ಜಿಲ್ಲೆ

ರೌಡಿಗಳ ಹಾವಳಿ ನಿಯಂತ್ರಿಸಲು ಭಾರಿ 'ತಲೆ' ಉಪಯೋಗಿಸಿದ ಗೃಹ ಇಲಾಖೆ; ಬೆಂಗಳೂರು ಪೊಲೀಸ್ ಇತಿಹಾಸದಲ್ಲೇ ಇದು ಮೊದಲು!

rashmirhebbur

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚಾಗಿರುವ ರೌಡಿಗಳ ಹಾವಳಿಯನ್ನು ನಿಯಂತ್ರಿಸಲು ಗೃಹ ಇಲಾಖೆ ಇದೀಗ ಭಾರಿ 'ತಲೆ' ಉಪಯೋಗಿಸಿದೆ. ನಗರದಲ್ಲಿ ಉಪಟಳ ನೀಡುವ ರೌಡಿಗಳ ಹೆಡೆಮುರಿ ಕಟ್ಟಲು 'ಹೆಡ್'​ ಕಾನ್​ಸ್ಟೆಬಲ್​ಗಳನ್ನೇ ಅಸ್ತ್ರವಾಗಿ ಬಳಸಿಕೊಳ್ಳಲಾಗಿದ್ದು, ಬೆಂಗಳೂರು ಪೊಲೀಸ್ ಇತಿಹಾಸದಲ್ಲೇ ಇದುವರೆಗೂ ಆಗಿರದ ಒಂದು ಬದಲಾವಣೆಯನ್ನು ಮಾಡಲಾಗಿದೆ.

ರಾಜಧಾನಿಯ ಪೊಲೀಸ್​ ಠಾಣೆಗಳಿಗೆ ಭಾರಿ ಚುರುಕು ಮುಟ್ಟಿಸುವ ನಿಟ್ಟಿನಲ್ಲಿ ನಗರ ಪೊಲೀಸ್ ಆಯುಕ್ತರು ಏಕಕಾಲಕ್ಕೆ 999 ಹೆಡ್​ ಕಾನ್​ಸ್ಟೆಬಲ್​ಗಳನ್ನು ವರ್ಗಾವಣೆ ಮಾಡಿದ್ದು, ರಾಜಧಾನಿಯಲ್ಲಿ ಇಷ್ಟೊಂದು ದೊಡ್ಡಪ್ರಮಾಣದಲ್ಲಿ ಹೆಡ್​ ಕಾನ್​ಸ್ಟೆಬಲ್​ಗಳ ಸ್ಥಾನ ಬದಲಾಗಿದ್ದು ಇದೇ ಮೊದಲು.

ಹೆಡ್‌ ಕಾನ್‌ಸ್ಟೆಬಲ್‌ಗಳನ್ನು ವರ್ಗಾವಣೆ ಮಾಡುವ ಮೂಲಕ ತಳಮಟ್ಟದಲ್ಲಿ ಪೊಲೀಸಿಂಗ್ ವ್ಯವಸ್ಥೆ ಬಿಗಿಯಾಗಿಸಲು ಇಲಾಖೆ ಮುಂದಾಗಿದೆ. ಒಂದೇ ಠಾಣೆಯಲ್ಲಿ ಐದು ವರ್ಷಗಳಿಗೂ ಹೆಚ್ಚು ಕಾಲಾವಧಿ ಕರ್ತವ್ಯದಲ್ಲಿದ್ದ ಹೆಡ್‌ ಕಾನ್​ಸ್ಟೆಬಲ್​ಗಳ ವರ್ಗಾವಣೆ ಮಾಡಿ ಬೆಂಗಳೂರು ನಗರ ಆಡಳಿತ ವಿಭಾಗದ ಡಿಸಿಪಿ ನಿಶಾ ಜೇಮ್ಸ್ ಆದೇಶಿಸಿದ್ದಾರೆ.

ಒಂದೆಡೆ ನಗರದಲ್ಲಿ ಹೆಚ್ಚಾಗುತ್ತಿರುವ ಅಪರಾಧ ಚಟುವಟಿಕೆಗಳು, ಮತ್ತೊಂದು ಕಡೆ ಜನ ಸಾಮಾನ್ಯರಿಗೆ ನ್ಯಾಯ ಒದಗಿಸುವ ಪೊಲೀಸರೇ ಅಕ್ರಮ ಚಟುವಟಿಕೆಗಳಿಗೆ ಸಾಥ್ ನೀಡಿ ಲಂಚ ಪಡೆಯುತ್ತಿರುವುದು ಅಲ್ಲಲ್ಲಿ ಬೆಳಕಿಗೆ ಬರುತ್ತಿವೆ. ಕೆಲ ಪೊಲೀಸ್ ಠಾಣೆಗಳಲ್ಲಿ ಸೇವೆ ಸಲ್ಲಿಸುವ ಸಿಬ್ಬಂದಿ ಲಾಬಿ ನಡೆಸಿ 8ಕ್ಕೂ ಅಧಿಕ ವರ್ಷಗಳಿಂದ ಯಾವುದೇ ವರ್ಗಾವಣೆ ಇಲ್ಲದೆ ಒಂದೇ ಕಡೆ ಕೆಲಸ ಮಾಡುತ್ತಿದ್ದಾರೆ. ಇದೀಗ ವರ್ಗಾವಣೆ ಮಾಡುವ ಮೂಲಕ ಅಂಥವರಿಗೆ ಶಾಕ್ ನೀಡಲಾಗಿದೆ.

ನಗರದ ಸಾಕಷ್ಟು ಪೊಲೀಸ್ ಠಾಣೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಅಪರಾಧ ಹಿನ್ನೆಲೆ ಇರುವ ವ್ಯಕ್ತಿಗಳ ಬಗ್ಗೆ ಗೊತ್ತಿದ್ದರೂ ವಿವಿಧ ಆಮಿಷಗಳಿಗೆ ಒಳಗಾಗಿ ಕ್ರಮ ಕೈಗೊಳ್ಳುತ್ತಿರಲಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಹೆಡ್ ಕಾನ್​ಸ್ಟೆಬಲ್​ಗಳು ಮಾತ್ರವಲ್ಲದೆ ಸಬ್ ಇನ್‌ಸ್ಪೆಕ್ಟರ್‌ಗಳೂ ಕೆಲ ವರ್ಷಗಳಿಂದ ಗ್ರಾಮೀಣ ಭಾಗಕ್ಕೆ ಹೋಗದೆ ನಗರದಲ್ಲೇ ಠಿಕಾಣಿ ಹೂಡಿರುವ ಬಗ್ಗೆ ಮಾಹಿತಿ ಕಲೆಹಾಕಲಾಗಿದೆ. ಹಂತ-ಹಂತವಾಗಿ ವರ್ಗಾವಣೆ ಮಾಡುವ ಮೂಲಕ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ನಡೆಸಲು ಚಿಂತಿಸಲಾಗಿದೆ.

ಬಹಳಷ್ಟು ಹೆಡ್‌ ಕಾನ್‌ಸ್ಟೆಬಲ್‌ಗಳು 11 ವರ್ಷಗಳ ಕಾಲ ಒಂದೇ ಠಾಣೆಯಲ್ಲಿ ಠಿಕಾಣಿ ಹೂಡಿರುವುದು ನಮ್ಮ ಗಮನಕ್ಕೆ ಬಂದಿತ್ತು. ಹೀಗಾಗಿ ಈ ವರ್ಗಾವಣೆ ಮಾಡಲಾಗಿದೆ. ಸಬ್ ಇನ್‌ಸ್ಪೆಕ್ಟರ್‌ಗಳನ್ನೂ ಇದೇ ಮಾದರಿಯಲ್ಲಿ ವರ್ಗಾವಣೆ ಮಾಡಲು ಚಿಂತನೆ ನಡೆಸಲಾಗಿದೆ.
| ಕಮಲ್ ಪಂತ್ ನಗರ ಪೊಲೀಸ್ ಆಯುಕ್ತ