ಜಿಲ್ಲೆ

ಕರೊನಾ ಮೂರನೇ ಅಲೆ ಎದುರಿಸಲು ಸಿದ್ಧತೆ: ಡಿಸಿ ಜಗದೀಶ್ ಹೇಳಿಕೆ

Udupi

ಕುಂದಾಪುರ: ಕರೊನಾ ಮೂರನೇ ಅಲೆ ಎದುರಿಸಲು 25 ಐಸಿಯು ಬೆಡ್ ಮಕ್ಕಳ ಆಸ್ಪತ್ರೆಯ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದರು.

ಕುಂದಾಪುರ ಸರ್ಕಾರಿ ತಾಲೂಕು ಆಸ್ಪತ್ರೆಯಲ್ಲಿ ನಡೆದ ಕೋವಿಡ್ ಆಸ್ಪತ್ರೆಗೆ ಕುಂದಾಪುರದ ರೆಡ್‌ಕ್ರಾಸ್ ಘಟಕದ ವತಿಯಿಂದ ನೀಡಲಾದ 5 ಆಕ್ಸಿಜನ್ ಕಾನ್ಸನ್‌ಟ್ರೇಟರ್ ಸ್ವೀಕರಿಸಿ ಮಾತನಾಡಿದರು.

ಜಿಲ್ಲೆಯ ನಿರ್ಮಿತಿ ಸಂಸ್ಥೆಯ ಲಾಭಾಂಶ ಹಣದಲ್ಲಿ ಉಡುಪಿಯಲ್ಲಿ 15 ಹಾಗೂ ಕುಂದಾಪುರದಲ್ಲಿ 10 ಐಸಿಯು ಹಾಸಿಗೆಗಳನ್ನು ಹೊಂದಿರುವ ಪರಿಪೂರ್ಣ ಮಕ್ಕಳ ಆಸ್ಪತ್ರೆ ನಿರ್ಮಾಣವಾಗಲಿದೆ ಎಂಬ ಮಾಹಿತಿ ನೀಡಿದರು.
ಆಕ್ಸಿಜನ್ ವ್ಯವಸ್ಥೆಗಾಗಿ ಜಿ.ಶಂಕರ ಫ್ಯಾಮಿಲಿ ಟ್ರಸ್ಟ್‌ನಿಂದ 10, ರೆಡ್‌ಕ್ರಾಸ್‌ನಿಂದ 5, ಸರ್ಕಾರದಿಂದಲೂ 20 ಉಪಕರಣ ದೊರಕುತ್ತಿದೆ. ಕುಂದಾಪುರದ ಕೋವಿಡ್ ಆಸ್ಪತ್ರೆಯ ಬಗ್ಗೆ ಎಲ್ಲೆಡೆಯಲ್ಲಿಯೂ ಪ್ರಶಂಸೆಯ ಮಾತುಗಳು ಕೇಳಿ ಬರುತ್ತಿದೆ. ವೈದ್ಯರು ಹಾಗೂ ಸಿಬ್ಬಂದಿ ತಮ್ಮ ಜೀವದ ಹಂಗು ತೊರೆದು ಜನರ ಪ್ರಾಣ ರಕ್ಷಣೆಗೆ ಟೊಂಕ ಕಟ್ಟಿ ನಿಂತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಂದಾಯ ಉಪ ವಿಭಾಗಾಧಿಕಾರಿ ಕೆ.ರಾಜು, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ನಾಗಭೂಷಣ ಉಡುಪ, ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ರಾಬರ್ಟ್ ರೆಬೆಲ್ಲೊ, ಕೋವಿಡ್ ಆಸ್ಪತ್ರೆಯ ನೋಡಲ್ ವೈದ್ಯಾಧಿಕಾರಿ ಡಾ.ನಾಗೇಶ್, ವೈದ್ಯರಾದ ಡಾ.ವಿಜಯಶಂಕರ್, ಡಾ.ಆಶಿತ್, ಹಿರಿಯ ಶುಶ್ರೂಷಕಿ ಅನ್ನಪೂರ್ಣಾ, ರೆಡ್‌ಕ್ರಾಸ್ ಸಭಾಪತಿ ಎಸ್.ಜಯಕರ ಶೆಟ್ಟಿ, ಉಪಾಧ್ಯಕ್ಷ ಡಾ.ಉಮೇಶ್ ಪುತ್ರನ್, ಕಾರ್ಯದರ್ಶಿ ವೈ.ಸೀತಾರಾಮ ಶೆಟ್ಟಿ, ಕೋಶಾಧಿಕಾರಿ ಶಿವರಾಮ ಶೆಟ್ಟಿ, ಸದಸ್ಯರಾದ ಗಣೇಶ್ ಆಚಾರ್ಯ, ಕೆ.ಸೀತಾರಾಮ ನಕ್ಕತ್ತಾಯ, ಸಂತೋಷಕುಮಾರ್ ಶೆಟ್ಟಿ, ನಾರಾಯಣ ದೇವಾಡಿಗ, ಡಾ.ಸೋನಿ ಡಿಕೋಸ್ಟ ಇದ್ದರು.