ಜಿಲ್ಲೆ

ಮನೆ ಕಳವಿಗೆ ಬಂದವನಿಗೆ ಧರ್ಮದೇಟು

ಸೋಮನಾಥ ರೆಡ್ಡಿ

ನರಗುಂದ: ಮನೆ ಕಳ್ಳತನಕ್ಕೆ ಮುಂದಾಗಿದ್ದ ಮೂವರು ಕಳ್ಳರ ಪೈಕಿ ಒಬ್ಬನನ್ನು ಸಾರ್ವಜನಿಕರೇ ಹಿಡಿದು ವಿದ್ಯುತ್ ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಥಳಿಸಿ, ಪೊಲೀಸರಿಗೆ ಒಪ್ಪಿಸಿದ ಘಟನೆ ಪಟ್ಟಣದಲ್ಲಿ ಸೋಮವಾರ ರಾತ್ರಿ 1 ಗಂಟೆ ಸುಮಾರಿಗೆ ನಡೆದಿದೆ.

ಪಟ್ಟಣದ ಸರಸ್ವತಿನಗರ ಬಡಾವಣೆಯಲ್ಲಿ ಮನೆ ಕಳ್ಳತನಕ್ಕೆ ಮುಂದಾಗಿದ್ದ ಇಳಕಲ್ ಮೂಲದ ಕಳ್ಳನನ್ನು ಸ್ಥಳೀಯರು ಥಳಿಸಿದ್ದಾರೆ. ಜೂ. 23ರಂದು ಸರಸ್ವತಿನಗರ, ನವೋದಯ ನಗರ ಬಡಾವಣೆಗಳಲ್ಲಿ ಎರಡು ಮನೆ ಕಳ್ಳತನ ಮಾಡಿದ್ದ ದುಷ್ಕರ್ಮಿಗಳು ಮತ್ತೆರಡು ಮನೆ ಕಳ್ಳತನಕ್ಕೆ ವಿಫಲ ಯತ್ನ ನಡೆಸಿ ಪರಾರಿಯಾಗಿದ್ದರು.

ಬಹುತೇಕ ನೌಕರಸ್ಥರ ಕುಟುಂಬಗಳೇ ವಾಸಿಸುತ್ತಿರುವ ಈ ಎರಡು ಬಡಾವಣೆಗಳಲ್ಲಿ ಎರಡ್ಮೂರು ತಿಂಗಳ ಅವಧಿಯಲ್ಲಿ 10ಕ್ಕೂ ಹೆಚ್ಚು ಮನೆ ಕಳ್ಳತನವಾಗಿದ್ದು, ಸಾಕಷ್ಟು ವಿಫಲ ಪ್ರಯತ್ನಗಳು ನಡೆದಿವೆ.

ತಾಲೂಕಿನ ಮದಗುಣಕಿ ಗ್ರಾಮದ ಅಜ್ಜಪ್ಪ ದೊಡಮನಿ ಎಂಬುವರ ಮನೆಯಲ್ಲಿದ್ದ ತಿಜೋರಿಯನ್ನೇ ಹೊತ್ತೊಯ್ದಿದ್ದ ಕಳ್ಳರು ಬೆಳ್ಳಿ-ಬಂಗಾರ, 25 ಸಾವಿರ ರೂಪಾಯಿ ನಗದು ಕದ್ದು ತಿಜೋರಿಯನ್ನು ಹಳ್ಳದಲ್ಲಿ ಎಸೆದು ಪರಾರಿಯಾಗಿದ್ದರು.

ಕುರ್ಲಗೇರಿ ರಸ್ತೆಯ ಶ್ರೀಮಹಾಲಕ್ಷ್ಮೀ ಸ್ಟೀಲ್ ಅಂಗಡಿ ಮುಂಭಾಗದಲ್ಲಿ ಮಾರಾಟಕ್ಕೆ ಇಟ್ಟಿದ್ದ ನಾಲ್ಕೈದು ಟನ್ ಕಬ್ಬಿಣವನ್ನು ಸಿಸಿಟಿವಿ ಲೆಕ್ಕಿಸದೆ ರಾತ್ರಿ ವೇಳೆ ಗೂಡ್ಸ್ ವಾಹನವೊಂದರಲ್ಲಿ ಕದ್ದೊಯ್ದಿದ್ದಾರೆ.

ವಿಪರೀತ ಕಳ್ಳರ ಹಾವಳಿಗೆ ಬೇಸತ್ತಿದ್ದ ಸರಸ್ವತಿನಗರ ಬಡಾವಣೆಯ ಸಾರ್ವಜನಿಕರು ಸೋಮವಾರ ರಾತ್ರಿ ಹೊಂಚುಹಾಕಿ ಕುಳಿತಿದ್ದರು. ಈ ವೇಳೆ ಮೂವರು ಕಳ್ಳರು ಆಯಿಲ್ ಮಿಲ್ ರಸ್ತೆ ಮೂಲಕ ಬೈಕ್‌ನಲ್ಲಿ ಆಗಮಿಸಿ ಮನೆಕಳ್ಳತನ ಮಾಡಲು ಮುಂದಾಗುತ್ತಿರುವುದನ್ನು ಸೂಕ್ಷ್ಮವಾಗಿ ಗಮನಿಸಿ ಒಬ್ಬನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಸಾರ್ವಜನಿಕರ ಧರ್ಮದೇಟಿಗೆ ಸೆರೆಸಿಕ್ಕಿರುವ ಕಳ್ಳ ಮೂವರು ದರೋಡೆಗೆ ಬಂದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.