ಜಿಲ್ಲೆ

ಮಾಲೀಕರನ್ನು ಹೆದರಿಸಿ ಚಿನ್ನಾಭರಣ ದೋಚಿದ ಕಳ್ಳರು

ಮೈಸೂರು: ಮನೆ ಮಾಲೀಕರನ್ನು ಹೆದರಿಸಿ ಸುಮಾರು 113 ಗ್ರಾಂ ಚಿನ್ನಾಭರಣವನ್ನು ಕಳ್ಳರು ದೋಚಿದ್ದಾರೆ.
ಜೆ.ಪಿ.ನಗರದ ಬಳಿ ಇರುವ ಐಶ್ವರ್ಯ ನಗರದ ಶಾಂತಕುಮಾರ್ ಅವರ ಮನೆಯಲ್ಲಿ ಕಳ್ಳತನವಾಗಿದೆ.
ಬಡಾವಣೆ ನಿವಾಸಿ ಶಾಂತಕುಮಾರ್ ಅವರು ಶನಿವಾರ ರಾತ್ರಿ ಹೊರಗೆ ಹೋಗಿದ್ದಾಗ ಮನೆಯ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು, ಕೋಣೆಯ ಬೀರುವಿನಲ್ಲಿ ಚಿನ್ನಾಭರಣ ದೋಚಿ ಹೊರಬಂದಿದ್ದಾರೆ. ಈ ವೇಳೆ ಮನೆ ಮಾಲೀಕರು ವಾಪಸ್ ಮನೆಗೆ ಬಂದಾಗ ಅವರನ್ನು ಬೆದರಿಸಿದ ಕಳ್ಳರು ಪರಾರಿಯಾಗಿದ್ದಾರೆ. ಬಾಗಿಲ ಬೀಗ ಒಡೆಯುವ ಮುನ್ನ ಕಳ್ಳರು ನಿಂಬೆ ಹಣ್ಣಿನಿಂದ ಪೂಜೆ ಮಾಡಿ ಬಳಿಕ ಒಳಹೋಗಿರುವುದು ವಿಶೇಷವಾಗಿದೆ. ಬಾಗಿಲು ಹೊಡೆಯಲು ತಂದಿದ್ದ ಆಯುಧಗಳನ್ನು ಅಲ್ಲಿಯೇ ಬಿಟ್ಟಿದ್ದಾರೆ. ಮೈಸೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.