ಜಿಲ್ಲೆ

ಇದು ಸಿಸಿ ಸರ್ಕಾರ

Dharwada - Santosh Vaidya

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:ಸಿಸಿ (ಸಿಮೆಂಟ್ ಕಾಂಕ್ರೀಟ್) ರಸ್ತೆ ಇದ್ದಂತೆ ರಾಜ್ಯದಲ್ಲಿ ಸಿಸಿ (ಕಾಂಪೀಟಿಶನ್ ಇನ್ ಕರಪ್ಷನ್) ಸರ್ಕಾರ ಅಧಿಕಾರದಲ್ಲಿದೆ. ಇಲ್ಲಿ ಸಚಿವರು, ಶಾಸಕರು ಭ್ರಷ್ಟಾಚಾರದ ಸ್ಪರ್ಧೆಗೆ ಇಳಿದಿದ್ದಾರೆ. ಇದೇ ಕಾಂಗ್ರೆಸ್ ಸರ್ಕಾರದ ಸಾಧನೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಟೀಕಿಸಿದರು.

ಹುಬ್ಬಳ್ಳಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರಕ್ಕೆ ಬಂದು 6 ತಿಂಗಳ ಅವಧಿಯನ್ನು ಕಾಂಗ್ರೆಸ್ ಭ್ರಷ್ಟಾಚಾರ, ಪರಸ್ಪರ ಕೆಸರೆರಚಾಟದಲ್ಲಿ ಕಳೆದಿದೆ. ಒಳಜಗಳ, ಭಿನ್ನಾಭಿಪ್ರಾಯ, ಗುಂಪುಗಾರಿಕೆಯಿಂದ ಆಡಳಿತದ ಮೇಲೆ ಪರಿಣಾಮ ಬೀರುತ್ತಿದೆ ಎಂದರು.

ಕೇಂದ್ರ ಸರ್ಕಾರ ಪಡಿತರದಾರರಿಗೆ 5ಕೆಜಿ ಅಕ್ಕಿ ನೀಡುತ್ತಿದೆ. ಅದನ್ನೇ ಕಾಂಗ್ರೆಸ್​ನವರು ಅನ್ನಭಾಗ್ಯ ಎಂದು ಹೇಳುತ್ತಿದ್ದಾರೆ. ಇದು ಮೋದಿ ಭಾಗ್ಯ. ಕಾಂಗ್ರೆಸ್ಸಿನವರಿಗೆ 1 ಕಾಳು ಅಕ್ಕಿ ಕೊಡಲು ಆಗಿಲ್ಲ. ಸಾರಿಗೆ ಬಸ್​ಗಳ ಸಂಖ್ಯೆಯನ್ನು ಕಡಿಮೆ ಮಾಡಿದ್ದಾರೆ. ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ರಾಜ್ಯ ಸರ್ಕಾರದ ಆಡಳಿತದ ಮೇಲೆ ನಿಯಂತ್ರಣ ಕಳೆದುಕೊಂಡಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ಸಿನ ಬಿ.ಕೆ. ಹರಿಪ್ರಸಾದ ಅವರು ಬಿಜೆಪಿಯನ್ನು ಬೈಯ್ದಿದ್ದಾರೆ. ಕಾಂಗ್ರೆಸ್ಸಿನಲ್ಲಿ ಅವರ ವಿರುದ್ಧ ಮಸಲತ್ತು ನಡೆಸುತ್ತಿರುವವರ ವಿರುದ್ಧ ಮಾತನಾಡುವ ತಾಕತ್ತು ಹರಿಪ್ರಸಾದ್​ಗೆ ಇಲ್ಲ. ಈಡಿಗ ಸಮಾಜದ ನಾಯಕತ್ವದಿಂದ ಅವರನ್ನು ದೂರ ಇಡುವ ಪ್ರಯತ್ನ ಕಾಂಗ್ರೆಸ್ಸಿನಲ್ಲಿ ನಡೆದಿದೆ. ಅವರು ಕಾಂಗ್ರೆಸ್, ಸಿದ್ದರಾಮಯ್ಯ ವಿರುದ್ಧ ಎಷ್ಟು ಪುಟಿಯುತ್ತಾರೋ ಎಂಬುದನ್ನು ನೋಡಿ ಆಮೇಲೆ ಪ್ರತಿಕ್ರಿಯಿಸುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.