ಜಿಲ್ಲೆ

‘ಸ್ನೇಹ ಮಾಡುವಾಗ ನೂರು ಬಾರಿ ಯೋಚಿಸಿ…’

ಕುಶಾಲನಗರ:

ಸಹವಾಸದಿಂದ ಸನ್ಯಾಸಿ ಕೆಟ್ಟ ಎನ್ನುವ ನಾಣ್ಣುಡಿಯಂತೆ ಪ್ರತಿಯೊಬ್ಬರೂ ಸಹವಾಸ ಮಾಡುವಾಗ ನೂರು ಬಾರಿ ಯೋಚಿಸಿ ಸ್ನೇಹ ಮಾಡಬೇಕು ಎಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಹೇಳಿದರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಕೊಡಗು ಜಿಲ್ಲೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸೋಮವಾರಪೇಟೆ ಹಾಗೂ ಮಡಿಕೇರಿ ತಾಲೂಕು ಇವರ ಸಹಯೋಗದಲ್ಲಿ ಗಾಂಧಿ ಜಯಂತಿ ಸಂಭ್ರಮಾಚರಣೆಯ ಅಂಗವಾಗಿ ಇಲ್ಲಿನ ಇಲ್ಲಿನ ಎಪಿಸಿಎಂಸ್ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಗಾಂಧಿ ಸ್ಮರಣೆ ಮತ್ತು ನವಜೀವನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕುಡಿತ ಮತ್ತು ಡ್ರಗ್ಸ್ಗಳಿಗೆ ಅಂಟಿಕೊAಡರೆ ಹೊರಬರುವುದು ಕಷ್ಟಕರ. ದುಶ್ಚಟಗಳು ವ್ಯಕ್ತಿಯ ಬದುಕು, ಕುಟುಂಬ ಮಾತ್ರವಲ್ಲದೆ ಸಮಾಜದ ಮೇಲೂ ನೇರ ಪರಿಣಾಮ ಬೀರುತ್ತದೆ. ಮಾದಕ ವಸ್ತು ಸೇವನೆ ವ್ಯಕ್ತಿಯ ಮೆದುಳು, ದೈಹಿಕ, ಮಾನಸಿಕ ಆರೋಗ್ಯ ಹಾಗೂ ಸಾಮಾಜಿಕ ಬದುಕಿಗೂ ಮಾರಕವಾಗಿದೆ. ಈ ಬಗ್ಗೆ ಪ್ರತಿಯೊಬ್ಬರು ಚಿಂತನೆ ಮಾಡಿ ದುಶ್ಚಟಗಳಿಂದ ದೂರ ಉಳಿದು ಆರೋಗ್ಯಕರ ಜೀವನ ನಡೆಸಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಕೊಡಗು ಜಿಲ್ಲಾ ಸಮಿತಿ ಅಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್ ಮಾತನಾಡಿ, ಹಳ್ಳಿಗಳ ಉದ್ಧಾರವೇ ದೇಶದ ಉದ್ಧಾರ ಎಂದು ರಾಷ್ಟçಪಿತ ಮಹಾತ್ಮಗಾಂಧೀಜಿ ಹೇಳಿದ್ದರು. ಆದರೆ ಇಂದು ಗ್ರಾಮೀಣಾಭಿವೃದ್ಧಿಗೆ ಮದ್ಯಪಾನ ಮಾರಕವಾಗಿದೆ.

ಪಾನ ಮುಕ್ತ ಗ್ರಾಮ ನಿರ್ಮಾಣ ಮಾಡುವ ಮೂಲಕ ಆರೋಗ್ಯಕರ ಸಮಾಜ ಕಟ್ಟಲು ಜನಜಾಗೃತಿ ವೇದಿಕೆ ಮದ್ಯವರ್ಜನ ಶಿಬಿರಗಳನ್ನು ನಡೆಸುವ ಮೂಲಕ ಶ್ರಮಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಕುಡಿತದ ಚಟದಿಂದ ನೂರಾರು ಕುಟುಂಬಗಳು ಬೀದಿಪಾಲಾಗಿವೆ. ಮಕ್ಕಳು ಅನಾಥವಾಗಿವೆ. ಗಾಂಧೀಜಿ ಅವರು ಮದ್ಯಮುಕ್ತ ಭಾರತ ಕನಸು ಕಂಡಿದ್ದು, ಇದನ್ನು ನನಸು ಮಾಡುವಲ್ಲಿ ನಾವು ವಿಫಲರಾಗಿದ್ದೇವೆ. ಮದ್ಯವ್ಯಸನಿಗಳು ಕುಡಿತ ತ್ಯಜಿಸಿ ಹೊಸ ಜೀವನ ಕಟ್ಟಿಕೊಂಡು ಬದುಕನ್ನು ಸಾರ್ಥಕ ಪಡಿಸಿಕೊಳ್ಳಬೇಕು. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಬಾಪೂಜಿ ಕನಸನ್ನು ನನಸು ಮಾಡುತ್ತಿದ್ದಾರೆ. ಮದ್ಯವಸನಿಗಳನ್ನು ಪಾನ ಮುಕ್ತಗೊಳಿಸಿ ಅವರ ಸಾಮಾಜಿಕ, ಆರ್ಥಿಕ ಹಾಗೂ ಕೌಟುಂಬಿಕ ಬದಲಾವಣೆಗೆ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದು ಹೇಳಿದರು.

ಸೋಮವಾರಪೇಟೆ ವಿಭಾಗದ ಉಪ ಪೊಲೀಸ್ ಅಧೀಕ್ಷಕ ಆರ್.ವಿ. ಗಂಗಾಧರಪ್ಪ ಮಾತನಾಡಿ, ಮಾದಕ ದ್ರವ್ಯಗಳನ್ನು ವಿತರಿಸುವ ಜಾಲವನ್ನೂ ಮಟ್ಟಹಾಕಲು ಕಾನೂನಿನೊಂದಿಗೆ ಸಹಕರಿಸುವುದು, ಮಾದಕ ವಸ್ತುಗಳನ್ನು ಬಳಸುತ್ತಿರುವವರಿಗೆ ಅವುಗಳ ಮಾರಕ ಪರಿಣಾಮದ ಕುರಿತು ತಿಳುವಳಿಕೆ ನೀಡಿ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರು ಮುಂದಾಗಬೇಕು ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡಗು ಜಿಲ್ಲಾ ನಿರ್ದೇಶಕಿ ಲೀಲಾವತಿ, ಗ್ಯಾರಂಟಿ ಅನುಷ್ಠಾನ ಸಮಿತಿಯ ಕುಶಾಲನಗರ ತಾಲೂಕು ಅಧ್ಯಕ್ಷ ವಿ.ಪಿ. ಶಶಿಧರ್, ಅಖಿಲ ಕರ್ನಾಟಕ ಜನಜಾಗೃತಿ ಸಮಿತಿ ಮಡಿಕೇರಿ ತಾಲೂಕು ಅಧ್ಯಕ್ಷೆ ದೀರ್ಘಕೇಶಿ ಶಿವಣ್ಣ, ಸೋಮವಾರಪೇಟೆ ತಾಲೂಕು ಸದಸ್ಯರಾದ ಚಂದ್ರಪ್ರಕಾಶ್, ಮಸಗೋಡು ಸುರೇಶ್, ಜನಜಾಗೃತಿ ಸದಸ್ಯ ಎಂ.ಎನ್.ಚAದ್ರಮೋಹನ್, ಪುಂಡಾರೀಕಾಕ್ಷ, ಕೆ.ಎಸ್. ರಾಜಶೇಖರ್, ಎಸ್.ಕೆ.ಸತೀಶ್, ಎಚ್.ಎಂ.ಚAದ್ರು, ಮೇಲ್ವಿಚಾರಕ ರೋಹಿತ್ ಹಾಗೂ ಕಾರ್ಯಕರ್ತೆಯರು, ಸ್ವಯಂ ಸೇವಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.