ಜಿಲ್ಲೆ

ಮೂರನೇ ಬಾರಿ ಕೇಂದ್ರ ಸಚಿವರ ಭೇಟಿ

ವೀರೇಶ ಸೌದ್ರಿ

ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಹವಾಮಾನ ಆಧಾರಿತ ಬೆಳೆ ವಿಮೆ ಪರಿಹಾರ ವಿತರಣೆ ಕುರಿತು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ ಸಿಂಗ್ ಚೌಹಾಣ ಅವರೊಂದಿಗೆ ಮಂಗಳವಾರ ಚರ್ಚಿಸಿದರು.

2023-24ರಲ್ಲಿ ತೀವ್ರ ಮಳೆಯಿಂದಾಗಿ ಜಿಲ್ಲೆಯ ಅಡಕೆ ಬೆಳೆಗಾರರು ಹಾನಿ ಅನುಭವಿಸಿದ್ದರು. ಹವಾಮಾನ ಆಧಾರಿತ ಬೆಳೆ ಕಂತು ತುಂಬಿಸಿಕೊಂಡಿದ್ದ ವಿಮಾ ಕಂಪನಿ ಜಿಲ್ಲೆಯ ಮಳೆ ಮಾಪನದ ದಾಖಲೆಗಳು ಸರಿ ಇಲ್ಲ ಎಂಬ ಕಾರಣ ನೀಡಿ ಜಿಲ್ಲೆಯ ಕೇವಲ 59 ಗ್ರಾಮ ಪಂಚಾಯಿತಿಗಳ ರೈತರಿಗೆ ಪರಿಹಾರ ಮಂಜೂರು ಮಾಡಿತ್ತು. ಉಳಿದ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ರೈತರಿಗೆ ಎಷ್ಟು ಪರಿಹಾರ ನೀಡಬೇಕಾಗಿದೆ ಎಂಬ ಮಾಹಿತಿ ತಿಳಿಸದೇ ಮೌನ ವಹಿಸಿದೆ. ಈ ಕುರಿತಂತೆ ಸಂಸದರು ಸಚಿವ ಶಿವರಾಜ ಸಿಂಗ್ ಚೌಹಾಣ ಅವರನ್ನು ಭೇಟಿ ಮಾಡಿದಾಗ, ತಕ್ಷಣವೇ ಜಿಲ್ಲೆಯ ರೈತರಿಗೆ ಪರಿಹಾರ ಒದಗಿಸುವಂತೆ ಕೃಷಿ ಸಚಿವರು ವಿಮಾ ಕಂಪನಿಗೆ ಸೂಚಿಸಿದ್ದರು.

ಆದರೆ, ಕೇಂದ್ರ ಸಚಿವರ ಮಾತಿಗೂ ವಿಮಾ ಕಂಪನಿ ಸೊಪ್ಪು ಹಾಕಲಿಲ್ಲ. ಹೀಗಾಗಿ ಕಳೆದ 15 ದಿನದ ಹಿಂದೆ ಕೃಷಿ ಸಚಿವರನ್ನು ಮತ್ತೊಮ್ಮೆ ಭೇಟಿ ಮಾಡಿದ್ದರು. ಈ ವೇಳೆ ಕೃಷಿ ಸಚಿವರು ಕಂಪನಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿ, ಒಂದು ವಾರದೊಳಗೆ ವಿಮೆಯ ಪರಿಹಾರವನ್ನು ರೈತರ ಖಾತೆಗೆ ಜಮಾ ಮಾಡದಿದ್ದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದರು.

ಆದರೆ, ವಿಮಾ ಕಂಪನಿ ಸಚಿವರ ಎರಡನೇ ಬಾರಿಯ ಸೂಚನೆಯನ್ನೂ ನಿರ್ಲಕ್ಷಿಸಿದೆ. ಈ ಹಿನ್ನೆಲೆಯಲ್ಲಿ ಸಂಸದರು ಕೃಷಿ ಸಚಿವರನ್ನು ಇನ್ನೊಮ್ಮೆ ಭೇಟಿ ಮಾಡಿರುವುದು ಮಹತ್ವ ಪಡೆದುಕೊಂಡಿದೆ. ಈ ವೇಳೆ ಮಾತನಾಡಿದ ಶಿವರಾಜ ಸಿಂಗ್ ಚೌಹಾಣ್, ಬೆಳೆ ವಿಮೆ ಹಣವು ರೈತರಿಗೆ ಅತ್ಯಂತ ಅಗತ್ಯವಾಗಿದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ತಕ್ಷಣವೇ ರೈತರಿಗೆ ಹಣ ಸಂದಾಯವಾಗುವಂತೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.