉದ್ಘಾಟಿಸಲಿದ್ದಾರೆ ಎಂದರು.
16 ರಂದು ಜನಪದ ಕಾವ್ಯಗೋಷ್ಠಿ ಆಯೋಜಿಸಲಾಗಿದ್ದು, ಜಾನಪದ ವಿದ್ವಾಂಸ ಡಾ.ಪಿ.ಕೆ. ರಾಜಶೇಖರ ಉದ್ಘಾಟಿಸಲಿದ್ದು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅಧ್ಯಕ್ಷತೆ ವಹಿಸಲಿದ್ದಾರೆ. 17 ರಂದು ಪ್ರಧಾನ ಕವಿಗೋಷ್ಠಿ ಆಯೋಜಿಸ ಲಾಗಿದ್ದು, ಹಿರಿಯ ಕವಿ ಡಾ.ಪ್ರತಿಭಾ ನಂದಕುಮಾರ್ ಉದ್ಘಾಟಿಸಲಿದ್ದು, ಹಿರಿಯ ಕವಿ ಅಲ್ಲಮಪ್ರಭು ಬೆಟ್ಟದೂರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಕವಿಗೋಷ್ಠಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಆಕರ್ಷಿಸಲು ಅ.5 ರಂದು ಬೆಳಗ್ಗೆ 11ಕ್ಕೆ ನಗರದ ಮಾನಸಗಂಗೋತ್ರಿಯ ಕುವೆಂಪು ಪ್ರತಿಮೆ ಆವರಣದಲ್ಲಿ ಪ್ರಚಾರ ರಥಕ್ಕೆ ಚಾಲನೆ ನೀಡಲಾಗುವುದು. ಈ ರಥವು ಜಿಲ್ಲೆಯ ವಿವಿಧೆಡೆ ಸಂಚರಿಸಿ ಜನರನ್ನು ಕವಿಗೋಷ್ಠಿಗೆ ಆಗಮಿಸುವಂತೆ ಆಮಂತ್ರಿಸಲಿದೆ ಎಂದರು.
ಕವಿಗೋಷ್ಠಿ ನಡೆಯುವ ಬಿಎಂಶ್ರೀ ಸಭಾಂಗಣದ ಆವರಣದಲ್ಲಿ ಪುಸ್ತಕ ಮಳಿಗೆ, ಖಾದಿ ಮಳಿಗೆಯನ್ನು ತೆರೆಯಲಾಗುವುದು. ಆ ಮೂಲಕ ಕನ್ನಡ ಸಾಹಿತ್ಯ ಸಮ್ಮೇಳದ ರೀತಿಯ ವಾತಾವರಣ ಮೂಡಿಸಲಾಗುವುದು. ಎಂದಿನಂತೆ ಈ ಬಾರಿಯೂ ಕೊಡವ, ಕೊಂಕಣಿ ಸೇರಿದಂತೆ ರಾಜ್ಯದ ವಿವಿಧ ಭಾಷೆಗಳ ಕವಿಗಳು ಕವನ ವಾಚನ ಮಾಡಲಿದ್ದಾರೆ. ಉರ್ದು ಕವಿಗೋಷ್ಠಿ ಪ್ರತ್ಯೇಕವಾಗಿ ನಡೆಯಲಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ದಸರಾ ಕವಿಗೋಷ್ಠಿ ಉಪ ಸಮಿತಿ ಪದಾಧಿಕಾರಿಗಳಾದ ಪ್ರೊ.ತ್ರಿವೇಣಿ, ಉಮೇಶ್, ಗಾಯಕರಾದ ದಿವ್ಯ, ಆನಂದ್ ಹಾಗೂ ಇತರರು ಇದ್ದರು.
ಆಶಯಗೀತೆ ರಚನೆ
ಈ ಬಾರಿಯ ದಸರಾ ಕವಿಗೋಷ್ಠಿಗೆ ಆಶಯಗೀತೆ ಪ್ರಮುಖ ಆಕರ್ಷಣೆಯಾಗಿದೆ. ಈ ಗೀತೆಯನ್ನು ಅಪರ ಪ್ರಾದೇಶಿಕ ಆಯುಕ್ತ ಡಾ.ಪಿ. ಶಿವರಾಜು ರಚಿಸಿದ್ದು, ಗಾಯಕಿ ದಿವ್ಯಾ ಸಚ್ಚಿದಾನಂದ ಹಾಡಿದ್ದಾರೆ. ಅತಿಶಯ್ ಜೈನ್ ವಾದ್ಯ ಸಂಯೋಜನೆ ಮಾಡಿದ್ದಾರೆ.
ಅನಿವಾಸಿ ಕನ್ನಡಿಗರಿಂದ ಕಾವ್ಯವಾಚನ
ದಸರಾ ಕವಿಗೋಷ್ಠಿಯ ಇತಿಹಾಸದಲ್ಲಿ ಪ್ರಥಮ ಬಾರಿಗೆ ವಿದೇಶದಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರಿಂದಲೂ ಕಾವ್ಯ ವಾಚನ ಆಯೋಜಿಸಲಾಗಿದೆ. ಈಗಾಗಲೇ ಕೆಲವು ಕವಿಗಳನ್ನು ಆಯ್ಕೆ ಮಾಡಲಾಗಿದ್ದು, ಅವರು ತಾವು ಕಾವ್ಯ ವಾಚಿಸಿದ ವಿಡಿಯೋವನ್ನು ಕಳುಹಿ ಸಿಕೊಟ್ಟಿದ್ದಾರೆ. ಈ ವಿಡಿಯೋವನ್ನು ಕವಿಗೋಷ್ಠಿಯಲ್ಲಿ ಪ್ರದರ್ಶಿಸಲಾಗುವುದು.
ಶ್ರೀಸಾಮಾನ್ಯರ ಕವಿಗೋಷ್ಠಿ
ಕವಿಗೋಷ್ಠಿ ಕೇವಲ ಕವಿಗಳಿಗೆ ಮಾತ್ರ ಸೀಮಿತವಾಗಬಾರದು ಎಂಬ ಉದ್ದೇಶದಿಂದ ಈ ಬಾರಿ ಕವಿಗೋಷ್ಠಿಗೆ ಶ್ರೀಸಾಮಾನ್ಯರನ್ನೂ ಸೆಳೆಯುವ ಪ್ರಯತ್ನ ನಡೆಯುತ್ತಿದ್ದು, ರೈತರು, ಗೃಹಿಣಿಯರು, ಪೊಲೀಸ್ ಪೇದೆ, ಸ್ವಾಮೀಜಿ ಸೇರಿದಂತೆ ವಿವಿಧ ವರ್ಗದವರು ಈ ಬಾರಿ ತಮ್ಮ ಸ್ವ ರಚಿತ ಕವನಗಳನ್ನು ವಾಚನ ಮಾಡಲಿದ್ದಾರೆ.