ಜಿಲ್ಲೆ

ದೇವಸ್ಥಾನದ ಬಳಿ ಮಹಿಳೆ ನಿಲ್ಲಿಸಿದ್ದ ಸ್ಕೂಟರ್ ಕಳವುಗೈದು ಸಿಕ್ಕಿಬಿದ್ದ ಕಳ್ಳ ಸೈಯದ್ ಸಾದಿಕ್ ಸಲೀಂ

vijayavani

ಬೆಂಗಳೂರು: ಪ್ರಯಾಣಿಕನ ಸೋಗಿನಲ್ಲಿ ರೈಲು ಹತ್ತುವಾಗ ಸರಗಳ್ಳತನ ಮಾಡುತ್ತಿದ್ದ ಆರೋಪಿಯನ್ನು ಸಂಜಯನಗರ ಪೊಲೀಸರು ಬಂಧಿಸಿದ್ದಾರೆ. ಚಂದ್ರಾ ಲೇಔಟ್​ನ ಗಂಗೊಂಡನಹಳ್ಳಿ ನಿವಾಸಿ ಸೈಯದ್ ಸಾದಿಕ್ ಸಲೀಂ (33) ಬಂಧಿತ. ಆರೋಪಿಯಿಂದ 6.4 ಲಕ್ಷ ರೂ. ಮೌಲ್ಯದ 140 ಗ್ರಾಂ ಚಿನ್ನಾಭರಣ ಮತ್ತು ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆ.7ರಂದು ಮಧ್ಯಾಹ್ನ 3 ಗಂಟೆಯಲ್ಲಿ ಮಹಿಳೆಯೊಬ್ಬರು ನಾಗಶೆಟ್ಟಿಹಳ್ಳಿಯ ದೇವಸ್ಥಾನದ ಬಳಿ ದ್ವಿಚಕ್ರವಾಹನ ನಿಲುಗಡೆ ಮಾಡಿ ಹೋಗಿದ್ದರು. ಸಂಜೆ ವೇಳೆಗೆ ಕಳ್ಳತನವಾಗಿತ್ತು. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು. ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿದ್ದ ದೃಶ್ಯಗಳನ್ನು ಪರಿಶೀಲಿಸಿದಾಗ ಆರೋಪಿಯ ಮುಖಚಹರೆ ಪತ್ತೆಯಾಗಿತ್ತು. ಅದನ್ನು ಆಧರಿಸಿ ಶೋಧ ನಡೆಸಿದಾಗ ಆರೋಪಿ ಸೈಯದ್ ಸಿಕ್ಕಿಬಿದ್ದಿದ್ದಾನೆ.

ಶಿವಮೊಗ್ಗ ಮೂಲದವನಾದ ಸೈಯದ್ ದುಶ್ಚಟಗಳನ್ನು ಹೊಂದಿದ್ದು, ಮೋಜು ಮಾಡಲು ಖರ್ಚಿಗೆ ಹಣವಿಲ್ಲದೇ ಇದ್ದಾಗ ದ್ವಿಚಕ್ರ ವಾಹನ ಮತ್ತು ಸರಗಳ್ಳತನ ಮಾಡುತ್ತಿದ್ದ. 15 ವರ್ಷಗಳಿಂದ ಕಳ್ಳತನದಲ್ಲಿ ತೊಡಗಿದ್ದ. ಪ್ರಯಾಣಿಕನ ಸೋಗಿನಲ್ಲಿ ಹೆಚ್ಚು ಜನರು ತುಂಬಿರುವ ಬೋಗಿಗಳನ್ನು ಹತ್ತುತ್ತಿದ್ದ. ಈ ವೇಳೆ ಮಹಿಳೆಯರ ಸರ ದೋಚಿ ಪರಾರಿಯಾಗುತ್ತಿದ್ದ.

ಆರೋಪಿಯ ವಿಚಾರಣೆಯಿಂದ ಬೆಂಗಳೂರು ಗ್ರಾಮಾಂತರ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ 2 ಸರಗಳ್ಳತನ, 1 ಪರ್ಸ್ ಕಳವು ಪ್ರಕರಣ ಪತ್ತೆಯಾಗಿವೆ. 2006ರಲ್ಲಿ ಸಂಜಯನಗರ ಮತ್ತು ಬಾಣಸವಾಡಿಯಲ್ಲಿ ದರೋಡೆ ಪ್ರಕರಣಗಳಲ್ಲಿ, ಸಿಟಿ ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಾಗೂ ಕಲಾಸಿಪಾಳ್ಯದಲ್ಲಿ ಪರ್ಸ್ ಕಳವು, ಸುದ್ದಗುಂಟೆಪಾಳ್ಯದಲ್ಲಿ 1 ಮನೆಗಳ್ಳತನ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿವೆ. 2008ರಲ್ಲಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ದರೋಡೆ ಮಾಡಿ 2 ವರ್ಷ ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.