ಮಂಡ್ಯ: ಆಪರೇಷನ್ ಸಿಂಧೂರ್ ನಡೆಸಿದ ಭಾರತೀಯ ಸೈನಿಕರನ್ನು ಬೆಂಬಲಿಸಿ ಹಿಂದು ಸಂಘಟನೆಗಳು, ಮಾಜಿ ಸೈನಿಕರು, ವಿದ್ಯಾರ್ಥಿಗಳು ನಗರದಲ್ಲಿ ತಿರಂಗ ಯಾತ್ರೆ ನಡೆಸಿದರು.
ಸಿಲ್ವರ್ ಜ್ಯೂಬಿಲಿ ಪಾರ್ಕಿನಲ್ಲಿ ಜಮಾಯಿಸಿ, ಬೆಂಗಳೂರು-ಮೈಸೂರು ಹೆದ್ದಾರಿ ಮಾರ್ಗವಾಗಿ ಸರ್ ಎಂ.ವಿ. ಪ್ರತಿಮೆವರೆಗೆ ತಿರಂಗ ಯಾತ್ರೆ ನಡೆಯಿತು. ಬಾಳೇಹೊನ್ನೂರು ರಂಬಾಪುರಿ ಶಾಖಾ ಮಠದ ಗಂಗಾಧರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಪಹಲ್ಗಾಮ್‌ನಲ್ಲಿ ಹಿಂದುಗಳನ್ನು ಉಗ್ರರು ಹತ್ಯೆ ಮಾಡಿರುವುದನ್ನು ಖಂಡಿಸುತ್ತೇವೆ. ಇದಕ್ಕೆ ಪ್ರತಿಯಾಗಿ ನಮ್ಮ ಮೂರು ಸೇನಾ ಪಡೆಗಳು ಹೋರಾಟ ನಡೆಸಿ ಪಾಕಿಸ್ತಾನದ ಉಗ್ರರ ನೆಲೆಗಳನ್ನು ಧ್ವಂಸ ಮಾಡಿವೆ. ಇದು ದೇಶಕ್ಕೆ ನೀಡಿದ ಕೊಡುಗೆಯಾಗಿದೆ ಎಂದು ಹೇಳಿದರು.
ಹಿಂದು ಮಹಿಳೆಯರ ಸಿಂಧೂರವನ್ನು ಅಳಿಸಿ ಹಾಕಿದ್ದ ಕಾರಣಕ್ಕೆ ಕೇಂದ್ರ ಸರ್ಕಾರ ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿ ನೂರಕ್ಕು ಹೆಚ್ಚು ಉಗ್ರರನ್ನು ಹತ್ಯೆ ಮಾಡಿದೆ. ಪಾಕಿಸ್ತಾನದಲ್ಲಿ ಉಗ್ರ ನೆಲೆಗಳನ್ನು ಧ್ವಂಸ ಮಾಡಿದೆ. ಅಲ್ಲಿನ ಸೇನಾ ನೆಲೆಗಳನ್ನೂ ಸಹ ಹೊಡೆದು ಹಾಕಿದೆ. ಇದು ಪಾಕಿಸ್ತಾನಕ್ಕೆ ಎಚ್ಚರಿಕೆಯ ಸಂದೇಶವಾಗಿದೆ ಎಂದು ಹೇಳಿದರು.
ಉಗ್ರರನ್ನು ಸಾಕುತ್ತಿರುವ ಪಾಕಿಸ್ತಾನಕ್ಕೆ ಭಾರತ ತಕ್ಕ ಪ್ರತ್ಯುತ್ತರವನ್ನು ಕೊಟ್ಟಿದೆ. ಮುಂದಿನ ದಿನಗಳಲ್ಲಿ ಇಂತಹ ಕುಕೃತ್ಯಗಳನ್ನು ನಡೆಸಿದ್ದೇ ಆದಲ್ಲಿ ಪಾಕಿಸ್ತಾನ ಸಂಪೂರ್ಣವಾಗಿ ನಾಶವಾಗಲಿದೆ. ಇನ್ನು ಭಾರತದ ಸೇನಾ ಬತ್ತಳಿಕೆಯಲ್ಲಿರುವ ಆಯುಧಗಳ ಪರಿಚಯವನ್ನು ಜಗತ್ತಿಗೇ ಪರಿಚಯ ಮಾಡಿಕೊಡುವ ಮೂಲಕ ಎಲ್ಲರಿಗೂ ಎಚ್ಚರಿಕೆಯ ಸಂದೇಶವನ್ನು ನಮ್ಮ ಸೇನೆ ಮಾಡಿದೆ. ಭಾರತದೊಳಗೇ ಇರುವ ಕೆಲ ಹಿತಶತ್ರುಗಳು ಸೇನೆಯ ಕಾರ್ಯಾಚರಣೆಯನ್ನು ಶ್ಲಾಸುವುದನ್ನು ಬಿಟ್ಟು ಕಾಲೆಳೆಯುವ ಕೆಲಸ ಮಾಡುತ್ತಿದ್ದಾರೆ. ಇಂತಹವರಿಗೂ ಮುಂದಿನ ದಿನಗಳಲ್ಲಿ ಕಾಲವೇ ತಕ್ಕ ಪಾಠ ಕಲಿಸುತ್ತದೆ ಎಂದು ಎಚ್ಚರಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅಶೋಕ್ ಜಯರಾಂ, ಎಚ್.ಆರ್.ಅಶೋಕ್, ಕೆಂಪಬೋರಯ್ಯ, ಸಿ.ಟಿ.ಮಂಜುನಾಥ್, ಶಿವಕುಮಾರ್ ಆರಾಧ್ಯ, ನಿತ್ಯಾನಂದ, ನಾಗಾನಂದ, ಅರವಿಂದ ಇತರರಿದ್ದರು.