ಜಿಲ್ಲೆ

50 ಮನೆಗೆ ಕನ್ನ ಹಾಕಿದ್ದ ಕಳ್ಳ ಸಿಕ್ಕಿಬಿದ್ದ

vinaymk1969

ಬೆಂಗಳೂರು: ಚಿನ್ನಾಭರಣ ಕಳ್ಳ ಪೊಲೀಸರ ಬಲೆಗೆ ಬಿದ್ದಿದ್ದು, ಆರೋಪಿಯಿಂದ 27 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿಯ ವಸ್ತು, ಬೈಕ್, ಕಾರು ವಶಪಡಿಸಿಕೊಳ್ಳಲಾಗಿದೆ. ಮಂಡ್ಯ ಮೂಲದ ಮಂಜ ಅಲಿಯಾಸ್ ಪುಳಂಗ ಮಂಜ (28) ಬಂಧಿತ. ಮೋಜಿನ ಜೀವನ ನಡೆಸುತ್ತಿದ್ದ ಆರೋಪಿ ಮಂಜ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ. ಹಣಕ್ಕಾಗಿ ಮನೆಗಳ್ಳತನ ಮಾಡುವುದನ್ನೇ ಕಸುಬು ಮಾಡಿಕೊಂಡಿದ್ದ. ಲಾಕ್​ಡೌನ್ ಸಂದರ್ಭದಲ್ಲಿ ಊರಿಗಳಿಗೆ ಹೋಗಿದ್ದ ಜನರ ಮನೆಗಳನ್ನು ಗುರಿಯಾಗಿಸಿಕೊಂಡು ಕೃತ್ಯಕ್ಕೆ ಇಳಿದಿದ್ದ. 50ಕ್ಕೂ ಹೆಚ್ಚು ಮನೆಗಳಲ್ಲಿ ಕೃತ್ಯ ನಡೆಸಿದ್ದ.

ಶ್ರೀಮಂತನೆಂದು ಬಿಂಬಿಸಿ ಕೊಂಡಿದ್ದ: ಆರೋಪಿಯು ನಗರದಲ್ಲಿ ಬಾಡಿಗೆ ಮನೆಯನ್ನು ಬದಲಾಯಿಸುತ್ತಿದ್ದ. ಈ ವೇಳೆ ಹೊಸಬರ ಜತೆ ಸ್ನೇಹ ಬೆಳೆಸುತ್ತಿದ್ದ. ಅವರ ಮುಂದೆ, ಊರಿನಲ್ಲಿ ತನ್ನದು ಶ್ರೀಮಂತ ಕುಟುಂಬ ಎಂದು ಬಿಂಬಿಸಿಕೊಂಡಿದ್ದ. ಆರ್ಥಿಕ ಸಮಸ್ಯೆ ಇದೆ ಎಂದು ಹೇಳಿ ತಾನು ಕದ್ದ ಚಿನ್ನಾಭರಣಗಳನ್ನು ಸ್ನೇಹಿತರ ಮುಖಾಂತರ ಅಡಮಾನವಿರಿಸಿ ಹಣ ಪಡೆಯುತ್ತಿದ್ದ. ಹಣವನ್ನು ಯುವತಿಯರ ಜತೆ ಸುತ್ತಾಟ, ಜೂಜಾಟ ಇನ್ನಿತರ ಮೋಜಿಗೆ ಖರ್ಚು ಮಾಡುತ್ತಿದ್ದ.

20 ಕೇಸ್​ಗಳಲ್ಲಿ ವಾರಂಟ್ ಜಾರಿ: ಆರೋಪಿ ಈ ಹಿಂದೆ 30ಕ್ಕೂ ಹೆಚ್ಚು ಮನೆಕಳ್ಳತನ ಪ್ರಕರಣಗಳಲ್ಲಿ ಸಿಕ್ಕಿ ಬಿದ್ದು ಜೈಲು ಶಿಕ್ಷೆ ಅನುಭವಿಸಿದ್ದಾನೆ. ಕಳೆದ ಜನವರಿಯಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದು ತನ್ನ ಚಾಳಿಯನ್ನು ಮುಂದá-ವರಿಸಿದ್ದ. ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. 20ಕ್ಕೂ ಹೆಚ್ಚು ಕೇಸ್​ಗಳಲ್ಲಿ ಆರೋಪಿಯ ಬಂಧನಕ್ಕೆ ನ್ಯಾಯಾಲಯ ವಾರಂಟ್ ಜಾರಿ ಮಾಡಿದೆ. ಇತ್ತೀಚೆಗೆ ನಡೆದಿದ್ದ ಮನೆಗಳ್ಳತನ ಪ್ರಕರಣದಲ್ಲಿ ತನಿಖೆ ಕೈಗೊಂಡಾಗ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದ ದೃಶ್ಯಗಳ ಪರಿಶೀಲನೆ ವೇಳೆ ಆರೋಪಿಯ ಮುಖಚಹರೆ ಗುರುತಿಸಲಾಗಿತ್ತು. ಅದರ ಆಧಾರದ ಮೇರೆಗೆ ತನಿಖೆ ಮುಂದುವರಿಸಿದಾಗ ಆರೋಪಿ ಸಿಕ್ಕಿಬಿದ್ದಿದ್ದಾನೆ ಎಂದು ಕೋರಮಂಗಲ ಪೊಲೀಸರು ತಿಳಿಸಿದ್ದಾರೆ.