ಲಿಂಗದಹಳ್ಳಿ: ಲಿಂಗದಹಳ್ಳಿ ವ್ಯವಸಾಯೋತ್ಪನ್ನ ಸಹಕಾರ ಸಂಘದಲ್ಲಿ 2,610 ಷೇರುದಾರರಿದ್ದು,10.70 ಕೋಟಿ ರೂ. ಬೆಳೆ ಸಾಲ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ 15 ಕೋಟಿ ರೂ. ಬೆಳೆ ಸಾಲ ನೀಡಲು ಸಂಘದ ಆಡಳಿತ ಮಂಡಳಿಯಲ್ಲಿ ಅನುಮೋದನೆ ಪಡೆದುಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಅಧ್ಯಕ್ಷ ಜಿ.ವಿಜಯಕುಮಾರ್ ತಿಳಿಸಿದರು.
ಲಿಂಗದಹಳ್ಳಿ ವ್ಯವಸಾಯ ಸೇವಾ ಸಂಘದ ಸಂಭಾಂಗಣದಲ್ಲಿ ನಡೆದ ಸರ್ವಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಸಂಘದ ಸದಸ್ಯರ ಲಾಭಾಂಶದ ಹಣದಲ್ಲಿ ಕಟ್ಟಡ, ಸಭಾಂಗಣ, ಸೂಪರ್ ಮಾರ್ಕೆಟ್, ವಿವಿಧ ಗ್ರಾಮಗಳಲ್ಲಿ ನ್ಯಾಯಬೆಲೆ ಅಂಗಡಿಗಳ ಕಟ್ಟಡ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದ್ದು, ಮುಂದಿನ ಕೆಲ ದಿನಗಳಲ್ಲಿ ವ್ಯವಸಾಯೋತ್ಪನ್ನ ಸಾಧನ ಸಲಕರಣೆಗಳು, ರಾಸಾಯನಿಕ ಗೊಬ್ಬರ ಹಾಗೂ ರೈತರಿಗೆ ಅವಶ್ಯಕವಾದ ಸಾಮಾಗ್ರಿಗಳನ್ನು ನೀಡಲಾಗುವುದು ಎಂದು ಹೇಳಿದರು.
ಸಂಘದ ಪ್ರಧಾನ ವ್ಯವಸ್ಥಾಪಕ ಜಿ.ಎನ್.ಚಂದ್ರಶೇಖರ್ ಮಾತನಾಡಿ, ಸರ್ಕಾರ ಪ್ರತಿ ಗ್ರಾಪಂಗೊಂದು ಸಹಕಾರ ಸಂಘ ಸ್ಥಾಪಿಸಲು ಆದೇಶ ನೀಡಿದ್ದು, ಅದರಂತೆ ಉಡೇವಾ ಗ್ರಾಪಂ ವ್ಯಾಪ್ತಿಯ ಗ್ರಾಮಸ್ಥರು ತಮ್ಮ ಗ್ರಾಪಂ ವ್ಯಾಪ್ತಿಯ ಅನೇಕ ಷೇರುದಾರರು ಲಿಂಗದಹಳ್ಳಿ ಸಹಕಾರ ಸಂಘದಿಂದ ಬಿಡುಗಡೆಗೊಳಿಸುವಂತೆ ಮನವಿ ಮಾಡಿದ್ದು, ಅವರಲ್ಲಿ ಕೆಸಿಸಿ ಸಾಲ ಹೊರತುಪಡಿಸಿ 36 ಸದಸ್ಯರು ವಿವಿಧ ಸಾಲಗಳ ರೂಪದಲ್ಲಿ 47 ಲಕ್ಷ ರೂ. ಪಡೆದುಕೊಂಡಿದ್ದಾರೆ. ಆ ಸಾಲದ ಹಣ ಮರುಪಾವತಿಸಿದರೆ ಅವರನ್ನು ಸಂಘದಿಂದ ಬಿಡುಗಡೆಗೊಳಿಸಲಾಗುವುದು ಎಂದು ತಿಳಿಸಿದರು.
ಉಪಾಧ್ಯಕ್ಷೆ ಜಯಮ್ಮ ರಾಮಯ್ಯ, ಸದಸ್ಯರಾದ ಕೆ.ಸಿ.ನಿಂಗೇಗೌಡ, ಎನ್.ಜೆ.ಭದ್ರೇಗೌಡ, ಎಲ್.ಭರತ್, ಎಸ್.ಜೆ.ಕೃಷ್ಣಪ್ಪ, ಬಿ ಧನಂಜಯ, ಆರ್.ಮಂಜುನಾಥ್, ರಾಜಪ್ಪ, ಅಬ್ದುಲ್ ರೆಹಮಾನ್, ಕಮಲಮ್ಮ ರಾಮಪ್ಪ ಇದ್ದರು.