ಶಿಗ್ಗಾಂವಿ: ಪಟ್ಟಣದ ಪುರಸಭೆ ವ್ಯಾಪ್ತಿಯ ವಾರ್ಡ್ ನಂಬರ್- 6ರ ಮಲ್ಲಿಕಾರ್ಜುನ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪಕ್ಕದಲ್ಲಿರುವ ಖಾಲಿ ನಿವೇಶನ ಕಸದ ತೊಟ್ಟಿಯಂತಾಗಿದ್ದು, ದುರ್ವಾಸನೆ ಹರಡುತ್ತಿದೆ. ಅಲ್ಲಿ ನೀರು ನಿಲ್ಲುತ್ತಿರುವುದರಿಂದ ಹಂದಿಗಳ ಉಪಟಳ ಹೆಚ್ಚಾಗಿ, ಪಕ್ಕದ ನಿವಾಸಿಗಳು ಮತ್ತು ವಿದ್ಯಾರ್ಥಿಗಳಿಗೆ ನಿತ್ಯ ಕಿರಿಕಿರಿಯಾಗುತ್ತಿದೆ.
ಪುರಸಭೆ ವ್ಯಾಪ್ತಿಯಲ್ಲಿ ಅಂದಾಜು 2 ಸಾವಿರಕ್ಕೂ ಹೆಚ್ಚು ಖಾಲಿ ನಿವೇಶನಗಳಿವೆ. ಪ್ರಮುಖವಾಗಿ ಜಯನಗರ, ಭೀಮಾ ಲೇ ಔಟ್, ಬಸವೇಶ್ವರ ನಗರ, ಶಬರಿ ನಗರ ಸೇರಿ ಹಲವೆಡೆ ಖುಲ್ಲಾ ಜಾಗ ಇವೆ. ಅಲ್ಲಿ ಕೆಲವರು ಹಳೆಯ ಕಟ್ಟಡದ ಅವಶೇಷ ತಂದು ಹಾಕುತ್ತಿದ್ದಾರೆ. ಅಲ್ಲಿ ಮಳೆ ನೀರು, ಸುತ್ತ್ತನ ಚರಂಡಿ ನೀರು ನಿಲ್ಲುತ್ತಿದೆ. ಹುಲುಸಾಗಿ ಹುಲ್ಲು ಬೆಳೆಯುತ್ತಿದೆ. ಇದರಿಂದ ಖಾಲಿ ನಿವೇಶನಗಳು ಬೀದಿ ದನಗಳು, ಹಂದಿ, ನಾಯಿಗಳ ವಾಸಸ್ಥಳವಾಗಿ ಮಾರ್ಪಟ್ಟಿವೆ.
ಖಾಲಿ ನಿವೇಶನಗಳಲ್ಲಿ ಸ್ವಚ್ಛತೆ ಕಾಪಾಡುವಂತೆ ಪುರಸಭೆ ಸೂಚನೆ ನೀಡದಿರುವುದು ಮಾಲೀಕರ ಅಸಡ್ಡೆಗೆ ಕಾರಣವಾಗಿದೆ. ಅಧಿಕಾರಿಗಳು ಈ ಬಗ್ಗೆ ಗಮನ ಹರಿಸುವಂತೆ ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.
ಇಲ್ಲಿನ ಖಾಲಿ ನಿವೇಶನಗಳಲ್ಲಿ ಬೇರೆ ಕಡೆಗಳಿಂದ ಹಳೆಯ ಮನೆಗಳ ಅವಶೇಷ, ಕಸವನ್ನು ತಂದು ಬಿಸಾಕುತ್ತಾರೆ. ಇದರಿಂದ ಕೊಳಚೆ ನಿರ್ವಣವಾಗಿ ದುರ್ವಾಸನೆ ಬೀರುವಂತಾಗಿದೆ. ಹಂದಿಗಳ ಉಪಟಳ, ಸೊಳ್ಳೆಗಳ ಕಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪುರಸಭೆ ಸಿಬ್ಬಂದಿಗೆ ಹಲವು ಬಾರಿ ಮನವಿ ಮಾಡಿದ್ದರೂ ಸ್ವಚ್ಛತೆಗೆ ಗಮನ ಕೊಡುತ್ತಿಲ್ಲ. ಅಧಿಕಾರಿಗಳು ನಿವೇಶನಗಳ ಮಾಲೀಕರಿಗೆ ಸ್ವಚ್ಛತೆ ಕಾಪಾಡಿಕೊಳ್ಳಲು ಸೂಚನೆ ನೀಡಬೇಕು. | ಚಂದ್ರು ಸೊಲಬಕ್ಕನವರ ಸ್ಥಳೀಯ ನಿವಾಸಿ ನಾನು ಶಿಗ್ಗಾಂವಿ ಪುರಸಭೆಗೆ ಈಗಷ್ಟೇ ಬಂದಿದ್ದೇನೆ. ಪಟ್ಟಣದಲ್ಲಿ ನಿರ್ವಹಣೆ ಇಲ್ಲದ ಖಾಲಿ ನಿವೇಶನಗಳನ್ನು ಶುಚಿಗೊಳಿಸಲು ಸಿಬ್ಬಂದಿಗೆ ಸೂಚಿಸುತ್ತೇನೆ. ಖಾಸಗಿ ಒಡೆತನದಲ್ಲಿರುವ ನಿವೇಶನಗಳನ್ನು ಗುರುತಿಸಿ ಆಯಾ ಜಾಗದ ಮಾಲೀಕರಿಗೆ ಸ್ವಚ್ಛತೆ ಕಾಯ್ದುಕೊಳ್ಳಲು ಸೂಚನೆ ನೀಡುತ್ತೇನೆ. | ಸಂಗನಬಸಯ್ಯ ಪುರಸಭೆ ಮುಖ್ಯಾಧಿಕಾರಿ