ಮೈಸೂರು: ನಗರ ಪಾಲಿಕೆಯಲ್ಲಿ ಈ ಬಾರಿ ಜೆಡಿಎಸ್‌ಗೆ ಮೇಯರ್ ಸ್ಥಾನ ಅಲಂಕರಿಸುವ ಅವಶ್ಯಕತೆ ಇದೆ ಎಂದು ಜೆಡಿಎಸ್ ಶಾಸಕ ಸಾ.ರಾ. ಮಹೇಶ್ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜೆಡಿಎಸ್‌ನವರು ಮೇಯರ್ ಆಗಬೇಕು ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ. ಕಳೆದ ಬಾರಿ ಕಾಂಗ್ರೆಸ್ ಮೈತ್ರಿಯಿಂದ ಬೇಸರಗೊಂಡು ತಟಸ್ಥರಾಗಿ ಉಳಿದೆವು. ಇದರಿಂದ ಬಿಜೆಪಿಗೆ ಮೇಯರ್ ಸ್ಥಾನ ದೊರೆಯಿತು. ಬಿಜೆಪಿ ಮೇಯರ್ ಆಗಲು ಜೆಡಿಎಸ್ ಸಹಕಾರ ನೀಡಿದ ಹಿನ್ನೆಲೆಯಲ್ಲಿ ಈ ಬಾರಿ ಬಿಜೆಪಿ ನಮಗೆ ಸಹಕಾರ ನೀಡುವ ವಿಶ್ವಾಸವಿದೆ ಎಂದರು.
ಮೈತ್ರಿ ಕುರಿತು ಇದುವರೆಗೆ ಬಿಜೆಪಿಯೊಂದಿಗೆ ಮಾತುಕತೆ ನಡೆಸಿಲ್ಲ. ಈ ಬಾರಿ ನಾವು ತಟಸ್ಥರಾದರೆ ಕಾಂಗ್ರೆಸ್‌ಗೆ ಅನುಕೂಲವಾಗಲಿದೆ. ಕಾಂಗ್ರೆಸ್‌ನಲ್ಲಿ ಇಬ್ಬರು ಸದಸ್ಯರು ಹೆಚ್ಚಾಗಿದ್ದಾರೆ. ಹಾಗಾಗಿ ಬಿಜೆಪಿಯವರು ನಮಗೆ ಸಹಕಾರ ಕೊಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.