ಮಡಿಕೇರಿ:
ಸೋಮವಾರ ಮುಂಜಾನೆ ಡಿಪೋದಿಂದ ಬಸ್ ನಿಲ್ದಾಣಕ್ಕೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದು ಇಲ್ಲಿನ ಟೋಲ್‌ಗೇಟ್‌ನಲ್ಲಿ ಇರುವ ಜ. ತಿಮ್ಮಯ್ಯ ವೃತ್ತಕ್ಕೆ ಹಾನಿ ಆಗಿದೆ. ಜಿಲ್ಲೆಯ ಜನತೆಯ ಜತೆ ಭಾವನಾತ್ಮಕ ಸಂಬಂಧ ಹೊಂದಿರುವ ಸುಮಾರು ೫೦ ವರ್ಷ ಹಳೆಯ ತಿಮ್ಮಯ್ಯ ಕಂಚಿನ ಪ್ರತಿಮೆ ಈ ಸಂದರ್ಭ ನೆಲಕ್ಕೆ ಉರುಳಿ ಬಿದ್ದಿದೆ. ಮಂಜು ಮುಸುಕಿದ ರಸ್ತೆಯಲ್ಲಿ ಬಂದು ನೇರವಾಗಿ ಬಸ್ ವೃತ್ತಕ್ಕೆ ಡಿಕ್ಕಿ ಹೊಡೆದ ಈ ಘಟನೆ ನಡೆದಿದೆ. ಇದೇ ಮೊದಲ ಬಾರಿಗೆ ವೀರ ಸೇನಾನಿ ಜ. ತಿಮ್ಮಯ್ಯ ಪ್ರತಿಮೆಗೆ ಭಾರಿ ಹಾನಿ ಆಗಿದೆ.
ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮುಂದಿನ ಕ್ರಮಗಳ ಬಗ್ಗೆ ಅಧಿಕಾರಿಗಳ ಜತೆ ಚರ್ಚೆ ನಡೆಸಿದರು. ಘಟನೆ ಬಗ್ಗೆ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ಸುಗಮ ಸಂಚಾರಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದರು. ಜ. ತಿಮ್ಮಯ್ಯ ವೃತ್ತದಲ್ಲಿ ಎಲ್ಲಾ ರಸ್ತೆಗಳು ಬಂದು ಸೇರುವ ಸ್ಥಳ ಕಿರಿದಾಗಿದ್ದು, ವೈಜ್ಞಾನಿಕವಾಗಿ ವೃತ್ತ ಅಭಿವೃದ್ಧಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಆದಷ್ಟು ಶೀಘ್ರ ಜ.ತಿಮ್ಮಯ್ಯ ಅವರ ಪ್ರತಿಮೆ ಅದೇ ಸ್ಥಳದಲ್ಲಿ ಮರುಸ್ಥಾಪನೆ ಮಾಡುವುದಾಗಿ ತಿಳಿಸಿದರು. ಜ.ತಿಮ್ಮಯ್ಯ ಅವರ ಪ್ರತಿಮೆ ಸ್ಥಳಾಂತರಿಸಲಾದ ಜ.ತಿಮ್ಮಯ್ಯ ಮ್ಯೂಸಿಯಂಗೂ ಮಂತರ್ ಗೌಡ ಭೇಟಿ ನೀಡಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ವೀರ ಸೇನಾನಿ ಭಾರತದ ಶೌರ್ಯದ ಸಂಕೇತವಾಗಿದ್ದ ಜ. ತಿಮ್ಮಯ್ಯ ಪ್ರತಿಮೆಗೆ ಹಾನಿಯಾಗಿರುವುದಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ. ಮೇಲ್ನೋಟಕ್ಕೆ ಇದು ಅಜಾಗರೂಕತೆಯ ವಾಹನ ಚಾಲನೆಯಿಂದ ನಡೆದಿದೆ ಎಂದು ಕಂಡು ಬರುತ್ತಿದ್ದು, ನೈಜ ವರದಿ ನೀಡಲು ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ. ಸಂಬಂಧಪಟ್ಟವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯ ಜನತೆಯಲ್ಲಿ ಭಾವನಾತ್ಮಕ ಸಂಬಂಧ ಹೊಂದಿರುವ ಜ. ತಿಮ್ಮಯ್ಯ ಪ್ರತಿಂಎಯನ್ನು ಗೌರವ ಪೂರ್ವಕವಾಗಿ ಅದೇ ಸ್ಥಳದಲ್ಲಿ ಮರುಸ್ಥಾಪಿಸಲಾಗುವುದು ಎಂದು ತಿಳಿಸಿದರು.
ಘಟನೆ ಸಂಬಂಧ ಚೆಯ್ಯಂಡ ಸತ್ಯ ಗಣಪತಿ ಎಂಬವರು ನಗರ ಸಂಚಾರ ಠಾಣೆಯಲ್ಲಿ ದೂರು ನೀಡಿದ್ದಾರೆ. ಕೆಎಸ್‌ಆರ್‌ಟಿಸಿ ಬಸ್ ಚಾಲಕನ ಅಜಾಗರೂಕತೆಯ ಚಾಲನೆಯಿಂದ ದೇಶದ ಅತ್ಯುನ್ನತ ಸೇನಾನಿಗೆ ಅವಮಾನ ಆಗಿದ್ದಲ್ಲದೆ, ಸೇನಾ ಜಿಲ್ಲೆಯಾದ ಕೊಡಗಿನ ಜನರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿರುತ್ತಾರೆ. ಅವರ ವೈದ್ಯಕೀಯ ಪರೀಕ್ಷೆ ನಡೆಸಿ ಕಾನೂನು ರೀತಿಯಲ್ಲಿ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.
ಈ ಮಧ್ಯೆ ಜ. ತಿಮ್ಮಯ್ಯ ವೃತ್ತದ ಪುನರ್ ನಿರ್ಮಾಣ ಮತ್ತು ಪ್ರತಿಮೆ ಮರು ಸ್ಥಾಪನೆ ಬಗ್ಗೆ ಚರ್ಚಿಸಲು ಮಂಗಳವಾರ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಸಂಘಸಂಸ್ಥೆಗಳ ಪ್ರಮುಖರೊಂದಿಗೆ ಸಭೆ ಕರೆಯಲಾಗಿದೆ. ಜ. ತಿಮ್ಮಯ್ಯ ಮ್ಯೂಸಿಯಂನಲ್ಲಿ ಸಭೆ ನಡೆಯಲಿದೆ.
ಮಾಝಿ ಸಚಿವ ಎಂ.ಸಿ. ನಾಣಯ್ಯ, ಜಿಲ್ಲಾಧಿಕಾರಿ ವೆಂಕಟ್ ರಾಜಾ ಉಪವಿಭಾಗಾಧಿಕಾರಿ ಯತೀಶ್ ಉಲ್ಲಾಳ್, ನಗರಸಭಾ ಆಯುಕ್ತ ವಿಜಯ್, ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕರು, ಮಡಿಕೇರಿ ತಹಶೀಲ್ದಾರ್ ಪ್ರವೀಣ್, ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ, ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷರು, ಪದಾಧಿಕಾರಿಗಳು ಸ್ಥಳಕ್ಕೆ ಭೇಟಿ ಕೊಟ್ಟಿದ್ದರು.