ಜಿಲ್ಲೆ

ಅಕ್ಟೋಬರ್‌ನಿಂದ ಈ ರಾಷ್ಟ್ರೀಯ ಹೆದ್ದಾರಿ ಬಂದ್‌

Uttara Kannada - Subash Hegde

ಕಾರವಾರ: ಶಿರಸಿ-ಕುಮಟಾ ರಾಷ್ಟ್ರೀಯ ಹೆದ್ದಾರಿ 766ಇ ವಿಸ್ತರಣೆ ಕಾಮಗಾರಿ ಭಾಗವಾಗಿ ನಿಗದಿತ ಅವಧಿಯೊಳಗೆ ಕಾಮಗಾರಿ ಮುಗಿಸುವ ಭರವಸೆಯನ್ನು ಎನ್‌ಎಚ್‌ಎಐ ಅಧಿಕಾರಿಗಳಿಂದ ಪಡೆದು, ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲು ನನ್ನ ಬೆಂಬಲವಿದೆ ಎಂದು ಶಾಸಕ ಭೀಮಣ್ಣ ನಾಯ್ಕ ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರು ಅಧ್ಯಕ್ಷತೆಯ ಕೆಡಿಪಿ ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ನಂತರ ಮಾಧ್ಯಮ ಪ್ರತಿನಿಧಿಗಳ ಜತೆ ಅವರು ಮಾತನಾಡಿದರು.
ಶಿರಸಿಯಿಂದ ಬಂಡಲವರೆಗೆ ಸಾಕಷ್ಟು ಗ್ರಾಮಗಳಿಗೆ ಅಲ್ಲಿನ ಜನರಿಗೆ ತಾಲೂಕು ಕೇಂದ್ರಕ್ಕೆ ಓಡಾಟಕ್ಕೆ ಅವಕಾಶವಿಲ್ಲ. ಇದರಿಂದ ಅಲ್ಲಿ ಬಂದ್ ಮಾಡಲು ಸಾಧ್ಯವಿಲ್ಲ. ಘಟ್ಟದ ಪ್ರದೇಶದಲ್ಲಿ ರಸ್ತೆ ಕಾಮಗಾರಿ ಮಾಡುವಾಗ ವಾಹನ ಸಂಚಾರ ಬಂದ್ ಮಾಡುವುದು ಅನಿವಾರ್ಯ ಅದಕ್ಕೆ ನನ್ನ ಬೆಂಬಲವಿದೆ. ಆದರೆ, ನಿಗದಿತ ಅವಧಿಯಲ್ಲಿ ಕಾಮಗಾರಿ ಮುಗಿಸುವ ಭರವಸೆಯನ್ನು ಎನ್‌ಎಚ್‌ಎಐ ಹಾಗೂ ಗುತ್ತಿಗೆ ಕಂಪನಿಯ ಜತೆ ಖಚಿತ ಮಾಡಿಕೊಂಡ ನಂತರವಷ್ಟೇ ವಾಹನ ಸಂಚಾರವನ್ನು ಬಂದ್‌ ಮಾಡಲಾಗುವುದು ಎಂದು ಶಾಸಕ ಭೀಮಣ್ಣ ನಾಯ್ಕ ತಿಳಿಸಿದರು.

ಶಿರಸಿ ಕುಮಟಾ ನಡುವೆ ಸಿಮೆಂಟ್ ರಸ್ತೆ ಕಾಮಗಾರಿ ಭಾಗಶಃ ಮುಗಿದಿದ್ದು, ಸೇತುವೆಗಳನ್ನು ಹಾಗೂ ಘಟ್ಟದ ಕೆಲವೆಡೆ ಮಾತ್ರ ಸುಮಾರು 18 ಕಿಮೀ ರಸ್ತೆ ಮಾಡಬೇಕಿದೆ. ಅದಕ್ಕೆ ವಾಹನ ಸಂಚಾರ ಬಂದ್ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಎನ್‌ಎಚ್‌ಎಐ ಹೊನ್ನಾವರ ಯೋಜನಾ ನಿರ್ದೇಶಕ ಶಿವಕುಮಾರ್ ಸಭೆಗೆ ಮಾಹಿತಿ ನೀಡಿದರು.

ಶಿರಸಿ -ಹಾವೇರಿ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗೆ ಅರಣ್ಯ ಮಂತ್ರಾಲಯದಿಂದ ಪ್ರಾಥಮಿಕ ಅನುಮೋದನೆ ದೊರೆತಿದೆ. ಮಳೆ ಕಡಿಮೆಯಾದ ತಕ್ಷಣ ಮರು ಡಾಂಬರೀಕರಣ ಪ್ರಾರಂಭಿಸಲಾಗುವುದು. ಎರಡನೇ ಹಂತದ ಅನುಮೋದನೆ ದೊರೆತ ಬಳಿಕ ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು.