ಅವಿನಾಶ್ ಜೈನಹಳ್ಳಿ ಮೈಸೂರು
ಮುದ್ದು ಪ್ರಾಣಿಗಳ ಪ್ರದರ್ಶನ ಸ್ಪರ್ಧೆ, ಹಾಲು ಕರೆಯುವ ಸ್ಪರ್ಧೆ, ಕೃಷಿ ವಸ್ತುಪ್ರದರ್ಶನ, ರೈತರಿಗೆ ನಾನಾ ಕ್ರೀಡಾಕೂಟ…
ಇದು ಈ ಬಾರಿಯ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ರೈತ ದಸರಾದ ನಿರೀಕ್ಷಿತ ಕಾರ್ಯಕ್ರಮಗಳ ಪಟ್ಟಿ. ಸೆ. 30, ಅ.1 ಮತ್ತು 2ರಂದು ಮೂರು ದಿನಗಳ ಕಾಲ ನಗರದ ಜೆ.ಕೆ.ಮೈದಾನ, ಮೈಸೂರು ವಿವಿ ಓವೆಲ್ ಮೈದಾನದಲ್ಲಿ ರೈತ ದಸರಾ ನಡೆಯಲಿದೆ.
ಮಹಾಮಾರಿ ಕರೊನಾದಿಂದಾಗಿ ಎರಡು ವರ್ಷಗಳಿಂದ ಕಳೆಗುಂದಿದ್ದ ದಸರಾ ಮಹೋತ್ಸವಕ್ಕೆ ಈ ಬಾರಿ ಜೀವ ಕಳೆ ಬಂದಿದೆ. ದಸರಾದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ‘ರೈತ ದಸರಾ’ವನ್ನು ಈ ಬಾರಿ ವಿಭಿನ್ನ ರೀತಿ ಆಯೋಜಿಸಲು ರೈತ ದಸರಾ ಉಪ ಸಮಿತಿ ಮುಂದಾಗಿದೆ. ಈ ಸಂಬಂಧ ರೈತರಿಗೆ ಅನುಕೂಲವಾಗುವ ಹಾಗೂ ರೈತರು, ರೈತ ಮಹಿಳೆಯರು, ರೈತ ಮಕ್ಕಳಿಗೆ ಮನರಂಜನೆ ನೀಡುವಂತಹ ನಾನಾ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಆ ಮೂಲಕ ಗ್ರಾಮೀಣ ಸೊಗಡು ಹಾಗೂ ಕೃಷಿ ಸಂಸ್ಕೃತಿ ಅನಾವರಣಗೊಳಿಸಲು ಮುಂದಾಗಿದ್ದಾರೆ.
ರಾಜ್ಯದಲ್ಲಿ ಸಮೃದ್ಧ ಮಳೆಯಾಗಿದ್ದು ಕೃಷಿಕರು ಸಂತುಷ್ಟಗೊಂಡಿರುವುದರಿಂದ ಈ ಬಾರಿಯ ರೈತ ದಸರಾ ಕಳೆಗಟ್ಟಲಿದೆ. ಕೃಷಿಯಲ್ಲಿ ಯಂತ್ರ ಬಳಕೆ, ಸಾವಯುವ ಮತ್ತು ಸಮಗ್ರ ಕೃಷಿ ಪದ್ಧತಿ ಕುರಿತ ಜಾಗೃತಿಗೆ ಈ ಉತ್ಸವವನ್ನು ಸದ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ರೈತ ಸಮೂಹದ ಜನದಟ್ಟಣೆ ಹೆಚ್ಚಾಗಿದ್ದರಿಂದ ಜೆ.ಕೆ ಮೈದಾನದ ಜತೆಗೆ ಮೈಸೂರು ವಿವಿ ಓವೆಲ್ ಮೈದಾನದಲ್ಲೂ ರೈತ ದಸರಾ ಆಯೋಜಿಸಲು ನಿರ್ಧರಿಸಿದೆ. ಕೃಷಿ ವಸ್ತುಪ್ರದರ್ಶನ, ಸಭಾ ಕಾರ್ಯಕ್ರಮ, ವಿಚಾರಗೋಷ್ಠಿ ಎಲ್ಲವೂ ಜೆ.ಕೆ.ಮೈದಾನದಲ್ಲಿ ನಡೆಯಲಿವೆ. ಆದರೆ, ರೈತರ ಕ್ರೀಡಾಕೂಟ ಮಾತ್ರ ಓವೆಲ್ ಮೈದಾನದಲ್ಲಿ ಜರುಗಲಿದೆ ಎಂದು ರೈತ ದಸರಾ ಉಪ ಸಮಿತಿ ಕಾರ್ಯಾಧ್ಯಕ್ಷ, ಜಂಟಿ ಕೃಷಿ ನಿರ್ದೇಶಕ ಡಾ.ಬಿ.ಎಸ್.ಚಂದ್ರಶೇಖರ್ ತಿಳಿಸಿದ್ದಾರೆ.
ಸೆ. 30ರಂದು ಬೆ.9 ಗಂಟೆಗೆ ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಎದುರು ರೈತ ದಸರೆಯ ಮೆರವಣಿಗೆಗೆ ಚಾಲನೆ ಸಿಗಲಿದೆ. ಮೆರವಣಿಗೆಯಲ್ಲಿ ರೈತ ದಸರಾ ಬಿಂಬಿಸುವ ಬ್ಯಾನರ್‌ಗಳು, ನಾದಸ್ವರ, ಅಲಂಕೃತಗೊಂಡ ಎತ್ತಿನ ಗಾಡಿಗಳು, ವೀರಗಾಸೆ ಕುಣಿತ, ಪೂಜಾ ಕುಣಿತ, ಡೊಳ್ಳು ಕುಣಿತ, ನಗಾರಿ, ಕೃಷಿ ಚಟುವಟಿಕೆ ಬಿಂಬಿಸುವ ಸ್ತಬ್ಧಚಿತ್ರಗಳು, ಗಾಡಿಗೊಂಬೆ, ಕರಡಿಗೊಂಬೆ, ಕಂಸಾಳೆ, ಟಿಬೆಟಿಯನ್ ಕುಣಿತ ಹಾಗೂ ನಂದಿ ಧ್ವಜ ತಂಡಗಳು ಭಾಗಿಯಾಗಲಿವೆ. ಮೆರವಣಿಗೆ ಕೆ.ಆರ್.ವೃತ್ತ, ದೇವರಾಜ ಅರಸ್ ರಸ್ತೆ, ಎನ್.ಎಸ್.ರಸ್ತೆ ಮಾರ್ಗವಾಗಿ ಜೆ.ಕೆ.ಮೈದಾನದತ್ತ ಸೇರಲಿದೆ. ಬಳಿಕ ರೈತ ದಸರಾ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.
35 ಪ್ರಗತಿಪರ ರೈತರಿಗೆ ಸನ್ಮಾನ:
ಈ ಬಾರಿ ಯುವ ರೈತರು ಹಾಗೂ ವಿಜ್ಞಾನಿಗಳು ಸೇರಿದಂತೆ ಜಿಲ್ಲೆಯ ಪ್ರತಿ ತಾಲೂಕಿನ 5 ಪ್ರಗತಿಪರ ರೈತರನ್ನು ಸನ್ಮಾನಿಸಲು ಚಿಂತಿಸಲಾಗಿದೆ. ಸಮಗ್ರ ಕೃಷಿ ಪದ್ಧತಿಯಿಂದ ಸ್ವಾವಲಂಬಿ ಕೃಷಿ ಕುರಿತು ವಿಚಾರ ವಿನಿಮಯ, ಕೃಷಿಯಲ್ಲಿ ಖುಷಿ ಕಂಡ ರೈತ ದಂಪತಿಗಳಿಂದ ಅನುಭವ ಹಂಚಿಕೆ ಕಾರ್ಯಕ್ರಮ ಆಯೋಜಿಸಲಾಗಿದೆ.
ಕೃಷಿ ವಸ್ತುಪ್ರದರ್ಶನ:
ಜೆಕೆ ಮೈದಾನದ 50 ಮಳಿಗೆಯಲ್ಲಿ ಕೃಷಿ ವಸ್ತುಪ್ರದರ್ಶನಕ್ಕೆ ಸಿದ್ಧತೆ ನಡೆದಿದ್ದು, ಕೃಷಿ, ರೇಷ್ಮೆ, ತೋಟಗಾರಿಕೆ, ಪಶುಸಂಗೋಪನಾ, ಮೀನುಗಾರಿಕೆ ಇಲಾಖೆ ಸೇರಿದಂತೆ ಕೃಷಿಗೆ ಸಂಬಂಧಿಸಿದ ಇಲಾಖೆಗಳ ಹೊಸ ಕಾರ್ಯಕ್ರಮ, ಪ್ರಗತಿ ಮತ್ತು ಮಾಹಿತಿ ನೀಡುವ ಈ ಪ್ರದರ್ಶನ ರೈತ ದಸರಾಕ್ಕೆ ಕಳೆತರಲಿದೆ. ವಿಶೇಷವಾಗಿ ಮತ್ಸೃ ಮೇಳ ಆಕರ್ಷಿಸಲಿದೆ.
ರೈತ ಕ್ರೀಡಾಕೂಟ:
ಎರಡನೇ ದಿನ ಓವೆಲ್ ಮೈದಾನದಲ್ಲಿ ರೈತ ದಸರಾ ಕ್ರೀಡಾಕೂಟ ನಡೆಯಲಿವೆ. ಸೆ.27 ಮತ್ತು 28ರಂದು ಜಿಲ್ಲೆಯ ಎಲ್ಲ ತಾಲೂಕಿನಲ್ಲಿ ತಾಲೂಕು ಮಟ್ಟದ ರೈತ ಕ್ರೀಡಾಕೂಟ ನಡೆಯಲಿದೆ. ಅಲ್ಲಿ ವಿಜೇತರಾದ ಸ್ಪರ್ಧಾಳುಗಳು ಜಿಲ್ಲಾ ಮಟಕ್ಕೆ ಆಯ್ಕೆಯಾಗುತ್ತಾರೆ. ಅವರಿಗೆ ಅ. 1ರಂದು ಜಿಲ್ಲಾ ಮಟ್ಟದ ಕ್ರೀಡಾಕೂಟ ನಡೆಯಲಿದೆ. ಈ ಬಾರಿ ರೈತರಿಗೆ ಕೆಸರು ಗದ್ದೆ ಓಟ, ಗೋಣಿಚೀಲ ಓಟ, ಗೊಬ್ಬರ ಮೂಟೆ ಹೊತ್ತು ಓಟ ಹಾಗೂ ಮೂರು ಕಾಲಿನ ಓಟ ಸ್ಪರ್ಧೆ ನಡೆಯಲಿವೆ. ರೈತ ಮಹಿಳೆಯರಿಗೆ ಕೆಸರು ಗದ್ದೆ ಓಟ, ನೀರಿನ ಬಿಂದಿಗೆ ಹೊತ್ತು ಓಡುವ ಸ್ಪರ್ಧೆ, ಗೋಣಿಚೀಲದ ಓಟ, ಒಂಟಿ ಕಾಲಿನ ಓಟ ಸ್ಪರ್ಧೆ ಏರ್ಪಡಿಸಲಾಗಿದೆ.
ಪ್ರಾಣಿ ಪ್ರದರ್ಶನ:
ಈ ಬಾರಿ ವಿಶೇಷವಾಗಿ ಮುದ್ದು ಪ್ರಾಣಿಗಳ ಪ್ರದರ್ಶನ ಸ್ಪರ್ಧೆ ಆಯೋಜಿಸಲಾಗಿದೆ. ಅ. 2ರಂದು ಈ ಸ್ಪರ್ಧೆ ನಡೆಯಲಿದೆ. ನಾಯಿ, ಬೆಕ್ಕು ಹಾಗೂ ಕುರಿಗಳನ್ನು ಪ್ರದರ್ಶಿಸುವ ಮೂಲಕ ಆಕರ್ಷಕ ಬಹುಮಾನ ಪಡೆಯಬಹುದಾಗಿದೆ. ಮೂರನೇ ದಿನ ಹಾಲು ಕರೆಯುವ ಸ್ಪರ್ಧೆಯೂ ನಡೆಯಲಿದ್ದು, ಬೆಳಗ್ಗೆ ಮತ್ತು ಸಂಜೆ ಒಂದು ಹಸು ಎಷ್ಟು ಹಾಲುಕೊಡುತ್ತದೆ ಎನ್ನುವುದನ್ನು ಆಧರಿಸಿ ವಿಜೇತರನ್ನು ನಿರ್ಧರಿಸಲಾಗುತ್ತದೆ ಎಂದು ಡಾ.ಬಿ.ಎಸ್.ಚಂದ್ರಶೇಖರ್ ತಿಳಿಸಿದ್ದಾರೆ.
ಈ ಬಾರಿಯ ರೈತ ದಸರಾ ಮಹೋತ್ಸವದಲ್ಲಿ ಮುದ್ದು ಪ್ರಾಣಿಗಳ ಪ್ರದರ್ಶನ ಸ್ಪರ್ಧೆ, ಹಾಲು ಕರೆಯುವ ಸ್ಪರ್ಧೆ, ರೈತರೊಂದಿಗೆ ವಿಚಾರ ವಿನಿಮಯ ಕಾರ್ಯಕ್ರಮ, ಕೃಷಿ ವಸ್ತುಪ್ರದರ್ಶನ ಸೇರಿದಂತೆ ಇನ್ನು ಅನೇಕ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಈ ಸಂಬಂಧ ಎಲ್ಲ ರೀತಿಯ ಸಿದ್ಧತೆ ಮಾಡಲಾಗುತ್ತಿದೆ.ಡಾ.ಬಿ.ಎಸ್.ಚಂದ್ರಶೇಖರ್, ರೈತ ದಸರಾ ಉಪ ಸಮಿತಿ ಕಾರ್ಯಾಧ್ಯಕ್ಷ