ಜಿಲ್ಲೆ

ಪತ್ನಿ ಮೆಚ್ಚಿಸಲು ಪೊಲೀಸ್​ ಸಮವಸ್ತ್ರ ಧರಿಸಿದ ಕಳ್ಳ: ಫೋಟೋ ವೈರಲ್ ಆದ ಬೆನ್ನಲ್ಲೇ​ ಕಾನ್ಸ್​ಟೆಬಲ್​ ಸಸ್ಪೆಂಡ್​! Constable suspend

Constable suspend : ಪೊಲೀಸ್​ ಕಸ್ಟಡಿಯಲ್ಲಿದ್ದ ಖದೀಮನೊಬ್ಬ ತನ್ನ ಪತ್ನಿಯನ್ನು ಮೆಚ್ಚಿಸುವ ಸಲುವಾಗಿ ಪೊಲೀಸ್​ ಸಮವಸ್ತ್ರ ಹಾಗೂ ಟೋಪಿ ಧರಿಸಿ ಕ್ಯಾಮೆರಾಗೆ ಪೋಸ್​ ನೀಡಿದ್ದ ಫೋಟೋ ವೈರಲ್​ ಆದ ಬೆನ್ನಲ್ಲೇ ಕರ್ತವ್ಯ ನಿರ್ಲಕ್ಷ್ಯ ಆರೋಪದ ಮೇಲೆ ಪೊಲೀಸ್​ ಕಾನ್ಸ್​ಟೆಬಲ್ ಒಬ್ಬರನ್ನು ಅಮಾನತು ಮಾಡಲಾಗಿದೆ.​

ಸಸ್ಪೆಂಡ್​​ ಆದ ಕಾನ್ಸ್​ಟೆಬಲ್​ರನ್ನು ಸೋನಾರೆ ಎಚ್​​. ಆರ್​. ಎಂದು ಗುರುತಿಸಲಾಗಿದೆ. ಇವರು ಬೆಂಗಳೂರಿನ ಗೋವಿಂದಪುರ ಪೊಲೀಸ್​ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಬಾಂಬೆ ಸಲೀಮ್ ಎಂದೂ ಕರೆಯಲ್ಪಡುವ ಸಲೀಮ್ ಶೇಖ್‌ ಸುಮಾರು 50ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳಲ್ಲಿ ಆರೋಪಿಯಾಗಿದ್ದ. ಆತ ಪೊಲೀಸ್​ ಕಸ್ಟಡಿಯಲ್ಲಿದ್ದ ಸಂದರ್ಭದಲ್ಲಿ ಪೊಲೀಸ್ ಸಮವಸ್ತ್ರ ಹಾಗೂ ಟೋಪಿ ಧರಿಸಲು ಅವಕಾಶ ನೀಡಿದ್ದಕ್ಕಾಗಿ ಸೋನಾರೆ ಅವರನ್ನು ಸಸ್ಪೆಂಡ್​ ಮಾಡಲಾಗಿದೆ.

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?

ಜೂನ್ 23ರಂದು ನಗರದಲ್ಲಿ ಕಳ್ಳತನ ನಡೆದಿತ್ತು. ಆ ಪ್ರಕರಣದ ಕುರಿತು ಇಂದಿರಾನಗರ ಪೊಲೀಸರು ತನಿಖೆ ನಡೆಸಿದ ಸಂದರ್ಭದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಕಳ್ಳತನ ನಡೆದ ಸ್ಥಳದಲ್ಲಿ ಅಳವಡಿಸಿದ್ದ ಸಿಸಿಟಿವಿ ದೃಶ್ಯಾವಳಿಗಳು ಮತ್ತು ಆರೋಪಿಯ ಮೊಬೈಲ್ ಫೋನ್ ಡೇಟಾವನ್ನು ವಿಶ್ಲೇಷಿಸಿದಾಗ, ಖದೀಮ ಸಲೀಂ ಈ ಪ್ರಕರಣದಲ್ಲಿ ಭಾಗಿಯಾಗಿರುವ ಗ್ಯಾಂಗ್‌ನ ಭಾಗವಾಗಿರುವುದನ್ನು ಪೊಲೀಸರು ಪತ್ತೆಹಚ್ಚಿದರು.

ತನಿಖೆಯ ಸಮಯದಲ್ಲಿ, ಇಂದಿರಾನಗರ ಪೊಲೀಸರು ಸಲೀಂನ ಮೊಬೈಲ್ ಫೋನ್ ಅನ್ನು ಪರಿಶೀಲಿಸಿದಾಗ ವಾಟ್ಸ್​ಆ್ಯಪ್ ವಿಡಿಯೋ ಕರೆಯ ಸ್ಕ್ರೀನ್‌ಶಾಟ್ ಗಮನಿಸಿದರು. ಆ ಸ್ಕ್ರೀನ್​ಶಾಟ್​ನಲ್ಲಿ ಖದೀಮ ಸಲೀಂ, ಪೊಲೀಸ್ ಸಮವಸ್ತ್ರ ಧರಿಸಿದ್ದ. ಈ ಬಗ್ಗೆ ಪ್ರಶ್ನೆ ಮಾಡಿದಾಗ ವಿಡಿಯೋ ಕರೆಯಲ್ಲಿರುವ ಮಹಿಳೆ ತನ್ನ ಪತ್ನಿ ಎಂದು ಪೊಲೀಸರಿಗೆ ತಿಳಿಸಿದ್ದ.

ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಿದಾಗ, ಸಲೀಂನನ್ನು ಕಳೆದ ವರ್ಷ ಗೋವಿಂದಪುರ ಪೊಲೀಸರು ಇದೇ ರೀತಿಯ ಕಳ್ಳತನ ಪ್ರಕರಣದಲ್ಲಿ ಬಂಧಿಸಿದ್ದರು ಎಂದು ತಿಳಿದುಬಂದಿದೆ. ಆ ಸಮಯದಲ್ಲಿ, ಆತ ಕದ್ದ ಬೆಲೆಬಾಳುವ ವಸ್ತುಗಳನ್ನು ಮರುಪಡೆಯಲು ಪೊಲೀಸರು ಆತನನ್ನು ಬೆಂಗಳೂರಿನ ಹೊರಗೆ ಕರೆದೊಯ್ದು ಹೋಟೆಲ್‌ನಲ್ಲಿ ತಂಗಿದ್ದರು. ಈ ಪ್ರವಾಸದ ಸಮಯದಲ್ಲಿ ಸಲೀಂ ಸೋನಾರೆಯವರ ಸಮವಸ್ತ್ರವನ್ನು ಧರಿಸಿ ತನ್ನ ಹೆಂಡತಿಗೆ ವಿಡಿಯೋ ಕರೆ ಮಾಡಿದ್ದ ಎಂಬುದು ಬೆಳಕಿಗೆ ಬಂದಿದೆ.

ಈ ವಿಚಾರ ಬೆಳಕಿಗೆ ಬಂದ ನಂತರ, ಕಾನ್‌ಸ್ಟೆಬಲ್ ಸೋನಾರೆ ಅವರನ್ನು ಸಸ್ಪೆಂಡ್​ ಮಾಡಲಾಗಿದೆ. (ಏಜೆನ್ಸೀಸ್​)