ಜಿಲ್ಲೆ

ಶಟರ್ಸ್ ಮುರಿದು ಮದ್ಯ ಎಗರಿಸಿದ ಕಳ್ಳರು

Dharwad

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

‘ಭಾರತ ದಿಗ್ಬಂಧನ-21’ ಸಂಪೂರ್ಣ ಮಾರ್ಕೆಟ್ ಬಂದ್ ಹಿನ್ನೆಲೆಯಲ್ಲಿ ಖದೀಮರು ನಗರದಲ್ಲಿ ಸರ್ಕಾರಿ ಮದ್ಯದಂಗಡಿಗೇ ಕನ್ನ ಹಾಕಿದ್ದಾರೆ. ಇಲ್ಲಿಯ ಗಬ್ಬೂರ ಕ್ರಾಸ್ ರಾಷ್ಟ್ರೀಯ ಹೆದ್ದಾರಿ ಹತ್ತಿರದ ಎಂಎಸ್​ಐಎಲ್ ಮದ್ಯದಂಗಡಿಯಲ್ಲಿ ಕಳ್ಳರು ಮದ್ಯ ಹಾಗೂ ಹಣ ದೋಚಿದ್ದಾರೆ.

ಅಂಗಡಿಯಿಂದ 17 ಬಾಕ್ಸ್ ಮದ್ಯ ಹಾಗೂ 40 ಸಾವಿರ ರೂ. ನಗದು ಕದ್ದೊಯ್ದಿದ್ದಾರೆ ಎಂದು ಹೇಳಲಾಗಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬೆಂಡಿಗೇರಿ ಠಾಣೆ ಇನ್ಸ್ ಪೆಕ್ಟರ್ ಅರುಣಕುಮಾರ ಸಾಳುಂಕೆ ಹಾಗೂ ಸಿಬ್ಬಂದಿ ಪರಿಶೀಲನೆ ಮಾಡಿ ದೂರು ದಾಖಲಿಸಿಕೊಂಡಿದ್ದಾರೆ.

ಬಾರ್ ಬಂದ್: ಕರೊನಾ ಸೋಂಕು ಹರಡದಂತೆ ತಡೆಯಲು ದೇಶಾದ್ಯಂತ 21 ದಿನ ಲಾಕ್​ಡೌನ್ ಇರುವುದರಿಂದ ಎಲ್ಲೆಡೆ ಬಾರ್, ಮದ್ಯದಂಗಡಿಗಳು ಬಂದ್ ಆಗಿವೆ. ಹಾಗಾಗಿ ಎಣ್ಣೆ ಅಂಗಡಿಯನ್ನೇ ಕಳ್ಳರು ಟಾರ್ಗೆಟ್ ಮಾಡಿದ್ದಾರೆ. ರಾತ್ರಿ ವೇಳೆ ಅಂಗಡಿಯ ಶಟರ್ಸ್ ಮುರಿದು ಒಳ ನುಗ್ಗಿದ ಕಳ್ಳರು ಸುಮಾರು 56 ಸಾವಿರ ರೂ. ಮೌಲ್ಯದ ಮದ್ಯ ಹೊತ್ತೊಯ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನಿಯಮಬಾಹಿರ ಅಂಗಡಿ?: ಗಬ್ಬೂರ ಕ್ರಾಸ್ ರಾಷ್ಟ್ರೀಯ ಹೆದ್ದಾರಿ ಬಳಿಯಲ್ಲಿಯೇ ಇರುವ ಎಂಎಸ್​ಐಎಲ್ ಮದ್ಯದ ಮಳಿಗೆ ನಿಯಮ ಬಾಹಿರ ಎನ್ನಲಾಗುತ್ತಿದೆ. ಹೆದ್ದಾರಿ, ದೇವಸ್ಥಾನ, ಶಾಲೆ, ಸರ್ಕಾರಿ ಕಚೇರಿ ಹತ್ತಿರದಲ್ಲಿ ಮದ್ಯದ ಅಂಗಡಿ ಇರಬಾರದೆಂಬ ನಿಯಮ ಇದೆ. ಆದರೆ, ಈ ಮಳಿಗೆ ರಾಷ್ಟ್ರೀಯ ಹೆದ್ದಾರಿ, ದೇವಸ್ಥಾನ, ಶಾಲೆ, ಆರ್​ಟಿಒ ಕಚೇರಿ ಹತ್ತಿರದಲ್ಲೇ ಇದೆ ಎಂದು ಹೇಳಲಾಗುತ್ತಿದೆ. ಆದರೂ, ಸರ್ಕಾರಿ ಮದ್ಯದಂಗಡಿ ತೆರೆದಿದ್ದು ಹೇಗೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.