ಜಿಲ್ಲೆ

ಈ ಬಾರಿಯೂ ‘ಪ್ರವಾಸೋದ್ಯಮ ಸರ್ಕ್ಯೂಟ್’ ರಚನೆ ನಿರೀಕ್ಷೆ ಹುಸಿ

ಅವಿನಾಶ್ ಜೈನಹಳ್ಳಿ ಮೈಸೂರು
ಜಿಲ್ಲೆಯವರೇ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿಯ ಬಜೆಟ್‌ನಲ್ಲಾದರೂ ಮೈಸೂರು ಕೇಂದ್ರವನ್ನಾಗಿಸಿಕೊಂಡು ‘ಪ್ರವಾಸೋದ್ಯಮ ಸರ್ಕ್ಯೂಟ್’ ರಚನೆಯ ಘೋಷಣೆ ಮಾಡುತ್ತಾರೆ ಎನ್ನುವ ನಿರೀಕ್ಷೆ ಹುಸಿಯಾಗಿದೆ.

ಸಾಂಸ್ಕೃತಿಕ ನಗರಿ, ಪಾರಂಪರಿಕ ನಗರಿ, ಅರಮನೆಗಳ ನಗರಿ, ಸ್ವಚ್ಛ ನಗರಿ… ಹೀಗೆ ವಿವಿಧ ಹೆಸರುಗಳಿಂದ ಕರೆಸಿಕೊಳ್ಳುವ ‘ಮೈಸೂರು’ ದೇಶದ ಪ್ರಮುಖ ಪ್ರವಾಸಿ ನಗರಿಯೂ ಆಗಿದೆ. ಆದ್ದರಿಂದ ಮೈಸೂರು ನಗರವನ್ನು ಕೇಂದ್ರವಾಗಿಸಿಕೊಂಡು ‘ಪ್ರವಾಸೋದ್ಯಮ ಸರ್ಕ್ಯೂಟ್’ ರಚನೆ ಮಾಡಲಾಗುವುದೆಂದು ಈ ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದರು. ಆದರೆ ಅದಿನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಸಿದ್ದರಾಮಯ್ಯ ಎರಡನೇ ಬಾರಿಗೆ ಮುಖ್ಯಮಂತ್ರಿಯಾದ ಮೊದಲ ಬಜೆಟ್‌ನಲ್ಲೇ ಇದನ್ನು ಘೋಷಣೆ ಮಾಡುತ್ತಾರೆ ಎನ್ನಲಾಗಿತ್ತಾದರೂ ಆಗಲಿಲ್ಲ. ಎರಡನೇ ಅವಧಿಯ ಎರಡನೇ ಬಜೆಟ್‌ನಲ್ಲೂ ಘೋಷಣೆಯಾಗಿಲ್ಲ ಎನ್ನುವುದು ಬೇಸರದ ಸಂಗತಿಯಾಗಿದೆ.

ದೇಶದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಮೈಸೂರು ಒಂದಾಗಿದ್ದು, ನಿತ್ಯ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಜತೆಗೆ ವಿಶ್ವದ ಗಮನ ಸೆಳೆಯುತ್ತಿವೆ. ಇಲ್ಲಿನ ಪ್ರವಾಸೋದ್ಯಮವನ್ನು ನಂಬಿ ನೂರಾರು ಜನರು ಹೋಟೆಲ್ ಉದ್ಯಮ ನಡೆಸುತ್ತಿದ್ದಾರೆ. ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಸಾವಿರಾರು ಕುಟುಂಬಗಳು ಬದುಕು ಕಂಡುಕೊಂಡಿವೆ. ಒಟ್ಟಿನಲ್ಲಿ ಮೈಸೂರಿಗೆ ಪ್ರವಾಸೋದ್ಯಮವೇ ಜೀವಾಳ. ಇಂತಹ ಸ್ಥಳಕ್ಕೆ ಪ್ರವಾಸೋದ್ಯಮ ಸರ್ಕ್ಯೂಟ್ ಅಗತ್ಯ ಇದೆ. ಸರ್ಕ್ಯೂಟ್ ರಚನೆಯಾದರೆ ಪ್ರವಾಸೋದ್ಯಮ ಅಭಿವೃದ್ಧಿ ಜತೆಗೆ ಪ್ರವಾಸೋದ್ಯಮವನ್ನೇ ನಂಬಿರುವ ವಲಯಗಳ ವ್ಯಾಪಾರಿಗಳು ಮತ್ತು ಕಾರ್ಮಿಕರಿಗೂ ಅನುಕೂಲವಾಗುತ್ತದೆ.

ಪ್ರವಾಸೋದ್ಯಮ ಸರ್ಕ್ಯೂಟ್ ರಚನೆಯ ಜತೆಗೆ ಹೆಚ್ಚಿನ ಪ್ರಮಾಣದಲ್ಲಿ ಮೈಸೂರನ್ನು ವಿಶ್ವಕ್ಕೆ ಪರಿಚಯಿಸುವ ದೃಷ್ಟಿಯಿಂದ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದೆ. ಮೈಸೂರನ್ನು ವಿಶ್ವ ಮಟ್ಟದಲ್ಲಿ ಪ್ರಮುಖ ಪ್ರವಾಸಿ ತಾಣವಾಗಿ ರೂಪಿಸಬೇಕೆಂದರೆ ಪ್ರವಾಸಿಗರನ್ನು ಸೆಳೆಯುವಂತೆ ಕಾರ್ಯಕ್ರಮಗಳನ್ನು ವರ್ಷಪೂರ್ತಿ ನಡೆಸಬೇಕಾಗಿದೆ. ಈ ನಿಟ್ಟಿನಲ್ಲಿ ಮೈಸೂರಿಗೆ ಪ್ರವಾಸೋದ್ಯಮ ಕ್ಯಾಲೆಂಡರ್ ರೂಪಿಸಬೇಕಿದೆ. ಪ್ರವಾಸಿಗರನ್ನು ಸೆಳೆಯಲು ಹತ್ತಾರು ಕಾರ್ಯಕ್ರಮಗಳನ್ನು ಆಯೋಜಿಸಬೇಕಿದೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಸರ್ಕಾರ ಯೋಜನೆ ರೂಪಿಸಬೇಕಿದೆ.

ಭರವಸೆ ನೀಡಿದ್ದ ಬಿಜೆಪಿ ಸರ್ಕಾರ!:

‘ಪ್ರವಾಸೋದ್ಯಮ ಸರ್ಕ್ಯೂಟ್’ ರಚನೆ ಮಾಡಲಾಗುತ್ತದೆ ಎಂದು ಈ ಹಿಂದಿನ ಬಿಜೆಪಿ ಸರ್ಕಾರ ಭರವಸೆ ನೀಡಿತ್ತು. ಮೈಸೂರನ್ನು ಕೇಂದ್ರವನ್ನಾಗಿ ಇಟ್ಟುಕೊಂಡು ಪ್ರವಾಸೋದ್ಯಮ ಸರ್ಕ್ಯೂಟ್ ರೂಪಿಸಿ ಅಭಿವೃದ್ಧಿ ಮಾಡಲಾಗುತ್ತದೆ. ಪ್ರವಾಸೋದ್ಯಮ ತಾಣಗಳನ್ನು ಅಭಿವೃದ್ಧಿಪಡಿಸುವ ಜತೆಗೆ, ಪ್ರವಾಸಿಗರಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸಲು ಪ್ರಯತ್ನಿಸಲಾಗುತ್ತದೆ ಎಂದು 2022ನೇ ಸಾಲಿನ ದಸರಾ ಉದ್ಘಾಟನಾ ಕಾರ್ಯಕ್ರಮದ ವೇಳೆ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದರು. ಅವರ ಹೇಳಿಕೆ ಈ ಭಾಗದಲ್ಲಿ ಆಶಾಭಾವ ಮೂಡಿಸಿತ್ತು. ಆದರೆ, ಬೊಮ್ಮಾಯಿ ಅವರು ಅವಧಿ ಪೂರ್ಣಗೊಳಿಸಿದರೂ ಪ್ರವಾಸೋದ್ಯಮ ಸರ್ಕ್ಯೂಟ್ ರಚನೆ ಸಂಬಂಧ ಯಾವುದೇ ಕಾರ್ಯಗಳು ನಡೆಯಲಿಲ್ಲ. ಇದೀಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡನೇ ಬಜೆಟ್ ಮಂಡಿಸಿದರೂ ಸರ್ಕ್ಯೂಟ್ ಬಗ್ಗೆ ಚರ್ಚೆಗಳೇ ನಡೆಯದಿರುವುದು ಬೇಸರ ಮೂಡಿಸಿದೆ.

ಏನಿದು ಪ್ರವಾಸೋದ್ಯಮ ಸರ್ಕ್ಯೂಟ್?

ಹಳೇ ಮೈಸೂರು ಭಾಗದಲ್ಲಿ ವಿಶ್ವವಿಖ್ಯಾತ ಅರಮನೆಗಳು, ಪ್ರಖ್ಯಾತ ದೇವಸ್ಥಾನಗಳು, ಐತಿಹಾಸಿಕ ಮತ್ತು ಪ್ರಕೃತಿ ಸೊಬಗಿನ ಪ್ರವಾಸಿ ತಾಣಗಳಿವೆ. ಈ ಎಲ್ಲವನ್ನೂ ಒಂದೇ ಸೂರಿನಡಿ ತರುವುದು, ಒಂದು ತಾಣ ನೋಡಿದರೆ ಇನ್ನೊಂದನ್ನು ನೋಡಲು ಪ್ರವಾಸಿಗರಿಗೆ ಅನುಕೂಲ ಕಲ್ಪಿಸುವುದು, ಪ್ರೋತ್ಸಾಹಿಸುವುದು ‘ಪ್ರವಾಸೋದ್ಯಮ ಸರ್ಕ್ಯೂಟ್’ ಯೋಜನೆಯ ಉದ್ದೇಶವಾಗಿದೆ.
ವಿಶ್ವವಿಖ್ಯಾತ ಅಂಬಾವಿಲಾಸ, ಜಗನ್ಮೋಹನ, ಜಯಲಕ್ಷ್ಮೀವಿಲಾಸ ಸೇರಿದಂತೆ ನಗರದಲ್ಲಿ ಇರುವ ಹತ್ತಾರು ಅರಮನೆಗಳು, ಚಾಮುಂಡಿಬೆಟ್ಟ, ಮೃಗಾಲಯ, ಕಬಿನಿ, ಕೆಆರ್‌ಎಸ್ ಅಣೆಕಟ್ಟೆಗಳು, ಬೈಲುಕುಪ್ಪೆ, ಶ್ರೀರಂಗಪಟ್ಟಣ, ನಂಜನಗೂಡಿನ ಐತಿಹಾಸಿಕ/ಧಾರ್ಮಿಕ ಸ್ಥಳಗಳು, ಬಂಡೀಪುರ, ನಾಗರಹೊಳೆ ಅಭಯಾರಣ್ಯಗಳನ್ನು ಪ್ಯಾಕೇಜ್ ಮೂಲಕ ಪ್ರವಾಸಿಗರಿಗೆ ತೋರಿಸುವ ಕೆಲಸವಾಗಬೇಕು. ಹಳೇ ಮೈಸೂರು ಭಾಗದ ತಾಣಗಳ ಬಗ್ಗೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಪ್ರಚಾರ ಮಾಡಿ ರೋಡ್‌ಮ್ಯಾಪ್ ರೂಪಿಸಲು ಮೈಸೂರು ಕೇಂದ್ರಿತ ಪ್ರವಾಸೋದ್ಯಮ ಸರ್ಕ್ಯೂಟ್ ರಚಿಸಬೇಕಿದೆ. ದಸರಾ ಮಹೋತ್ಸವ, ಮಾಗಿ ಮೇಳಗಳ ಮಾದರಿಯಲ್ಲಿ ವರ್ಷಪೂರ್ತಿ ನಾನಾ ಕಾರ್ಯಕ್ರಮಗನ್ನು ಆಯೋಜಿಸಿ ಪ್ರವಾಸಿಗರನ್ನು ಆಕರ್ಷಿಸಬೇಕಿದೆ. ಮೈಸೂರು ಭಾಗಕ್ಕೆ ಬರುವ ಪ್ರವಾಸಿಗರಿಗೆ ಪ್ಯಾಕೇಜ್ ಮಾದರಿಯಲ್ಲಿ ಇಲ್ಲಿನ ಅರಮನೆಗಳು, ದೇವಸ್ಥಾನಗಳು, ಐತಿಹಾಸಿಕ, ಧಾರ್ಮಿಕ ಮತ್ತು ಪ್ರಕೃತಿ ಸೊಬಗಿನ ಪ್ರವಾಸಿ ತಾಣಗಳನ್ನು ನೋಡುವಂತೆ ಮಾಡಬೇಕಾಗಿದೆ.

ಕಾವೇರಿ ಪ್ರವಾಸೋದ್ಯಮ ಪ್ರಾಧಿಕಾರ ಎಲ್ಲಿ?

ಸಿದ್ದರಾಮಯ್ಯ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದ ವೇಳೆ ಮೈಸೂರು ಭಾಗದ ಪ್ರವಾಸೋದ್ಯಮ ಅಭಿವೃದ್ಧಿಗೆ ನಾನಾ ಯೋಜನೆಗಳನ್ನು ಜಾರಿ ಮಾಡಿದ್ದರು. ಮುಖ್ಯವಾಗಿ ಪ್ರವಾಸೋದ್ಯಮ ಸರ್ಕ್ಯೂಟ್ ಮಾದರಿಯ ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಗಳನ್ನೊಳಗೊಂಡಂತೆ ಕಾವೇರಿ ಪ್ರವಾಸೋದ್ಯಮ ಪ್ರಾಧಿಕಾರ ಸ್ಥಾಪಿಸಲಾಗುತ್ತದೆ ಎಂದು 2014ರ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದರು. ಆದರೆ ಆ ಯೋಜನೆ ಘೋಷಿಸಿ 10 ವರ್ಷ ಪೂರ್ಣಗೊಂಡರೂ ಕಾರ್ಯರೂಪಕ್ಕೆ ಬರದೆ ಬರೀ ಘೋಷಣೆಯಾಗಿಯೇ ಉಳಿದುಕೊಂಡಿದೆ.

ಆದಷ್ಟು ಬೇಗ ಪ್ರವಾಸೋದ್ಯಮ ಸರ್ಕ್ಯೂಟ್ ರಚನೆ ಮಾಡಬೇಕು. ಮೈಸೂರನ್ನು ವಿಶ್ವದಲ್ಲೇ ಪ್ರಮುಖ ಪ್ರವಾಸಿ ತಾಣವಾಗಿ ರೂಪಿಸುವಂತಹ ಅನೇಕ ಅವಕಾಶಗಳಿವೆ. ಈ ಯೋಜನೆ ಆದಷ್ಟು ಬೇಗ ಜಾರಿಯಾದರೆ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಗ್ಗೆ ಗಮನಹರಿಸಬೇಕು. ಈ ಬಗ್ಗೆ ಮತ್ತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುತ್ತದೆ.-ನಾರಾಯಣಗೌಡ, ಅಧ್ಯಕ್ಷ, ಮೈಸೂರು ಹೋಟೆಲ್ ಮಾಲೀಕರ ಸಂಘ