ಬೆಂಗಳೂರು: ಮೂರು ತಿಂಗಳ ಹಿಂದೆ ಕಾಣೆಯಾಗಿದ್ದ ಅರ್ಚಕರನ್ನು ಅಪಹರಣ ಮಾಡಿ ಕೊಲೆ ಮಾಡಿರುವುದಾಗಿ ಆರೋಪ ಕೇಳಿಬಂದಿದ್ದು, ಕಾಡುಗೋಡಿ ಪೊಲೀಸರು ಮೂವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕಾಡುಗೋಡಿಯ ಕಾಶಿ ವಿಶ್ವೇಶ್ವರಸ್ವಾಮಿ ದೇವಸ್ಥಾನದ ಅರ್ಚಕ ನೀಲಕಂಠ ದೀಕ್ಷಿತ್ ಅಲಿಯಾಸ್ ದೊರೆ (57) ಕಾಣೆಯಾದವರು. ಇವರ ಅಣ್ಣ ನರಸಿಂಹಮೂರ್ತಿ ದೀಕ್ಷಿತ್ ನೀಡಿದ ದೂರಿನ ಮೇರೆಗೆ ಮಂಜುನಾಥ್ ವಿರುದ್ಧ ಎಫ್ಐಆರ್ ದಾಖಲಿಸಿ ವಶಕ್ಕೆ ಪಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಜಮೀನು ಮಾರಾಟದಿಂದ ಬಂದ ಹಣದಲ್ಲಿ ನೀಲಕಂಠ ದೀಕ್ಷಿತ್, ಮೈಸೂರು, ನಂಜನಗೂಡಿನಲ್ಲಿ ಜಮೀನು ಖರೀದಿಸಿ ಉಳಿದ ಹಣವನ್ನು ಬಿಬಿಎಂಪಿ ಮಾಜಿ ಸದಸ್ಯ ಆಂಜನೇಯ ರೆಡ್ಡಿ ಮುಖಾಂತರ ಬಡ್ಡಿ ವ್ಯವಹಾರ ನಡೆಸುತ್ತಿದ್ದರು. ಯಲ್ಲಾ ರೆಡ್ಡಿ ಸರ್ಕಲ್‌ನಲ್ಲಿನ ಹಾರ್ಡ್‌ವೇರ್ ಅಂಗಡಿ ಮಾಲೀಕ ಮಂಜುನಾಥ್‌ಗೆ 2 ವರ್ಷಗಳ ಹಿಂದೆ ನೇರವಾಗಿ 10 ಲಕ್ಷ ರೂ. ಬಡ್ಡಿಗೆ ನೀಡಿದ್ದರು. ಮೊದ ಮೊದಲು ಮಂಜುನಾಥ್, ಸರಿಯಾದ ಸಮಯಕ್ಕೆ ಬಡ್ಡಿ ತಂದು ನೀಲಕಂಠ ಮನೆಗೆ ಕೊಡುತ್ತಿದ್ದರು. ಇತ್ತೀಚೆಗೆ ಕೊಡಲು ಸತಾಯಿಸುತ್ತಿದ್ದರು. ಮೇನಲ್ಲಿ ಮಂಜುನಾಥ, ಬಡ್ಡಿ ಹಣ ಕೊಡಲು ಮನೆ ಬಳಿಗೆ ಬಂದಾಗ, ಸರಿಯಾದ ಸಮಯಕ್ಕೆ ಕೊಡುವುದಿಲ್ಲ, ಅಸಲು ಕೊಡುವಂತೆ ದೀಕ್ಷಿತ್ ಕೇಳಿದ್ದಾಗ ಮಂಜುನಾಥ್ ಕರೊನಾ ಲಾಕ್‌ಡೌನ್‌ನಿಂದ ವ್ಯಾಪಾರ ಇಲ್ಲ. ನನ್ನ ಹತ್ತಿರ ಹಣವೂ ಇಲ್ಲ ಎಂದು ಹೇಳಿದ್ದರು. ಅದಕ್ಕೆ, ಮುಂದಿನ ತಿಂಗಳು ಹಣ ಕೊಡದಿದ್ದರೆ ಅಂಗಡಿ ಬಳಿಗೆ ಬಂದು ನಿನ್ನ ತಂದೆ, ಪತ್ನಿ ಎಲ್ಲರ ಮುಂದೆ ಕೇಳುವುದಾಗಿ ದೀಕ್ಷಿತ್ ಹೇಳಿದ್ದರು. ಕುಪಿತಗೊಂಡ ಮಂಜುನಾಥ್, ಕೋಪ ಮಾಡಿಕೊಂಡು ಹೋಗಿದ್ದರು. ಇದಾದ ಮೇಲೆ ಸೆ.5ರ ರಾತ್ರಿ 7.45ರಲ್ಲಿ ಮನೆಯಿಂದ ದ್ವಿಚಕ್ರ ವಾಹನದಲ್ಲಿ ಹೋದ ನೀಲಕಂಠ ವಾಪಸ್ ಬಂದಿರಲಿಲ್ಲ.
ದೀಕ್ಷಿತರು ಮನೆ ಪಕ್ಕದಲ್ಲಿ ದ್ವಿಚಕ್ರ ವಾಹನವನ್ನು ಕೀ ಸಮೇತ ನಿಲ್ಲಿಸಿದ್ದರು. ಅವರಿಗಾಗಿ ಎಲ್ಲೆಡೆ ಹುಡುಕಾಟ ನಡೆಸಿ ಕೊನೆಗೆ ಠಾಣೆಗೆ ದೂರು ನೀಡಲಾಗಿತ್ತು. ಈ ಕುರಿತು ಕಾಣೆಯಾಗಿದ್ದ ಪ್ರಕರಣ ದಾಖಲಿಸಿಕೊಂಡಿದ್ದ ಕಾಡುಗೋಡಿ ಪೊಲೀಸರು ಎಲ್ಲೆಡೆ ಹುಡುಕಾಟ ನಡೆಸಿದ್ದರು. ಕೆಲ ಸುಳಿವಿನ ಮೇರೆಗೆ ಮಂಜುನಾಥ್ ಕೊಲೆ ಮಾಡಿರುವ ಅನುಮಾನ ಇದ್ದು, ಈ ಬಗ್ಗೆ ತನಿಖೆ ನಡೆಸುವಂತೆ ನರಸಿಂಹಮೂರ್ತಿ ದೀಕ್ಷಿತ್ ದೂರು ನೀಡಿದ್ದಾರೆ. ಈ ಮೇರೆಗೆ ಮಂಜುನಾಥ್ರನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಹಣ ಕೇಳಲು ಹಾರ್ಡ್‌ವೇರ್ ಅಂಗಡಿ ಬಳಿಗೆ ನೀಲಕಂಠ ದೀಕ್ಷಿತ್ ಹೋದಾಗ ಮಾತಿಗೆ ಮಾತು ಬೆಳೆದು, ಅರ್ಚಕರ ತಲೆಗೆ ಮಂಜುನಾಥ್ ರಾಡ್‌ನಿಂದ ಹಲ್ಲೆ ನಡೆಸಿದ್ದಾರೆ. ಆನಂತರ ಒಳಗೆ ಎಳೆದೊಯ್ದು ಚಾಕುವಿನಿಂದ ಇರಿದು ಹತ್ಯೆ ಮಾಡಿ 2 ದಿನ ಶವವನ್ನು ಅಂಗಡಿಯಲ್ಲಿ ಇಟ್ಟುಕೊಂಡಿದ್ದರು. ಶವ ಹೂತಿಡಲು ಎಲ್ಲೆಡೆ ಸ್ಥಳ ಹುಡುಕಾಟ ನಡೆಸಿ ತಿರುಮಲಶೆಟ್ಟಿಯಲ್ಲಿನ ಸರ್ಕಾರಿ ಜಾಗದಲ್ಲಿ ಕಸ ವಿಂಗಡಣೆ ಘಟಕ ನಿರ್ಮಾಣಕ್ಕೆ ಪಾಯ ತೋಡಿರುವುದು ಗಮನಿಸಿದ್ದಾರೆ. ಆನಂತರ ಅಂಗಡಿ ನೌಕರ ಮತ್ತು ಮುಂದಿನ ಅಂಗಡಿ ಹುಡುಗನ ಸಹಾಯದಿಂದ ರಾತ್ರೋರಾತ್ರಿ ಶವವನ್ನು ತೆಗೆದುಕೊಂಡು ಹೋಗಿ ಪಾಯದ ಒಳಗೆ ಹಾಕಿ ಮಣ್ಣು ಎಳೆದು ಬಂದಿದ್ದಾರೆ. ಇದೀಗ ಏಳೆಂಟು ಅಡಿ ಗೋಡೆ ನಿರ್ಮಾಣವಾಗಿದೆ. ಇದು ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ 'ದೃಶ್ಯ' ಸಿನಿಮಾದ ಕತೆಯಂತೆ ರೋಚಕತೆ ಪಡೆಯುತ್ತಿದೆ.
ಆರೋಪಿ ಮಂಜುನಾಥ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸೆ.5ರಂದು ನೀಲಕಂಠ ದೀಕ್ಷಿತ್‌ನನ್ನು ಅಪಹರಣ ಮಾಡಿ ಕೊಲೆ ಮಾಡಿದ್ದಾಗಿ ಹೇಳುತ್ತಿದ್ದಾರೆ. ಆನಂತರ ಶವವನ್ನು ತನ್ನ ಕಲ್ಯಾಣ ಮಂಟಪದ ಹಿಂಭಾಗ ಹೂತಿಟ್ಟು ಮೇಲೆ ಸೀಮೆಂಟ್ ಹಾಕಿರುವುದಾಗಿ ತಿಳಿದುಬಂದಿದೆ. ತಾಲೂಕು ತಹಸೀಲ್ದಾರ್ ಸಮ್ಮುಖದಲ್ಲಿ ಶವ ತೆಗೆಯಬೇಕಾಗಿದೆ. ಶವ ಹೊರತೆಗೆದ ಆನಂತರ ಕೊಲೆ ಎಂದು ಅಂತಿಮ ನಿರ್ಧಾರಕ್ಕೆ ಬರುವುದಾಗಿ ಪೊಲೀಸರು ತಿಳಿಸಿದ್ದಾರೆ.