ಜಿಲ್ಲೆ

ಭಕ್ತರ ನಂಬಿಕೆಯ ದೈವ ತೀರುವಪ್ಪ, ಮುತ್ತಪ್ಪ

ಕೆ.ಎಸ್.ನಾಗೇಶ್ ಕುಶಾಲನಗರ
ಕುಶಾಲನಗರದ ಬೈಚ್ಚನಹಳ್ಳಿಯ ಯೋಗಾನಂದ ಬಡಾವಣೆಯ ಕಾವೇರಿ ನದಿ ದಡದ ಸುಂದರ ಪರಿಸರದಲ್ಲಿ ಭಕ್ತರ ಆರಾಧ್ಯ ದೈವ ತೀರುವಪ್ಪ ಮತ್ತು ಮುತ್ತಪ್ಪ ದೇವರು ನೆಲೆ ನಿಂತಿದ್ದಾರೆ.

ಮಕ್ಕಳಿಲ್ಲದವರು ಮಕ್ಕಳ ಫಲಕ್ಕಾಗಿ, ವಿದ್ಯೆ, ಕೌಟುಂಬಿಕ ಸಮಸ್ಯೆಗಳ ಪರಿಹರಿಸಿಕೊಳ್ಳಲು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸನ್ನಿಧಿಗೆ ಆಗಮಿಸುತ್ತಾರೆ.
ದೇವರಿಗೆ ತೊಟ್ಟಿಲು ಅರ್ಪಿಸಿದರೆ ಮಕ್ಕಳಾಗುತ್ತವೆ, ಬೆಳ್ಳಿಯ ಕಣ್ಣು ನೀಡಿದರೆ ಶಿಕ್ಷಣದಲ್ಲಿ ಉನ್ನತಿ ಸಿಗುತ್ತದೆ ಎಂಬುದು ಭಕ್ತರ ನಂಬಿಕೆ. ಭಕ್ತರು ತಮ್ಮ ಶಕ್ತಿಯಾನುಸಾರ ಹರಕೆ ಅರ್ಪಿಸುವ ಮೂಲಕ ದೇವರ ಸೇವೆ ಮಾಡುತ್ತಾರೆ.

ತೆರೆ ನಡೆಸುವ ಸಂದರ್ಭದಲ್ಲಿ ತೀರುವಪ್ಪ ಮತ್ತು ಮುತ್ತಪ್ಪ ದೇವರ ಮೂರ್ತಿಯನ್ನು ಇರಿಸಿ ಪೂಜಿಸಲಾಗುತ್ತಿತ್ತು. ನಂತರದ ದಿನಗಳಲ್ಲಿ ತಂತ್ರಿಗಳ ಸಲಹೆಯ ಮೇರೆಗೆ 2016ರ ಫೆಬ್ರವರಿಯಲ್ಲಿ ನೂತನವಾಗಿ ದೇವಾಲಯ ನಿರ್ಮಿಸಿ ಪೂಜೆ ಸಲ್ಲಿಸಿಕೊಂಡು ಬರಲಾಗುತ್ತಿದೆ.

ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ದೇವಾಲಯದಲ್ಲಿ ಪೂಜಾ ಕೈಂಕರ್ಯ ನೆರವೇರಿಸಲಾಗುತ್ತಿದೆ. ಪ್ರತಿ ಶನಿವಾರ ಸಂಜೆ 6 ಗಂಟೆಗೆ ಪೈಯನ್ ಗುತ್ತಿ ಸೇವೆ ಹಾಗೂ ಹರಕೆ ಅರ್ಪಣೆ ಕಾರ್ಯ ಮಾಡಲಾಗುತ್ತದೆ.

ದಸರಾ ಕಳೆದ ನಂತರ ಕಾರ್ತಿಕ ಮಾಸದಲ್ಲಿ ಪುತ್ತರಿ ವೆಲ್ಲಾಟಮ್ಮ ಅಂದರೆ ದೇವರಿಗೆ ರೈತರು ಬೆಳೆದ ಹೊಸ ಅಕ್ಕಿಯನ್ನು ಸಮರ್ಪಿಸುವ ಕಾರ್ಯವನ್ನು ಹಬ್ಬದ ರೀತಿಯಲ್ಲಿ ಆಚರಿಸಲಾಗುತ್ತದೆ. ರೈತರು ತಾವು ಬೆಳೆದ ಹೊಸ ಅಕ್ಕಿಯನ್ನು ದೇವರಿಗೆ ಅರ್ಪಿಸಿ ಸಮೃದ್ಧಿಗಾಗಿ ಪ್ರಾರ್ಥಿಸುತ್ತಾರೆ.

ಚಾಮುಂಡೇಶ್ವರಿ ನೆಲೆಸಿದ್ದಾಳೆ ಎಂಬ ನಂಬಿಕೆ: ಪೂಜಾ ಸ್ಥಳದಲ್ಲಿ ಚಾಮುಂಡೇಶ್ವರಿ ತಾಯಿ ನೆಲೆಸಿದ್ದಾಳೆ ಎಂಬ ನಂಬಿಕೆ ಇಲ್ಲಿನವರದು. ನೂರಾರು ವರ್ಷಗಳಿಂದ ಚಾಮುಂಡೇಶ್ವರಿ ತಾಯಿ ನೆಲೆಸಿದ್ದಾಳೆ ಎಂದು ತಂತ್ರಿಗಳಿಂದ ತಿಳಿದು ಬಂದಿದ್ದು, ಚಾಮುಂಡೇಶ್ವರಿ ತಾಯಿಗೆ ಕೂಡ ಪೂಜೆ ಸಲ್ಲಿಸಲಾಗುತ್ತಿದೆ. ಪ್ರತಿ ವರ್ಷ ಫೆಬ್ರವರಿ ತಿಂಗಳಲ್ಲಿ ಮುತ್ತಪ್ಪ ದೇವಸ್ಥಾನದಲ್ಲಿ ನಡೆಯುವ ತೆರೆ ಮಹೋತ್ಸವಕ್ಕೂ ಮೊದಲು ಚಾಮುಂಡೇಶ್ವರಿ ತಾಯಿಗೆ ಪೂಜಾ ಕೈಂಕರ್ಯ ಹಮ್ಮಿಕೊಳ್ಳಲಾಗುತ್ತದೆ ಎಂದು ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ಹರಿಂದ್ರನ್ ಹೇಳುತ್ತಾರೆ.

ತಲಪೋಲಿ ಮೆರವಣಿಗೆ: ಶಿವನನ್ನು ಆರಾಧಿಸುವ ಬಹುತೇಕರು ಮುತ್ತಪ್ಪನಿಗೆ ನಡೆದುಕೊಳ್ಳುತ್ತಾರೆ. ಈ ದೇಗುಲಕ್ಕೆ ಹಿಂದುಗಳು ಮಾತ್ರವಲ್ಲದೆ ಕ್ರೈಸ್ತರು, ಮುಸ್ಲಿಂ ಭಕ್ತರು ಕೂಡ ಬಂದು ಪೂಜೆ ಸಲ್ಲಿಸುತ್ತಾರೆ. ಕೇರಳ ರಾಜ್ಯದವರು ಕೂಡ ಮುತ್ತಪ್ಪ ದೇವರ ಅನುಯಾಯಿಗಳಿದ್ದು, ವಾರ್ಷಿಕ ಉತ್ಸವ ಸಂದರ್ಭ ವಿವಿಧ ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವುದನ್ನು ಕಾಣಬಹುದಾಗಿದೆ.
ವಾರ್ಷಿಕ ತೆರೆ ಮಹೋತ್ಸವ ಸಂದರ್ಭ ತಲಪೋಲಿ ಮೆರವಣಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಸಾಗುತ್ತದೆ. ಜಾತಿ, ಧರ್ಮ ಬಿಟ್ಟು ಭಕ್ತರು ಇದರಲ್ಲಿ ಪಾಲ್ಗೊಳ್ಳುವುದನ್ನು ಕಾಣಬಹುದಾಗಿದೆ. ದೇವರಿಗೆ ಸೇಂದಿ, ಒಣಗಿದ ಮೀನು ಮತ್ತು ತಡುಗುಣಿ ಕಾಳು ಇಷ್ಟ ಎಂದು ಭಕ್ತರ ನಂಬಿಕೆ. ಹಾಗಾಗಿ ದೇವರ ನೈವೇದ್ಯಕ್ಕೆ ಇದಕ್ಕೆ ಬಳಸಲಾಗುತ್ತದೆ. ನಂತರ ಭಕ್ತರಿಗೆ ಪ್ರಸಾದ ರೂಪದಲ್ಲಿ ವಿತರಿಸಲಾಗುತ್ತದೆ.