ಎಚ್.ಡಿ.ಕೋಟೆ: ಕಳ್ಳತನ ಮಾಡಿದ ಚಿನ್ನವನ್ನು ಬ್ಯಾಂಕ್‌ನಲ್ಲಿ ಗಿರವಿ ಇಡಲು ಹೋದ ಕಳ್ಳ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡಿದ್ದಾನೆ.
ಅಣ್ಣೂರು ಗ್ರಾಮದ ನಿವಾಸಿ ಪಾಲಾಕ್ಷ ಪೊಲೀಸರಿಗೆ ಸಿಕ್ಕಿಬಿದ್ದ ಕಳ್ಳ. ಅ.20 ರಂದು ತಾಲೂಕಿನ ಬೊಪ್ಪನಹಳ್ಳಿ ಗ್ರಾಮದ ಪುಟ್ಟೇಗೌಡರ ಮಗ ಮಹಾದೇವ (ಹಾಲಿ ವಾಸ ಗಣೇಶ್ ಪುರ ಗ್ರಾಮದ ತೋಟದ ಮನೆ) ಮನೆಯಲ್ಲಿ 3 ಲಕ್ಷ ರೂ. ಬೆಲೆಬಾಳುವ 24 ಗ್ರಾಂ ಚಿನ್ನದ ಸರ, 8 ಗ್ರಾಂ. ಚಿನ್ನದ ಓಲೆ ಕಳ್ಳತನ ಆಗಿದ್ದು ಮನೆಯ ಮಾಲಿಕ ಎಚ್.ಡಿ.ಕೋಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ದೂರು ದಾಖಲಿಸಿಕೊಂಡ ಪೊಲೀಸ್ ಇನ್‌ಸ್ಪೆಕ್ಟರ್ ಗಂಗಾಧರ್ ಅವರು ಖದೀಮನ ಪತ್ತೆಗೆ ಯೋಗೇಶ್ ಮತ್ತು ಸೈಯದ್ ಕಬೀರ್ ಉದ್ದೀನ್ ಎಂಬ ಇಬ್ಬರು ಪೊಲೀಸ್ ಸಿಬ್ಬಂದಿ ತಂಡ ರಚನೆ ಮಾಡಿ ಬಲೆ ಬೀಸಿದ್ದ್ದರು.
ಅಣ್ಣೂರು ಗ್ರಾಮದಲ್ಲಿರುವ ಕಾವೇರಿ ಗ್ರಾಮೀಣ ಬ್ಯಾಂಕ್ ಗೆ ಪಾಲಾಕ್ಷ ಎಂಬ ವ್ಯಕ್ತಿ ಶುಕ್ರವಾರ ಚಿನ್ನ ಗಿರವಿ ಇಡಲು ಹೋದಾಗ ಬ್ಯಾಂಕ್ ಅಧಿಕಾರಿಗಳು ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಬ್ಯಾಂಕ್‌ಗೆ ತೆರಳಿದ ಪೊಲೀಸರು ಚಿನ್ನ ಗಿರವಿ ಇಡಲು ಬಂದಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮಹದೇವು ಅವರ ಮನೆಯಲ್ಲಿ ಚಿನ್ನಾಭರಣ ಕಳವು ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ. ಬಳಿಕ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇದೇ ಸಂದರ್ಭದಲ್ಲಿ ಪಿಎಸ್‌ಐ ಸುರೇಶ್ ನಾಯಕ, ಸಿಬ್ಬಂದಿ ಮಹೇಶ್, ಗವಿಗೌಡ, ವಾಹನ ಚಾಲಕ ನಾಗರಾಜು ಇದ್ದರು.