ಉಡುಪಿಯ ಬ್ರಹ್ಮಗಿರಿಯಲ್ಲಿರುವ ಅಪಾರ್ಟ್​ಮೆಂಟ್​ಗೆ ನುಗ್ಗಿದ ನಾಲ್ವರು ಮುಸುಕುಧಾರಿಗಳು ಕಳ್ಳತನಕ್ಕೆ ಯತ್ನಿಸುತ್ತಿರುವುದು. 
ಜಿಲ್ಲೆ

ಬ್ರಹ್ಮಗಿರಿಯಲ್ಲಿರುವ ಅಪಾರ್ಟ್​ಮೆಂಟ್​ಗೆ ನುಗ್ಗಿದ ಕಳ್ಳರು

ಪ್ರಶಾಂತ ಜಿ. ಭಾಗ್ವತ

ನಾಲ್ವರು ಮುಸುಕುಧಾರಿಗಳಿಂದ ಕಳ್ಳತನಕ್ಕೆ ಯತ್ನ | ಸಿಸಿಕ್ಯಾಮರಾದಲ್ಲಿ ದೃಶ್ಯ ಸೆರೆ

ಉಡುಪಿ: ಒಂಟಿ ಮನೆಗಿಂತ ಅಪಾರ್ಟ್​ಮೆಂಟ್​ನಲ್ಲಿ ವಾಸ್ತವ್ಯ ಮಾಡುವುದು ಹೆಚ್ಚು ಸುರಕ್ಷತೆ ಹಾಗೂ ಭದ್ರತೆ ಎಂದುಕೊಂಡಿದ್ದ ನಿವಾಸಿಗಳಿಗೂ ಸಹ ಇದೀಗ ಕಳ್ಳರ ಭೀತಿ ಎದುರಾಗಿದೆ.

ಉಡುಪಿ ನಗರದ ಬ್ರಹ್ಮಗಿರಿಯಲ್ಲಿರುವ ಅಪಾರ್ಟ್​ಮೆಂಟ್​ಗೆ ನುಗ್ಗಿದ ಕಳ್ಳರ ತಂಡ, ಕಳ್ಳತನ ನಡೆಸಲು ವಿಫಲ ಯತ್ನಿಸಿದ್ದು, ಆ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಮುಸುಕುಧಾರಿ ಕಳ್ಳರು

ನಗರದಲ್ಲಿರುವ ಪ್ರಮುಖ ಅಪಾರ್ಟ್​ಮೆಂಟ್​ಗೆ ಆ.1ರ ನಸುಕಿನಲ್ಲಿ ನುಗ್ಗಿದ ನಾಲ್ವರು ಕಳ್ಳರು, ಕಬ್ಬಿಣದ ಸಲಾಕೆ ಹಿಡಿದು ಪ್ಲ್ಯಾಟ್​ನ ಬಾಗಿಲು ಒಡೆಯಲು ಯತ್ನಿಸಿದ್ದಾರೆ. ತಮ್ಮ ಗುರುತು ಸಿಗಬಾರದೆಂದು ಎಲ್ಲ ಕಳ್ಳರೂ ಮುಖಕ್ಕೆ ಮುಸುಕು ಧರಿಸಿದ್ದರು. ಇದೇ ತಂಡ ಬ್ರಹ್ಮಗಿರಿ ಭಾಗದ ಮೂರು ಅಪಾರ್ಟ್​ಮೆಂಟ್​ಗಳಲ್ಲಿಯೂ ಸಹ ಕಳ್ಳತನಕ್ಕೆ ಯತ್ನಿಸಿದ್ದರು ಎಂಬ ಮಾಹಿತಿ ಲಭಿಸಿದೆ.

ಕ್ರಮಕ್ಕೆ ಒತ್ತಾಯ

ಉಡುಪಿ ಜಿಲ್ಲೆ ಸೇರಿದಂತೆ ಕರಾವಳಿ ಭಾಗಕ್ಕೆ ಅನ್ಯ ರಾಜ್ಯದ ಕಾರ್ಮಿಕರು ಬೃಹತ್​ ಕಟ್ಟಡ ನಿರ್ಮಾಣ ಹಾಗೂ ಇನ್ನಿತರ ಕೂಲಿ ಕೆಲಸಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಅವರ ಚಲನ- ವಲನದ ಬಗ್ಗೆ ಸಂಬಂದಪಟ್ಟವರು ನಿಗಾ ಇಡುವಂತೆ ಹಾಗೂ ರಾತ್ರಿ ವೇಳೆಯಲ್ಲಿ ಪೊಲೀಸ್​ ಗಸ್ತು ಹೆಚ್ಚಿಸಬೇಕು. ಇಲ್ಲದಿದ್ದಲ್ಲಿ ಜನರ ಜೀವಕ್ಕೂ ಅಪಾಯವಾಗುವ ಸಾಧ್ಯತೆ ಇದ್ದು ಪೊಲೀಸ್​ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಉಡುಪಿಯ ನಾಗರಿಕರು ಒತ್ತಾಯಿಸಿದ್ದಾರೆ.

ಅಪಾರ್ಟ್​ಮೆಂಟ್​ನಲ್ಲಿ ಕಳ್ಳತನಕ್ಕೆ ಸಂಬಂಧಿಸಿದಂತೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಲಾಗಿದ್ದು, ಕಳ್ಳರು ಸ್ಥಳೀಯರೋ ಅಥವಾ ಹೊರಗಿನವರೋ ಎಂಬ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಈ ಕುರಿತು ತನಿಖೆ ನಡೆಸಲು ತಂಡ ರಚಿಸಲಾಗಿದೆ. | ಡಾ.ಅರುಣಕುಮಾರ್​ ಕೆ. ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ, ಉಡುಪಿ