ಜಿಲ್ಲೆ

ಟಿಪ್ಪು ಸುಲ್ತಾನ್ ವರ್ಣಿಸಿದ ಶರಣರಿಗೆ ಈ ಗತಿ: ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆ

ವಿಜಯಪುರ : ಟಿಪ್ಪು ಸುಲ್ತಾನನ್ನು ವರ್ಣನೆ ಮಾಡಿದ್ದಕ್ಕೆ ಮುರುಘಾ ಶರಣರಿಗೆ ಈ ಗತಿ ಬಂದಿದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಶರಣರ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಮಂಜೂರಿಸಿದ ೨೫ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಸಂಚಾರಿ ಫ್ಲೈಓವರ್ ನಿರ್ಮಾಣ ಸೇರಿದಂತೆ ಮತ್ತಿತರ ಕಾಮಗಾರಿಗಳ ಪರಿಶೀಲನೆ ಕುರಿತು ಹಾಗೂ ಸಿಎಂ ನಗರಕ್ಕೆ ಭೇಟಿ ಹಿನ್ನೆಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಽಕಾರಿಗಳ ಸಭೆ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಟಿಪ್ಪು ಸುಲ್ತಾನ್ ಪರವಾಗಿದ್ದವರ ಪರಿಸ್ಥಿತಿ ಏನಾಗುತ್ತಿದೆ ಎಂಬುದಕ್ಕೆ ಶರಣರ ಪರಿಸ್ಥಿತಿಯೇ ತಾಜಾ ನಿದರ್ಶನವಾಗಿದೆ. ಟಿಪ್ಪು ಖಡ್ಗ ಪಡೆದ ವಿಜಯ ಮಲ್ಯ ಹಾಳಾದ. ಟಿಪ್ಪು ಸಿನೆಮಾ ಮಾಡಿದ ನಿರ್ಮಾಪಕರು ಹಾಳಾದರು. ಟಿಪ್ಪು ಜಯಂತಿ ಮಾಡಿದ ಸಿದ್ದರಾಮಯ್ಯ ಅವರು ಚುನಾವಣೆಯಲ್ಲಿ ಪರಾಭವಗೊಂಡರು ಎಂದರು.
ಚಿತ್ರದುರ್ಗ ಮದಕರಿ ನಾಯಕರು, ಒನಕೆ ಓಬವ್ವರ ನಾಡು. ಅಂಥ ವೀರ ಪುರುಷರ ನಾಡಿನಲ್ಲಿರುವ ಮಠದಲ್ಲಿ ಟಿಪ್ಪು ಪುತ್ಥಳಿ ಮಾಡಿದ್ದು ತಪ್ಪು ಎಂದರು. ಮದಕರಿ ನಾಯಕರ ಪ್ರದೇಶದ ಮಠದಲ್ಲಿ ಟಿಪ್ಪುವಿನ ವರ್ಣನೆ ಮಾಡಬಾರದಿತ್ತು. ಮೂಲತಃ ಮುರಘಾ ಮಠ ಲಿಂಗಾಯತರ ಮಠ. ಹಿಂದುಗಳ ಮಠ. ಆದರೆ ಅಲ್ಲಿನ ಸ್ವಾಮೀಜಿಗಳು ಕಮ್ಯುನಿಸ್ಟ್​ರನ್ನು ನಂಬಿ ಹೀಗಾದರು ಎಂದರು.
ಮುರಘಾ ಶರಣರ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಬಿ.ವೈ. ವಿಜಯೇಂದ್ರ ಹಾಗೂ ಬಿ.ಎಸ್.ಯಡಿಯೂರಪ್ಪ ಅವರನ್ನೇ ಕೇಳಿ ಎಂದರು.
ಬಳಿಕ ಯತ್ನಾಳ ಅವರು, ನಗರದಲ್ಲಿ ಕೈಗೆತ್ತಿಕೊಂಡಿರುವ ನಾನಾ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಕುರಿತು ಅಧಿಕಾರಿಗಳಿಂದ ಮಾಹಿತಿ ಕಲೆ ಹಾಕಿದರು.