ಜಿಲ್ಲೆ

ರಸ್ತೆಯಲ್ಲಿ ನಿಂತಿದ್ದ ಲಾರಿ ಕದ್ದು ಗುಜರಿ ಅಂಗಡಿಗೆ ಮಾರಿದ ಕಳ್ಳರು, ಒಬ್ಬನ ಬಂಧನ

ಚಿಕ್ಕಬಳ್ಳಾಪುರ: ಹೆದ್ದಾರಿಯಲ್ಲಿ ನಿಲ್ಲಿಸಿದ್ದ ಲಾರಿಯ ಕಳ್ಳತನ ಮಾಡಿದ್ದ ಇಬ್ಬರ ಪೈಕಿ ಒಬ್ಬನನ್ನು  ಪೊಲೀಸರು ಬಂಧಿಸಿದ್ದು ಲಾರಿ ಮಾರಾಟದ ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬೆಂಗಳೂರಿನ ಮೋಯಿನ್ ಖಾನ್ ಬಂಧಿತರು.‌ ಮತ್ತೊರ್ವ ಆರೋಪಿ ಬೆಂಗಳೂರಿನ ತಿಲಕ್ ನಗರದ ಅಜೀಜ್ ಬಂಧನಕ್ಕೆ ಬಲೆ ಬೀಸಲಾಗಿದೆ. ಬಂಧಿತನಿಂದ ಲಾರಿ ಮಾರಾಟದ 3 ಲಕ್ಷ ರೂಗಳನ್ನು ವಶಪಡಿಸಿಕೊಳ್ಳಲಾಗಿದೆ.

*ಪ್ರಕರಣದ ಹಿನ್ನೆಲೆ*
ಬಾಗೇಪಲ್ಲಿ ತಾಲೂಕಿನ ನಾರಾಯಣ ಸ್ವಾಮಿ ಎಂಬುವರಿಗೆ ಸೇರಿದ್ದ ಅಶೋಕ್ ಲೇ ಲ್ಯಾಂಡ್ ನಾಪತ್ತೆಯಾಗಿತ್ತು. ಇದರ ಬಗ್ಗೆ ಬಾಗೇಪಲ್ಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಪ್ರಕರಣವನ್ನು ಭೇದಿಸಲು ಡಿವೈಎಸ್ಪಿ ಶಿವಕುಮಾರ್ ಮಾರ್ಗದರ್ಶನದಲ್ಲಿ ಇನ್ಸ್ ಪೆಕ್ಟರ್ ಪ್ರಶಾಂತ್ ಆರ್ ವರ್ಣಿ ನೇತೃತ್ವದಲ್ಲಿ ಸಬ್ ಇನ್ಸ್ ಪೆಕ್ಟರ್ ಪಿ.ಮುನಿರತ್ನ, ಸಿಬ್ಬಂದಿ ವೆಂಕಟರಮಣ, ಸುರೇಶ್, ನಾಗೇಶ್, ಕೃಷ್ಣಪ್ಪ, ಧನಂಜಯಕುಮಾರ್, ಸಾಗರ್, ಶಂಕರಪ್ಪ, ರವಿಕುಮಾರ್, ಮುರಳಿಕೃಷ್ಣರನ್ನೊಳಗೊಂಡ ತಂಡವನ್ನು ರಚಿಸಿದ್ದರು.

*ಗುಜರಿ ಅಂಗಡಿಗೆ ಮಾರಾಟ*
ಕಳೆದ ಮಾರ್ಚ್ 8 ರಂದು ಲಾರಿಯನ್ನು ಕಳವು ಮಾಡಿದ್ದ ಕಳ್ಳರು ಬನ್ನೇರುಘಟ್ಟ ಸಮೀಪದ ಗುಜರಿ ಅಂಗಡಿಗೆ ಮಾರಾಟ ಮಾಡಿದ್ದರು. ಇದರ ಮಾಹಿತಿಯನ್ನಾಧಾರಿಸಿ ಆರೋಪಿಯನ್ನು ಬಂಧಿಸಲಾಗಿದೆ.‌ ಹೆಚ್ಚಿನ ಮಾಹಿತಿಗಾಗಿ ತನಿಖೆ ಕೈಗೊಳ್ಳಲಾಗಿದೆ.