ಮೈಸೂರು: ಈ ಸಲದ ದಸರಾ ಕವಿಗೋಷ್ಠಿಯಲ್ಲಿ ಗೋಷ್ಠಿಗಳ ಸಂಖ್ಯೆ 5ಕ್ಕೆ ಸೀಮಿತಗೊಳಿಸಲಾಗಿದೆ. ಅವುಗಳ ಹೆಸರು ಸಹ ಬದಲಾವಣೆ ಮಾಡಲಾಗಿದೆ.
ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಪ್ರತಿ ವರ್ಷ ಕವಿಗೋಷ್ಠಿಯನ್ನು ಆಯೋಜಿಸಲಾಗುತ್ತದೆ. ಈ ಸಲ ‘ಪ್ರಾದೇಶಿಕ’, ‘ವಿಶಿಷ್ಟ’, ‘ವಿನೋದ’, ‘ವೈವಿಧ್ಯ’ ಹಾಗೂ ‘ಸಮಗ್ರ’ ಎಂಬ ಶೀರ್ಷಿಕೆಯಲ್ಲಿ 5 ಕವಿಗೋಷ್ಠಿಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಈ ಸಲ ‘ಉರ್ದು ಕವಿಗೋಷ್ಠಿ’ ಕೈಬಿಡಲಾಗಿದೆ. ಮಕ್ಕಳು, ಯುವಕರು ಹಾಗೂ ಮಹಿಳೆಯರಿಗೂ ಪ್ರತ್ಯೇಕವಾಗಿ ಕವಿಗೋಷ್ಠಿ ಆಯೋಜಿಸಿಲ್ಲ. ಕಳೆದ ಬಾರಿ ದಸರಾ ಕಾವ್ಯ ಸಂಭ್ರಮ, ಚಿಗುರು, ಮಹಿಳಾ, ಪ್ರಾದೇಶಿಕ, ಯುವ ಹಾಗೂ ಉರ್ದು ಕವಿಗೋಷ್ಠಿಗಳನ್ನು ಏರ್ಪಡಿಸಲಾಗಿತ್ತು.
ದಸರಾ ಕವಿಗೋಷ್ಠಿಯನ್ನು ಸಾಹಿತಿ ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಉದ್ಘಾಟಿಸಲಿದ್ದು, ಚಲನಚಿತ್ರ ಗೀತ ರಚನೆಕಾರ ವಿ.ನಾಗೇಂದ್ರ ಪ್ರಸಾದ್ ಅತಿಥಿಯಾಗಲಿದ್ದಾರೆ. ಪ್ರಾದೇಶಿಕ ಕವಿಗೋಷ್ಠಿಯನ್ನು ಕವಿ ಎಚ್.ಎಸ್.ಶಿವಪ್ರಕಾಶ್ ಉದ್ಘಾಟಿಸಲಿದ್ದಾರೆ. ವಿನೋದ ಕವಿಗೋಷ್ಠಿಯನ್ನು ಹಿರಿಯ ಸಾಹಿತಿ ಪ್ರೊ.ಹಂಪಾ ನಾಗರಾಜಯ್ಯ ಉದ್ಘಾಟಿಸುವರು.
ಅನ್ಯ ರಾಜ್ಯದ 12 ಕವಿಗಳು, ವಿದೇಶದ ಮೂವರು ಕವಿಗಳನ್ನು ಆಹ್ವಾನಿಸಿರುವುದು ಈ ಸಲದ ವಿಶೇಷ. ಕೊಡವ, ತುಳು, ಕೊಂಕಣಿ, ಉರ್ದು, ಸಂಸ್ಕೃತ, ಬಂಜಾರ ಇನ್ನಿತರ ಕನ್ನಡ ಸಹೋದರ ಭಾಷೆಗಳ ಕವಿಗಳೂ ಬರಲಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಧಾನ ಕವಿಗೋಷ್ಠಿಯನ್ನು ಈ ಸಲ ‘ಸಮೃದ್ಧ ಕವಿಗೋಷ್ಠಿ’ ಎಂದು ಹೆಸರಿನಲ್ಲಿ ನಡೆಸಲಾಗುತ್ತಿದೆ. ಕನ್ನಡದೊಂದಿಗೆ ಇತರ ಭಾಷೆಗಳ ಕಾವ್ಯಲೋಕಕ್ಕೆ ಸಮೃದ್ಧ ಕೊಡುಗೆ ನೀಡಿದವರನ್ನು ಕರೆಸಲಾಗುತ್ತಿದೆ. ಇದರಿಂದ ಬಹುಭಾಷಾ ಕವಿಗೋಷ್ಠಿಯೂ ಆಗಲಿದೆ. ಹಿಂದಿ, ಇಂಗ್ಲಿಷ್, ತಮಿಳು, ತೆಲುಗು, ಅಸ್ಸಾಮಿ, ಬಂಗಾಳಿ, ಮಲಯಾಳ ಇತರ ಭಾಷಾ ಕವಿತೆಗಳನ್ನು ಕೇಳುವ ಅವಕಾಶ ಸಹ ಸಿಗಲಿದೆ
ಈ ಸಲ ಪ್ರತಿ ಕವಿಗೋಷ್ಠಿಯಲ್ಲೂ ಮಕ್ಕಳು, ಮಹಿಳೆಯರು, ಕನ್ನಡದ ಸಹೋದರ ಭಾಷೆಗಳವರು ಹಾಗೂ ಪ್ರಾದೇಶಿಕ ಸಮತೋಲನ ಆಧರಿಸಿ ಕವಿಗಳನ್ನು ಆಯ್ಕೆ ಮಾಡಲಾಗುತ್ತದೆ. ಎರಡ್ಮೂರು ದಿನಗಳಲ್ಲಿ ಕವಿಗಳ ಪಟ್ಟಿ ಹೊರಬೀಳಲಿದೆ. ಮಕ್ಕಳು, ಯುವಕರು ಹಾಗೂ ಮಹಿಳಾ ಕವಿಗಳಿಗೆ ವಿವಿಧ ವೇದಿಕೆಗಳಲ್ಲಿ ಅವಕಾಶ ಕಲ್ಪಿಸಿಕೊಡಲಾಗುತ್ತಿದೆ.
ಪ್ರಾದೇಶಿಕ ಕವಿಗೋಷ್ಠಿಯಲ್ಲಿ ವಿವಿಧ ಪ್ರದೇಶದವರಿಗೆ, ವಿಶಿಷ್ಟಗೋಷ್ಠಿಯಲ್ಲಿ ಸಾಹಿತ್ಯ ಹೊರತುಪಡಿಸಿದ ಇತರ ಕ್ಷೇತ್ರದವರಿಗೆ ಅವಕಾಶ ಕೊಡಲಾಗುತ್ತಿದೆ. ವಿನೋದ ವಿಭಾಗದಲ್ಲಿ ಹಾಸ್ಯ ಭಾಷಣಕಾರರು ಭಾಗಿಯಾಗಲಿದ್ದಾರೆ.