ಬಬಲೇಶ್ವರ ತಾಲೂಕಿನ ಹೊಳೆಬಬಲಾದಿಯಲ್ಲಿ ರೂ.18ಲಕ್ಷಕ್ಕೆ ಮಾರಾಟಗೊಂಡ ಎತ್ತುನೊಂದಿಗೆ ಗ್ರಾಮಸ್ಥರು ಸಂಭ್ರಮಿಸಿದರು. ಗುರುಸಿದ್ಧನಗೌಡ ರಂಗನಗೌಡ ಪಾಟೀಲ, ಸಿದ್ದು ಮುತ್ಯಾ ಹೊಳಿಮಠ, ಸದಾಶಿವ ಡಾಂಗೆ ಇದ್ದಾರೆ.  
ಜಿಲ್ಲೆ

ಕಾರ್‌ಗಿಂತಲೂ ಬಲು ದುಬಾರಿ ಈ ಎತ್ತು, ದಾಖಲೆ ಬರೆದ ವಹಿವಾಟು, ಬೆಲೆ ಎಷ್ಟು ಗೊತ್ತಾ?

ವಿಜಯಪುರ: ಬೆಲೆ ಬಾಳುವ ಕಾರ್‌ಗಿಂತಲೂ ಹೆಚ್ಚಿನ ದರಕ್ಕೆ ಎತ್ತು ಮಾರಾಟವಾಗುವ ಮೂಲಕ ದಾಖಲೆ ಬರೆದಿದೆ !

ಕಾಲಜ್ಞಾನಕ್ಕೆ ಹೆಸರಾದ ಬಬಲೇಶ್ವರ ತಾಲೂಕಿನ ಹೊಳೆ ಬಬಲಾದಿ ಶ್ರೀ ಸದಾಶಿವ ಮುತ್ಯಾ ಮಠದ ಭಕ್ತ ಗುರುಸಿದ್ಧನಗೌಡ ರಂಗನಗೌಡ ಪಾಟೀಲ ಇವರ ಎತ್ತು ರೂ.18 ಲಕ್ಷಕ್ಕೆ ಮಾರಾಟವಾಗಿದೆ.

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಿಟ್ನಾಳ ಗ್ರಾಮದ ಸದಾಶಿವ ಡಾಂಗೆ ಅವರು ರೂ.18 ಲಕ್ಷಕ್ಕೆ ಎತ್ತು ಖರೀದಿಸಿದ್ದಾರೆ. ಆ ಮೂಲಕ ಎತ್ತಿನ ವಹಿವಾಟಿನ ಬೆಲೆ ಹೆಚ್ಚಿಸಿದ್ದಾರೆ. ಎತ್ತು ಖರೀದಿಸುತ್ತಿದ್ದಂತೆ ರೈತ ಸದಾಶಿವ ಮುತ್ಯಾನ ದೇವಸ್ಥಾನಕ್ಕೆ ತೆರಳಿ ಎತ್ತಿನ ಸಮೇತ ದರ್ಶನ ಪಡೆದರು. ಗುಲಾಲು ಎರಚಿ ಸಂಭ್ರಮಿಸಿದರು. ಸದಾಶಿವ ಮುತ್ಯಾನ ಪೂಜೆಗೈದು ಒಳಿತಾಗಲಿ ಎಂದು ಪ್ರಾರ್ಥಿಸಿದರು.

ಶ್ರೀ ಸದಾಶಿವ ಮುತ್ಯಾ ಮಠದ ಪೀಠಾಧಿಪತಿ ಸಿದ್ದು ಮುತ್ಯಾ ಹೊಳಿಮಠ ಮಾತನಾಡಿ, ಮಠದ ಭಕ್ತನ ಪರಿಶ್ರಮಕ್ಕೆ ಸೂಕ್ತ ಮೌಲ್ಯ ದೊರತಿದೆ. ರೈತರು ಗೋವು ಹಾಗೂ ಬಸವಣ್ಣನ ರೂಪವಾದ ಎತ್ತುಗಳನ್ನು ಸರಿಯಾಗಿ ಸಾಕಣೆ ಮಾಡಿ ದೇಸಿ ಪರಂಪರೆ ಉಳಿಸಿ ಬೆಳೆಸಲು ಹೆಚ್ಚಿನ ಆಸಕ್ತಿ ತೋರಬೇಕು. ಸಾವಯವ ಕೃಷಿ ಮಾಡಲು ರೈತರು ಆದ್ಯತೆ ನೀಡಬೇಕು ಎಂದರು.

ಗ್ರಾಮಸ್ಥರು ಹಾಗೂ ಮಠದ ಭಕ್ತರು ಎತ್ತು ನೋಡಿ ಸಂಭ್ರಮಿಸಿದರು. ಎತ್ತು ಮಾರಿದ ರೈತ ಹಾಗೂ ಪಡೆದ ರೈತನ ಕಣ್ಣಲ್ಲಿ ಆನಂದ ಭಾಷ್ಪ ಕಂಡು ಬಂತು.